Advertisement

ಉಕ್ಕು ಉತ್ಪಾದನೆಗೆ ಪೈಪ್‌ಲೈನ್‌ನಲ್ಲಿ ಪೂರೈಕೆಯಾಗಲಿದೆ ಅದಿರು!

02:45 AM Jul 14, 2017 | Team Udayavani |

ಬಳ್ಳಾರಿ: ವಿದೇಶ ಅಥವಾ ಹೊರರಾಜ್ಯಗಳಿಂದ ಕಾರ್ಖಾನೆವರೆಗೆ ಅದಿರನ್ನು ತರಿಸಿಕೊಂಡು ಉಕ್ಕು ಉತ್ಪಾದನೆ ಮಾಡುವುದು ವೆಚ್ಚದಾಯಕವಾಗುತ್ತಿರುವುದರಿಂದ ವಿದೇಶಗಳಲ್ಲಿನ ತಂತ್ರಜ್ಞಾನದಂತೆ ಪೈಪ್‌ಲೈನ್‌ ಮೂಲಕ ಅದಿರನ್ನು ಆಮದು ಮಾಡಿಕೊಳ್ಳಲು ದೇಶದ ಪ್ರಮುಖ ಉಕ್ಕು ಕಂಪನಿ ಜಿಲ್ಲೆಯ ತೋರಣಗಲ್ಲು ಬಳಿ ಇರುವ ಜೆಎಸ್‌ಡಬ್ಲೂ ವಿಜಯನಗರ ವರ್ಕ್ಸ್ ಯೋಜನೆ ರೂಪಿಸಿದೆ.

Advertisement

ಜೆಎಸ್‌ಡಬ್ಲೂ ಕಂಪನಿಯು ಪೂರ್ವ ರಾಜ್ಯಗಳಾದ ಛತ್ತೀಸ್‌ಗಡ್‌, ಒಡಿಶಾ ರಾಜ್ಯಗಳಲ್ಲಿ ಕಡಿಮೆ ದರದಲ್ಲಿ ದೊರೆಯುವ ಕಬ್ಬಿಣದ ಅದಿರನ್ನು ಆಮದು ಮಾಡಿಕೊಳ್ಳಲು ಯೋಜನೆ ರೂಪಿಸಿದೆ. ಅವಶ್ಯವಿರುವ ಅದಿರನ್ನು ಕರ್ನಾಟಕದ ಬಂದರಿಗೆ ತಂದು ಅಲ್ಲಿಂದ ಪೈಪ್‌ಲೈನ್‌ ಮೂಲಕ ಸ್ಲರ್ರಿ (ತಿಳಿ ಕೆಸರು) ರೂಪದಲ್ಲಿ ವಿಜಯನಗರ ವಕ್‌Õìಗೆ ಬರುವಂತೆ ಯೋಜನೆ ಸಿದ್ಧಪಡಿಸಲಾಗಿದೆ.

ಸಂಕಷ್ಟದಲ್ಲಿ ರಾಜ್ಯ ಉಕ್ಕು ಉದ್ಯಮ:
ಸದ್ಯಕ್ಕೆ ರಾಜ್ಯದಲ್ಲಿ ಉಕ್ಕು ಉತ್ಪಾದನೆ ಸಂಕಷ್ಟದಲ್ಲಿದೆ. ಅಕ್ರಮ ಗಣಿಗಾರಿಕೆ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ ರಾಜ್ಯದ
ಒಟ್ಟು ಅದಿರು ಉತ್ಪಾದನೆಯನ್ನು ವಾರ್ಷಿಕ 30 ಮಿಲಿಯನ್‌ ಟನ್‌ಗೆ ಸೀಮಿತಗೊಳಿಸಿದೆ. ರಾಜ್ಯದಲ್ಲಿ 27 ಮಿಲಿಯನ್‌ ಟನ್‌ ಅದಿರು ಮಾತ್ರ ದೊರೆಯುತ್ತಿದೆ. ಇದರಿಂದ ಲಭ್ಯವಿರುವ ಅದಿರನ್ನು ಬಳಸಿಕೊಂಡು ಕಾರ್ಖಾನೆಗಳನ್ನು ನಡೆಸುವುದು ಕಷ್ಟ. ಇದರಿಂದ ಕೋಟ್ಯಂತರ ರೂ. ಬಂಡವಾಳ ಹೂಡಿರುವ ಕಂಪನಿಗಳು ನಷ್ಟ ಎದುರಿಸುತ್ತಿದ್ದು, ಕೆಲ ಕಂಪನಿಗಳು ಕಾರ್ಖಾನೆಗಳನ್ನು ಮುಚ್ಚಿದ್ದರೆ, ಕೆಲವು ಉತ್ಪಾದನೆಯನ್ನು ನಿಲ್ಲಿಸಿವೆ. ಹೀಗಾಗಿ ಕಂಪನಿಗಳು
ವಿದೇಶಗಳಿಂದ ಅಥವಾ ಹೊರರಾಜ್ಯಗಳಿಂದ ಅದಿರನ್ನು ತರಿಸಿಕೊಳ್ಳುವುದು ಅನಿವಾರ್ಯವಾಗಿದೆ.

ಉತ್ಪಾದನ ವೆಚ್ಚದಲ್ಲಿ ಇಳಿಕೆ: ವಿದೇಶ ಅಥವಾ ಹೊರರಾಜ್ಯಗಳಿಂದ ಅದಿರನ್ನು ರಾಜ್ಯದ ಬಂದರಿಗೆ ತರಿಸಿಕೊಂಡು ಅಲ್ಲಿಂದ ರಸ್ತೆ ಮಾರ್ಗವಾಗಿ ಟ್ರಕ್‌ ಅಥವಾ ರೈಲುಗಳ ಮೂಲಕ ಕಾರ್ಖಾನೆಗಳಿಗೆ ತಲುಪಿಸುವುದು ಹೆಚ್ಚು ವೆಚ್ಚದಾಯಕ. ಹಾಗಾಗಿ ಪೈಪ್‌ ಲೈನ್‌ ಮೂಲಕ ಅದಿರನ್ನು ಸಾಗಿಸಲು ಜೆಎಸ್‌ಡಬ್ಲೂ ಕಂಪನಿ ನಿರ್ಧರಿಸಿದೆ. ಈ ವಿಧಾನದಲ್ಲಿ ಭೂ ಸಾರಿಗೆ ಮೂಲಕ ಅದಿರು ಸಾಗಣೆಯ ಶೇ.15 ವೆಚ್ಚದಲ್ಲಿ ಪೈಪ್‌ಲೈನ್‌ ಮೂಲಕ ಅದಿರನ್ನು ಸಾಗಿಸಬಹುದು. ಈ
ಯೋಜನೆ ಕಾರ್ಯರೂಪಕ್ಕೆ ಬಂದರೆ ಉಕ್ಕು ಉತ್ಪಾದನಾ ವೆಚ್ಚದಲ್ಲಿ ಭಾರಿ ಇಳಿಕೆಯಾಗಿ ಸ್ಪರ್ಧಾತ್ಮಕ ಬೆಲೆಯಲ್ಲಿ ಉಕ್ಕು ದೊರೆಯುವ ನಿರೀಕ್ಷೆ ಇದೆ.

ಪ್ರಸ್ತುತ ಜೆಎಸ್‌ಡಬ್ಲೂ ವಿಜಯನಗರ ಸ್ಟೀಲ್‌ ವರ್ಕ್ಸ್ನಲ್ಲಿ ವಾರ್ಷಿಕ 12 ಮಿಲಿಯನ್‌ ಟನ್‌ ಉಕ್ಕು ಉತ್ಪಾದನೆಯಾಗುತ್ತಿದೆ. ಪೈಪ್‌ಲೈನ್‌ ಯೋಜನೆಯಿಂದ ಕಂಪನಿಗೆ ಅಗತ್ಯವಿರುವ ಅದಿರಿನ ಶೇ.50ರಷ್ಟು ಪ್ರಮಾಣ ಕಡಿಮೆ ಬೆಲೆಯಲ್ಲಿ, ಅತ್ಯಂತ ಪರಿಸರ ಸ್ನೇಹಿ ರೂಪದಲ್ಲಿ ಲಭ್ಯವಾಗಲಿದೆ ಎನ್ನುವ ಲೆಕ್ಕಾಚಾರವಿದೆ. ಅಂದಾಜು 2100 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಿದ್ದು, 24 ತಿಂಗಳಲ್ಲಿ ಪೈಪ್‌ ಲೈನ್‌ ಅಳವಡಿಕೆ ಕಾರ್ಯ ಪೂರ್ಣಗೊಳಿಸುವ ಗುರಿ ಇದೆ. ಆದರೆ ಯಾವ ಬಂದರಿನಿಂದ ಪೈಪ್‌ಲೈನ್‌ ಅಳವಡಿಸಿ ಕಾರ್ಖಾನೆಗೆ ಅದಿರು ಬರುವಂತೆ ಮಾಡಲಾಗುತ್ತದೆ ಎಂಬುದು ಮಾತ್ರ ಬಹಿರಂಗವಾಗಿಲ್ಲ.

Advertisement

ಮುಂಬೈನಲ್ಲಿ ಇತ್ತೀಚೆಗೆ ಡಾ.ಸಜ್ಜನ್‌ ಜಿಂದಾಲ್‌ ಅಧ್ಯಕ್ಷತೆಯಲ್ಲಿ ಜರುಗಿದ ಜೆಎಸ್‌ ಡಬ್ಲೂ ನಿರ್ದೇಶಕರ ಆಡಳಿತ ಮಂಡಳಿ ಸಭೆಯಲ್ಲಿ ಅದಿರು ಸ್ಲರ್ರಿಯನ್ನು ಪೈಪ್‌ ಲೈನ್‌ ಮೂಲಕ ಸಾಗಿಸುವ ಯೋಜನೆಗೆ ಅನುಮೋದನೆ ನೀಡಲಾಗಿದೆ.

– ಎಂ.ಮುರಳಿ ಕೃಷ್ಣ.

Advertisement

Udayavani is now on Telegram. Click here to join our channel and stay updated with the latest news.

Next