ಬೆಂಗಳೂರು: ಮುಂದಿನ ಎರಡು ವಾರಗಳಲ್ಲಿ ರಾಜಧಾನಿ ಯಲ್ಲಿ ಶಿಥಿಲಾವಸ್ಥೆಗೊಂಡಿರುವ ಕಟ್ಟಡಗಳ ಮರು ಸಮೀಕ್ಷೆ ನಡೆಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ ಎಲ್ಲಾ ವಲಯ ಜಂಟಿ ಆಯು ಕ್ತರು ಹಾಗೂ ಮುಖ್ಯ ಅಭಿಯಂತರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಶಿಥಿಲಾವಸ್ಥೆಯ ಲ್ಲಿರುವ ಕಟ್ಟಡಗಳನ್ನು ಸಮೀಕ್ಷೆ ಮಾಡುವ ಸಂಬಂಧ ಬುಧವಾರ ವರ್ಚುವಲ್ ಮೂಲಕ ಸಭೆ ನಡೆಸಿ, ನಗರದಲ್ಲಿ 2019ರಲ್ಲಿ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು ಸಮೀಕ್ಷೆ ಮಾಡಿರುವ ಬಗ್ಗೆ ಹಾಗೂ ಸಮೀಕ್ಷೆಯ ಪ್ರಕಾರ ಇದುವರೆಗೆ ಎಷ್ಟು ಕಟ್ಟಡಗಳಿಗೆ ನೋಟಿಸ್ ನೀಡಲಾಗಿದೆ, ಎಷ್ಟು ಕಟ್ಟಡಗಳನ್ನು ನೆಲಸಮ ಮಾಡಲಾಗಿದೆ ಎಂಬುದರ ಬಗ್ಗೆ ಆಯುಕ್ತರು ಎಂಟೂ ವಲಯಗಳಿಂದ ಮಾಹಿತಿ ಪಡೆದುಕೊಂಡರು.
ಇದೀಗ ಯೋಜನಾ ವಿಭಾಗದ ವಿಶೇಷ ಆಯುಕ್ತರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿಕೊಂಡು ಕಾರ್ಯಾ ಚರಣೆ ನಡೆಸಬೇಕು. ನಗರದಲ್ಲಿ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು ಪುನರ್ ಪರಿಶೀಲಿಸುವ ಸಂಬಂಧ ಆಯಾ ವಲಯಗಳಲ್ಲಿ ಸಂಬಂಧಪಟ್ಟ ಎಂಜಿನಿಯರ್ ಗಳು ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಸ್ಥಳಕ್ಕೆ ಭೇಟಿ ನೀಡಿ ಮರು ಪರಿಶೀಲಿಸಿ ನಿಖರ ಮಾಹಿತಿಯನ್ನು ನೀಡಬೇಕು.
ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಮರು ಸಮೀಕ್ಷೆ ನಡೆಸಿದ ಬಳಿಕ ಆ ಕಟ್ಟಡಗಳನ್ನು ನೆಲಸಮ ಮಾಡುವ ಸಲುವಾಗಿ 15 ದಿನಗಳಲ್ಲಿ ವಲಯವಾರು ಗುತ್ತಿಗೆದಾರರನ್ನು ನೇಮಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಭೆಯಲ್ಲಿ ಎಲ್ಲಾ ವಲಯ ವಿಶೇಷ ಆಯುಕ್ತರುಗಳು, ಜಂಟಿ ಆಯುಕ್ತರುಗಳು, ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರು, ಎಲ್ಲಾ ವಲಯ ಮುಖ್ಯ ಅಭಿಯಂತರರು, ಎಲ್ಲಾ ವಿಭಾಗೀಯ ಕಾರ್ಯಪಾಲಕ ಅಭಿಯಂತರರು ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
10 ಕಟ್ಟಡಗಳು ಮಾತ್ರ ನೆಲಸಮ
ನಗರದಲ್ಲಿ 2019ರಲ್ಲಿ ಮಾಡಿದ್ದ ಸಮೀಕ್ಷೆಯಲ್ಲಿ ಗುರುತಿಸಿದ್ದ 185 ಶಿಥಿಲಾವಸ್ಥೆಯ ಕಟ್ಟಡಗಳ ಪೈಕಿ ಈಗಾಗಲೇ 10 ಕಟ್ಟಡಗಳನ್ನು ನೆಲಸಮ ಮಾಡಿದೆ. ಬಾಕಿ 175 ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಮಾಲೀಕರಿಗೆ ನೋಟಿಸ್ ನೀಡಲು ವಲಯ ಆಯುಕ್ತರು ಹಾಗೂ ವಲಯ ಜಂಟಿ ಆಯುಕ್ತರುಗಳಿಗೆ ಸೂಚನೆ ನೀಡಿದರು.