ಪಣಜಿ: ಗೋವಾದ ಬಾಳ್ಳಿಯಲ್ಲಿ ಸಂಭವಿಸಿದ ಬಾಲರಥ ಶಾಲಾ ಬಸ್ ಅಪಘಾತದ ಕುರಿತು ವಿಸ್ತೃತ ತನಿಖೆ ನಡೆಸಲು ಟ್ರಾಫಿಕ್ ಪೊಲೀಸ್, ಲೋಕೋಪಯೋಗಿ ಇಲಾಖೆ ಮತ್ತು ಶಿಕ್ಷಣ ಇಲಾಖೆಗೆ ಆದೇಶಿಸಲಾಗಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾಹಿತಿ ನೀಡಿದ್ದಾರೆ.
ಬಸ್ ನಲ್ಲಿ 34 ವಿದ್ಯಾರ್ಥಿಗಳಿದ್ದು, 17 ವಿದ್ಯಾರ್ಥಿಗಳನ್ನು ಚಿಕಿತ್ಸೆಗಾಗಿ ದಕ್ಷಿಣ ಗೋವಾ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ವಿದ್ಯಾರ್ಥಿಗಳ ತಲೆಗೆ ಗಾಯವಾಗಿದೆ. ಅವರ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ ಎಂದು ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಪಘಾತದಲ್ಲಿ ಒಟ್ಟು ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಚಾಲಕನ ನಿಯಂತ್ರಣ ತಪ್ಪಿ ವಾಹನ ಅಪಘಾತ ಸಂಭವಿಸಿದೆ. ಅಪಘಾತದ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಅಪಘಾತದ ಕುರಿತು ಪಣಜಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಾವಂತ್, ಅಪಘಾತದ ಬಗ್ಗೆ ವಿವರವಾದ ತನಿಖೆ ನಡೆಸುವಂತೆ ಟ್ರಾಫಿಕ್ ಪೋಲಿಸ್, ಪಿಡಬ್ಲ್ಯೂಡಿ ಮತ್ತು ಶಿಕ್ಷಣ ಇಲಾಖೆಗಳಿಗೆ ಸೂಚಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡ ವಿದ್ಯಾರ್ಥಿಗಳಿಗೆ ಎಲ್ಲ ಅಗತ್ಯ ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದರು.
ಮುಂದುವರೆದು ಮಾತನಾಡಿ, ಈ ಬಸ್‍ನಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಮಿತಿ ಇದೆ. ಆದರೆ ಶಾಲಾ ಆಡಳಿತ ಮಂಡಳಿ ಈ ಬಗ್ಗೆ ಗಮನ ಹರಿಸುತ್ತಿಲ್ಲ. ಅಂತಹ ಘಟನೆಗಳನ್ನು ತಪ್ಪಿಸಲು ನೀತಿಯನ್ನು ಅಭಿವೃದ್ಧಿಪಡಿಸಿ. ಈ ಅಪಘಾತ ದುರದೃಷ್ಟಕರ. ವಿವರವಾದ ವರದಿ ಕೇಳಿದ್ದೇನೆ. ಬಾಲ ರಥ ಬಸ್ಸುಗಳ ನಿಯಮಿತ ನಿರ್ವಹಣೆಗಾಗಿ ನಾವು ಹಣವನ್ನು ಒದಗಿಸುತ್ತೇವೆ. ಶಾಲಾ ಆಡಳಿತ ಮಂಡಳಿ ಬಸ್ ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು ಎಂದರು.