Advertisement

ಅಧಿಕಾರಿಗಳ ಅಮಾನತಿಗೆ ಆದೇಶ

04:04 PM Feb 05, 2018 | Team Udayavani |

ರಾಯಚೂರು: ಕೊಳೆಗೇರಿ ಮಂಡಳಿಯಲ್ಲಿ 38 ಕೋಟಿ ರೂ. ಅನುದಾನವಿದ್ದರೂ ಬಳಸದೇ ನಿರ್ಲಕ್ಷ್ಯ ತೋರಿದ ಮಂಡಳಿಯ ಇಇ, ಎಇಇ ಅವರನ್ನು ಅಮಾನತುಗೊಳಿಸಲು ಆದೇಶ ನೀಡಲಾಗಿದೆ ಎಂದು ಸಾರಿಗೆ ಇಲಾಖೆ ಹಾಗೂ
ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಎಂ. ರೇವಣ್ಣ ತಿಳಿಸಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ರವಿವಾರ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ ದರು. ಕೊಳೆಗೇರಿಗಳ ಪ್ರಗತಿಗೆ ಸರ್ಕಾರ ಕೋಟ್ಯಂತರ ಹಣ ನೀಡಿದೆ. ಆದರೆ, ಅಧಿಕಾರಿಗಳು ಮಾತ್ರ ಹಣವನ್ನು ಯೋಜನೆಗಳಿಗೆ ಬಳಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ಫಲಾನುಭವಿಗಳನ್ನು ಆಯ್ಕೆ ಮಾಡಿಲ್ಲ. ಹೀಗಾಗಿ ಕ್ರಮಕ್ಕೆ ಸೂಚನೆ ನೀಡಲಾಗಿದೆ.

ಲೋಕೋಪಯೋಗಿ ಇಲಾಖೆಯಲ್ಲೂ 350 ಕೋಟಿ ರೂ. ಅನುದಾನವಿದ್ದು, ಸಮರ್ಪಕವಾಗಿ ಬಳಸಿಕೊಳ್ಳಲು ಸೂಚನೆ ನೀಡಲಾಗಿದೆ ಎಂದರು.

ಜೆಸ್ಕಾಂ ಇಲಾಖೆ ಅಧಿಕಾರಿಗಳಿಗೂ ನಿರ್ಲಕ್ಷ್ಯ ಧೋರಣೆ ಅನುಸರಿಸದಂತೆ ಸೂಕ್ತ ಎಚ್ಚರಿಕೆ ನೀಡಲಾಗಿದೆ. ನಗರದಲ್ಲಿ ಈ ಹಿಂದೆ ಆಗದಂಥ ಅಭಿವೃದ್ಧಿಯನ್ನು ಕಾಂಗ್ರೆಸ್‌ ಸರ್ಕಾರ ಮಾಡುತ್ತಿದೆ. ನಗರದಲ್ಲಿ ಮೂರು ಇಂದಿರಾ ಕ್ಯಾಂಟೀನ್‌ಗಳ ಸ್ಥಾಪನೆ ಕಾಮಗಾರಿ ಚುರುಕಾಗಿ ನಡೆಯುತ್ತಿದೆ. ಅಮೃತ ಯೋಜನೆಯಡಿ ವಿವಿಧ ಕಾಮಗಾರಿಗಳು ಉತ್ತಮ ರೀತಿಯಲ್ಲಿ ನಡೆದಿವೆ ಎಂದು ವಿವರಿಸಿದರು.

ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಈಗಾಗಲೇ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಂಡಿದ್ದಾರೆ. ಕೆರೆಗಳ ನವೀಕರಣಕ್ಕೆ, ಹೂಳೆತ್ತಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಉದ್ಯೋಗ ಖಾತ್ರಿಯಡಿ ಜಿಲ್ಲೆಯಲ್ಲಿ ಮಾನವ ದಿನಗಳ ಸೃಜನೆ ಹೆಚ್ಚಾಗಿದೆ ಎಂದರು.

Advertisement

ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗಾಗಿ ಮುಂದಿನ ಶಿಕ್ಷಕರ ನೇಮಕದಲ್ಲಿ ಅತೀ ಹೆಚ್ಚು ಮೆರಿಟ್‌ ಪಡೆದವರನ್ನು ಈ ಭಾಗದಲ್ಲಿ ನೇಮಿಸಲಾಗುವುದು. ಸರ್ಕಾರಿ ಶಾಲೆಗಳಲ್ಲೂ ಉತ್ತಮ ಶಿಕ್ಷಣ ಸಿಗುತ್ತದೆ ಎಂಬ ಭಾವನೆ ಮೂಡಿಸಲು ಜಿಲ್ಲಾಡಳಿತ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ ಎಂದು ತಿಳಿಸಿದರು. 

ಜಿಲ್ಲಾ ಉತ್ಸವ ನಡೆಸಬೇಕು ಎಂಬ ಬೇಡಿಕೆ ಬಹು ದಿನಗಳಿಂದ ಇದೆ. ಹೈ-ಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಅನುದಾನ ಪಡೆದು ಉತ್ಸವ ನಡೆಸುವ ಚಿಂತನೆ ನಡೆದಿದೆ ಎಂದು ತಿಳಿಸಿದರು. ಸಂಸದ ಬಿ.ವಿ. ನಾಯಕ, ವಿಧಾನ ಪರಿಷತ್‌ ಸದಸ್ಯ ಎನ್‌.ಎಸ್‌. ಬೋಸರಾಜ, ಜಿಲ್ಲಾಧಿಕಾರಿ ಬಗಾದಿ ಗೌತಮ್‌, ಜಿಪಂ ಸಿಇಒ ಅಭಿರಾಂ ಜಿ.ಶಂಕರ, ಎಡಿಸಿ ಗೋವಿಂದರೆಡ್ಡಿ ಸೇರಿ ಇತರರಿದ್ದರು.
 
ಜಿಲ್ಲಾ ಉತ್ಸವ ಆಚರಣೆಗೆ ಕರವೇ ಒತ್ತಾಯ 
ರಾಯಚೂರು: ರಾಯಚೂರು ಜಿಲ್ಲಾ ಉತ್ಸವ ಆಚರಣೆಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣ ಕಾರ್ಯಕರ್ತರು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಎಂ ರೇವಣ್ಣ ಅವರಿಗೆ ಮನವಿ ಸಲ್ಲಿಸಿದರು. 

12 ವರ್ಷಗಳ ಹಿಂದೆ ಜಿಲ್ಲಾಧಿಕಾರಿ ತುಷಾರ ಗಿರಿನಾಥ ಹಾಗೂ ಶಾಸಕ ಎ.ಪಾಪಾರೆಡ್ಡಿ ಅಧ್ಯಕ್ಷತೆಯಲ್ಲಿ ಉತ್ಸವ ನಡೆಸಲಾಗಿತ್ತು. ಅದಾದ ನಂತರ ಈವೆರೆಗೆ ಉತ್ಸವ ಆಚರಿಸಿಲ್ಲ. ಈ ಕುರಿತು ಸಂಘಟನೆ ಹೋರಾಟಗಳ ಮೂಲಕ
ಜಿಲ್ಲಾಡಳಿತದ ಗಮನಕ್ಕೂ ತರಲಾಗಿದೆ. ಆದರೂ ಆಚರಿಸಿಲ್ಲ. ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವ ತನ್ವೀರ್‌ ಸೇಠ್ಠ… ಅವರಿಗೂ ಮನವಿ ಮಾಡಿದಾಗ ಜಿಲ್ಲಾ ಉತ್ಸವಕ್ಕಾಗಿ ಐದು ಕೋಟಿ ಅನುದಾನ ಮೀಸಲಿಡಲಾಗಿದೆ ಎಂದಿದ್ದರು. ಹೀಗಾಗಿ ಕೂಡಲೇ ಜಿಲ್ಲಾ ಉತ್ಸವ ಆಚರಿಸುವಂತೆ ಒತ್ತಾಯಿಸಿದರು. 

ಸಂಘಟನೆ ಜಿಲ್ಲಾಧ್ಯಕ್ಷ ವಿನೋದ ರೆಡ್ಡಿ, ಕಾರ್ಯಕರ್ತರಾದ ಕೊಂಡಪ್ಪ, ಚಾಂದ ಪಾಷಾ, ಹೊನ್ನಪ್ಪ, ಸಾದಿಕ್‌, ಫಿರೋಜ್‌, ಮಂಜು ಕಳಸ, ಟಿ.ವಿರೂಪಾಕ್ಷಿ, ಮೌಲಪ್ಪ, ರಾಜು, ಅಂಜಿ, ನರಸಿಂಹಲು, ಸತ್ಯಪ್ಪ, ಈಶಪ್ಪ, ಅಬೂಬ್‌ಕರ್‌ ಇತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next