Advertisement

Anti-Rabies: ಉಚಿತ ಆ್ಯಂಟಿ ರೇಬೀಸ್‌ ವ್ಯಾಕ್ಸಿನ್‌ ನೀಡಲು ಆದೇಶ

12:06 AM Oct 15, 2023 | Team Udayavani |

ಕಡಬ: ಪ್ರಾಣಿ ಕಡಿತಕ್ಕೊಳಗಾದವರಿಗೆ ರೇಬೀಸ್‌ ಚಿಕಿತ್ಸೆಗಾಗಿ ಆ್ಯಂಟಿ ರೇಬೀಸ್‌ ವ್ಯಾಕ್ಸಿನ್‌ (ಎಆರ್‌ವಿ) ಹಾಗೂ ರೇಬೀಸ್‌ ಇಮ್ಯುನೋಗ್ಲಾಬಿಲಿನ್‌ (ಆರ್‌ಐಜಿ) ವ್ಯಾಕ್ಸಿನ್‌ಗಳನ್ನು ರಾಜ್ಯದ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡುವಂತೆ ಸರಕಾರ ಆದೇಶಿಸಿದ್ದರೂ ಜಿಲ್ಲೆಯ ಹೆಚ್ಚಿನ ಸರಕಾರಿ ಆಸ್ಪತ್ರೆಗಳಲ್ಲಿ ವ್ಯಾಕ್ಸಿನ್‌ ನೀಡಲು ಇನ್ನೂ ಶುಲ್ಕ ಪಡೆಯುತ್ತಿರುವ ಬಗ್ಗೆ ದೂರುಗಳು ವ್ಯಕ್ತವಾಗುತ್ತಿವೆ.

Advertisement

ರೇಬೀಸ್‌ ಎನ್ನುವುದು ಮಾರಣಾಂತಿಕ ಕಾಯಿಲೆಯಾಗಿದ್ದರೂ ಸಮಯೋಚಿತ ಮತ್ತು ಸೂಕ್ತ ಚಿಕಿತ್ಸೆಯಿಂದ ರೋಗಿಯ ಪ್ರಾಣವನ್ನು ಉಳಿಸಬಹುದು. 2030ರ ವೇಳೆಗೆ ನಾಯಿ ಕಡಿತದಿಂದ ಬರುವ ರೇಬೀಸ್‌ನ ನಿರ್ಮೂಲನೆ ಮಾಡುವುದು ರಾಷ್ಟ್ರೀಯ ರೇಬೀಸ್‌ ನಿಯಂತ್ರಣ ಕಾರ್ಯಕ್ರಮದ ಧ್ಯೇಯವಾಗಿದೆ.

ಈ ಕಾಯಿಲೆಯಿಂದ ಜೀವ ರಕ್ಷಿಸಬಲ್ಲ ಔಷಧಗಳಾದ ಆ್ಯಂಟಿ ರೇಬೀಸ್‌ ವ್ಯಾಕ್ಸಿನ್‌ (ಎಆರ್‌ವಿ) ಹಾಗೂ ರೇಬೀಸ್‌ ಇಮ್ಯುನೋಗ್ಲಾಬಿಲಿನ್‌ (ಆರ್‌ಐಜಿ) ವ್ಯಾಕ್ಸಿನ್‌ಗಳನ್ನು ರಾಜ್ಯದ ಎಲ್ಲ ಸರಕಾರಿ ಆಸ್ಪತೆಗಳಲ್ಲಿ ಎಪಿಎಲ್‌/ಬಿಪಿಎಲ್‌ ಕಾರ್ಡ್‌ ಹೊಂದಿರುವ ಬಗ್ಗೆ ಪರಿಗಣಿಸದೇ ಎಲ್ಲ ಪ್ರಾಣಿ ಕಡಿತ ಪ್ರಕರಣಗಳಿಗೆ ಅಗತ್ಯಕ್ಕೆ ಅನುಗುಣವಾಗಿ ವ್ಯಾಕ್ಸಿನ್‌ ಒದಗಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ಅ. 5ರಂದು ಆದೇಶ ಹೊರಡಿಸಿದ್ದರು.

ಕೆಲವು ಸರಕಾರಿ ಆಸ್ಪತ್ರೆಗಳು ಈ ಆದೇಶನ್ನು ಪರಿಗಣಿಸಿದ್ದರೆ ಬಹುತೇಕ ಆಸ್ಪತ್ರೆಗಳು ವ್ಯಾಕ್ಸಿನ್‌ ನೀಡಲು ಇನ್ನೂ ಶುಲ್ಕ ಪಡೆಯುತ್ತಿರುವುದು ಕಂಡುಬಂದಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಈ ಬಗ್ಗೆ ಗಮನಹರಿಸುವಂತೆ ಸಾರ್ವಜನಿಕ ವಲಯದಲ್ಲಿ ಆಗ್ರಹ ವ್ಯಕ್ತವಾಗಿದೆ.

ಈ ಬಗ್ಗೆ ನಮಗೂ ದೂರುಗಳು ಬಂದಿವೆ. ಕೆಲವು ಸರಕಾರಿ ಆಸ್ಪತ್ರೆಗಳಲ್ಲಿ ಆದೇಶ ಜಾರಿಯಾಗಿರುವ ಬಗ್ಗೆ ತಿಳುವಳಿಕೆ ಇಲ್ಲದೇ ಶುಲ್ಕ ವಿಧಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಸರಕಾರದ ಆದೇಶ ಪರಿಪಾಲನೆ ಮಾಡುವ ಕುರಿತು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡಲಾಗುವುದು.
-ಡಾ| ತಿಮ್ಮಯ್ಯ, ಡಿಎಚ್‌ಒ, ಮಂಗಳೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next