ಬೆಂಗಳೂರು: ರಾಜ್ಯಾದ್ಯಂತ ತಲ್ಲಣ ಸೃಷ್ಟಿಸಿದ ಹಾಗೂ ರಾಜ್ಯ ರಾಜಕೀಯದಲ್ಲಿ ಚರ್ಚೆಗ್ರಾಸವಾಗಿರುವ ಐಎಂಎ ವಂಚನೆ ಪ್ರಕರಣ ತನಿಖೆಗೆ ಹಿರಿಯ ಐಪಿಎಸ್ ಅಧಿಕಾರಿ ಡಿಐಜಿ ಬಿ.ಆರ್.ರವಿಕಾಂತೇಗೌಡ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಆದೇಶಿಸಿದ್ದಾರೆ.
ಅಪರಾಧ ಮತ್ತು ತಾಂತ್ರಿಕ ಸೇವೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಡಾ ಎಂ.ಎ.ಸಲೀಂ ಅವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡ ಕಾರ್ಯನಿರ್ವಹಿಸಲಿದೆ.
ಈ ವಿಶೇಷ ತನಿಖಾ ತಂಡದಲ್ಲಿ ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಡಿಸಿಪಿ ಎಸ್.ಗಿರೀಶ್, ಸಿಸಿಬಿಯ ಸಹಾಯಕ ಪೊಲೀಸ್ ಆಯುಕ್ತ ಬಾಲರಾಜ್, ಸಿಐಡಿ ಡಿವೈಎಸ್‌ಪಿ ಕೆ.ರವಿಶಂಕರ್, ರಾಜ್ಯ ಗುಪ್ತಚರ ವಿಭಾಗದ ಆರ್.ಐ.ಖಾಸೀಂ, ಲೋಕಾಯುಕ್ತ ವಿಶೇಷ ತನಿಖಾ ತಂಡದ ಅಬ್ದುಲ್ ಖಾದರ್, ಇನ್‌ಸ್ಪೆಕ್ಟರ್‌ಗಳಾದ ಸಿ.ಆರ್.ಗೀತಾ,
ಎಲ್.ವೈ. ರಾಜೇಶ್, ಅಂಜನ್‌ಕುಮಾರ್, ಎನ್.ತನ್ವೀರ್ ಅಹ್ಮದ್, ಬಿ.ಕೆ. ಶೇಖರ್ ಹಾಗೂ ಪಿಎಸ್‌ಐ, ಹೆಡ್‌ಕಾನ್‌ಸ್ಟೆಬಲ್, ಕಾನ್‌ಸ್ಟೆಬಲ್‌ಗಳು ತನಿಖಾ ತಂಡದಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಅಗತ್ಯಬಿದ್ದಲ್ಲಿ ಎಸ್‌ಐಟಿ ಕೇಂದ್ರ ತನಿಖಾ ಸಂಸ್ಥೆಗಳ ನೆರವು ಪಡೆಯಬಹುದು ಎಂದು ಡಿಜಿಪಿ ಆದೇಶದಲ್ಲಿ ಸೂಚಿಸಿದ್ದಾರೆ.
ತನಿಖೆ ಆರಂಭ: ಡಿಜಿಪಿ ಅವರ ಆದೇಶದ ಬೆನ್ನಲ್ಲೇ ಡಿಐಜಿ ರವಿಕಾಂತೇಗೌಡ ತಮ್ಮ ತಂಡದ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದಾರೆ. ಡಿಸಿಪಿ ಗಿರೀಶ್ ಹಾಗೂ ಎಸಿಪಿ ಬಾಲರಾಜ್ ಅವರೊಂದಿಗೆ ಚರ್ಚೆ ನಡೆಸಿದ್ದು, ಕಮರ್ಷಿಯಲ್ ಸ್ಟ್ರೀಟ್ ಇನ್‌ಸ್ಪೆಕ್ಟರ್ ಬಿ.ಕೆ.ಶೇಖರ್ ಅವರಿಂದ ಪ್ರಕರಣದ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.
ಇದುವರೆಗೂ ಎಷ್ಟು ಪ್ರಕರಣಗಳು ದಾಖಲಾಗಿವೆ. ಎಷ್ಟು ಕೋಟಿ ರೂ. ಮೊತ್ತದಲ್ಲಿ ವಂಚನೆ ಆಗಿದೆ ಎಂಬೆಲ್ಲ ಮಾಹಿತಿಯನ್ನು ಪಡೆದುಕೊಂಡು ಕಾರ್ಯಾಚರಣೆ ಆರಂಭಿಸಿದ್ದಾರೆ.