Advertisement

ಎಚ್‌1ಎನ್‌1 ಹರಡುವಿಕೆ ತಡೆಗಟ್ಟಲು ಆದೇಶ

11:21 AM Oct 05, 2018 | Team Udayavani |

ಬೀದರ: ಎಚ್‌1ಎನ್‌1 ರೋಗ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯ ಆರೋಗ್ಯ ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಜಿಲ್ಲೆಯಲ್ಲಿ ಪ್ರಕರಣಗಳ ಪತ್ತೆಗೆ ಸಹಾಯವಾಣಿ ತೆರೆಯುವಂತೆ ಜಿಲ್ಲಾಧಿಕಾರಿ ಡಾ|
ಎಚ್‌.ಆರ್‌. ಮಹಾದೇವ ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಎಚ್‌1ಎನ್‌1 ಕುರಿತ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ನಗರದ ಬ್ರಿಮ್ಸ್‌ ಆಸ್ಪತ್ರೆಯಲ್ಲಿ ವಿಶೇಷ ಘಟಕ ತೆರೆದು ಪ್ರತ್ಯೇಕ ಚಿಕಿತ್ಸೆಗೆ ಸಕಲ ಸಿದ್ಧತೆ ಮಾಡಿಕೊಳ್ಳಬೇಕು. ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಆರೋಗ್ಯಾಧಿಕಾರಿಗಳು ಸಭೆ ನಡೆಸಿ, ಎಲ್ಲ ಅಂಗನವಾಡಿ, ಶಾಲೆಗಳಲ್ಲಿ ರೋಗದ ಮುನ್ನೆಚ್ಚರಿಕೆ, ಮಾಹಿತಿ ಹಾಗೂ ತಡೆಗಟ್ಟುವ ಕ್ರಮಗಳ ಕುರಿತು ತಿಳಿವಳಿಕೆ ನೀಡಬೇಕು ಎಂದರು.

ಜಿಲ್ಲೆಯ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಔಷಧದ ಜೊತೆಗೆ ವೈದ್ಯರ ಸೇವೆ ಲಭ್ಯವಾಗಬೇಕು. ಗ್ರಾಮೀಣ ಭಾಗದ ಜನರಿಗೆ ಹೆಚ್ಚು ಅರಿವು ಮೂಡಿಸಬೇಕು. ಕಂದಾಯ, ಪಂಚಾಯತ ಇಲಾಖೆ ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳನ್ನು
ಬಳಸಿಕೊಂಡು ತುರ್ತಾಗಿ ಎಲ್ಲ ಮುಂಜಾಗ್ರತೆಗಳನ್ನು ಅನುಸರಿಸಬೇಕು. ರೋಗ ಪೀಡಿತ ಪ್ರದೇಶಗಳಲ್ಲಿ ವಿಶೇಷ ಆಂದೋಲನದ ರೀತಿಯಲ್ಲಿ ಜನರಿಗೆ ರೋಗದ ಭಯ ಹೋಗಲಾಡಿಸುವ ತಿಳಿವಳಿಕೆ ನೀಡಬೇಲು. ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಅಗತ್ಯ ಔಷಧಿ ಹಾಗೂ ಪ್ರತ್ಯೇಕವಾಗಿ ಉಪಚರಿಸುವ ವಾರ್ಡ್‌ ರಚಿಸಬೇಕೆಂದು
ಸೂಚಿಸಿದರು.

ಪ್ರಮುಖ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಐಇಸಿ ಸಾಮಗ್ರಿ, ಚಿತ್ರಮಂದಿರಗಳಲ್ಲಿ ಸ್ಲೆ„ಡ್‌ ಮೂಲಕ ತಿಳಿವಳಿಕೆ ಮೂಡಿಸಲು ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಯಾರೊಬ್ಬರೂ ಕೂಡ ಸಕಾಲಕ್ಕೆ ಚಿಕಿತ್ಸೆ ಸಿಗದೇ ಮರಣಕ್ಕೆ ತುತ್ತಾಗಬಾರದು. ಪ್ರತೀ ವಾರಕ್ಕೊಮ್ಮೆ ರೋಗ ಹರಡುವಿಕೆ ಅವಧಿ ಮುಗಿಯುವವರೆಗೆ ಸಭೆ ನಡೆಸುವಂತೆ ತಿಳಿಸಿದರು. ಹೆಚ್‌1 ಎನ್‌1 ರೋಗ ಹರಡುವುದನ್ನು ತಡೆಗಟ್ಟಲು ಅಧಿಕಾರಿಗಳು ಶ್ರಮಿಸಬೇಕು. ಹಣದ ಕೊರತೆ ಇಲ್ಲ ಎಂದು ಹೇಳಿದರು.

ಸೂಕ್ಷ್ಮ ರೋಗಾಣು ಶಾಸ್ತ್ರಜ್ಞ ಹಾಗೂ ಜಿಲ್ಲಾ ಕಣ್ಗಾವಲು ಘಟಕದ ನೋಡಲ್‌ ಅಧಿಕಾರಿ ಸುಧೀಂದ್ರ ಕುಲಕರ್ಣಿ ಮಾತನಾಡಿ, ರೋಗ ಪೀಡಿತರಿಂದ ಗಂಟಲಿನ ಸ್ರಾವದ ಮಾದರಿ ಸಂಗ್ರಹಿಸಿ ಸೂಚಿತ ಪ್ರಯೋಗಾಲಯಕ್ಕೆ ಕಳುಹಿಸುವ ಮಾರ್ಗ ಸೂಚಿಗಳ ಬಗ್ಗೆ ಮಾಹಿತಿ ನೀಡಿದರು. ರೋಗ ಹರಡುವಿಕೆ ಕುರಿತು ಡಾ| ಮಹೇಶ ತೊಂಡಾರೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

Advertisement

ಏನು ಮಾಡಬೇಕು: ಸೋಂಕು ಪೀಡಿತರ ಸಂಪರ್ಕದಿಂದ ದೂರವಿರುವುದು. ಶಂಕಿತ ರೋಗಿಯು ಮನೆಯಲ್ಲಿಯೇ
ಪ್ರತ್ಯೇಕವಾಗಿರುವುದು. ವೈಯಕ್ತಿಕ ಸ್ವಚ್ಚತೆ ಕಾಪಾಡಿಕೊಳ್ಳುವುದು. ವಿಶೇಷವಾಗಿ ಆಗಾಗ್ಗೆ ಸಾಬೂನಿನಿಂದ ಕೈ ತೊಳೆದುಕೊಳ್ಳುವುದು. ಕೆಮ್ಮುವಾಗ ಮತ್ತು ಸೀನುವಾಗ ಮಾಸ್ಕ್, ಕೈ ವಸ್ತ್ರ, ಟಿಶ್ಯೂ ಹಾಳೆಗಳನ್ನು ಉಪಯೋಗಿಸುವುದು. ಪೌಷ್ಟಿಕ ಆಹಾರಗಳನ್ನು ಉಪಯೋಗಿಸುವುದು. ವಿಶ್ರಾಂತಿ ಪಡೆಯುವುದು. ಒತ್ತಡಗಳನ್ನು ನಿಭಾಯಿಸುವುದು. ಉಸಿರಾಟದ ತೊಂದರೆಯಾದಲ್ಲಿ ತಕ್ಷಣ ವೈದ್ಯರನ್ನು ಭೇಟಿ ಮಾಡಿ ಆರೋಗ್ಯ ತಪಾಸಣೆ ಮಾಡಿಸಿ ವೈದ್ಯರ ಸಲಹೆ ಪಡೆಯಬೇಕು ಎಂದರು.

ಏನು ಮಾಡಬಾರದು: ಸೋಂಕಿತರ ಕೈ ಕುಲುಕುವುದು, ನಿಕಟ ಸಂಪರ್ಕದಿಂದ ದೂರ ಇರಬೇಕು. ತಜ್ಞ ವೈದ್ಯರ ಸಲಹೆ ಇಲ್ಲದೇ ಔಷಧೋಪಚಾರ ಪಡೆಯಬಾರದು. ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು. ಆಸ್ಪಿರಿನ್‌ ಮಾತ್ರೆಗಳನ್ನು
ಮಕ್ಕಳಿಗೆ ನೀಡಬಾರದು.

ರೋಗ ಲಕ್ಷಣಗಳು: ಎಚ್‌1ಎನ್‌1 ರೋಗವು ಮನುಷ್ಯನಿಂದ ಮನುಷ್ಯನಿಗೆ ವೈರಾಣುಗಳಿಂದ ಸೋಂಕು ಹರಡುತ್ತದೆ. ಜ್ವರ, ಕೆಮ್ಮ, ತೀವ್ರವಾದ ಶೀತ, ಗಂಟಲು ನೋವು, ವಾಂತಿ, ಭೇದಿ ಮತ್ತು ಉಸಿರಾಟ ತೊಂದರೆ ಪ್ರಮುಖ ಲಕ್ಷಣಗಳು. ಈ ಲಕ್ಷಣಗಳು ಕಂಡು ಬರುವ ಜನರು ತಡಮಾಡದೆ ಆರೋಗ್ಯ ತಪಾಸಣೆಗೆ ಒಳಗಾಗಬೇಕು. ಈ ರೋಗಕ್ಕೆ ಸೂಕ್ತ ಚಿಕಿತ್ಸೆ ಇದ್ದು, ಸೂಕ್ತ ಮಯಕ್ಕೆ ಚಿಕಿತ್ಸೆ ಪಡೆದರೆ ರೋಗದಿಂದ ಮುಕ್ತಿ ಹೊಂದಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next