Advertisement

ವಿಕಿಪೀಡಿಯಾ ಮಾಹಿತಿ ಆಧರಿಸಿದ್ದ  ಆಯುಕ್ತರ ಆದೇಶ ರದ್ದು

07:15 AM Sep 18, 2017 | |

ಬೆಂಗಳೂರು: ವಿಕಿಪೀಡಿಯಾ ಮಾಹಿತಿ ಆಧರಿಸಿ “ರಕ್ತನಿಧಿ ಕೇಂದ್ರಗಳಲ್ಲಿ’ ಬಳಸುವ ರೆಫ್ರಿಜರೇಟರ್‌ ಮತ್ತಿತರ ಉಪಕರಣಗಳಿಗೆ ಶೇ.12.5 ಮೌಲ್ಯವರ್ಧಿತ ತೆರಿಗೆ ವಿಧಿಸಿದ್ದ ವಾಣಿಜ್ಯ ಇಲಾಖೆ ಆಯುಕ್ತರ ಆದೇಶವನ್ನು ರದ್ದುಗೊಳಿಸಿರುವ ಹೈಕೋರ್ಟ್‌, ಆಯುಕ್ತರ ಕಾರ್ಯ ವೈಖರಿಗೆ ಛೀಮಾರಿ ಹಾಕಿದೆ.

Advertisement

ವಾಣಿಜ್ಯ ತೆರಿಗೆ ಆಯುಕ್ತರ ಆದೇಶ ರದ್ದು ಕೋರಿ ರಕ್ತನಿಧಿ ಕೇಂದ್ರಗಳಿಗೆ ಅಗತ್ಯ ಉಪಕರಣ ಪೂರೈಸುವ ಖಾಸಗಿ ಕಂಪನಿಯೊಂದು ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ವಿನೀತ್‌ ಕೊಠಾರಿ ಅವರಿದ್ದ ಏಕಸದಸ್ಯ ಪೀಠ, ಆಯುಕ್ತರ ಆದೇಶವನ್ನು ರದ್ದುಗೊಳಿಸಿದೆ. ರಕ್ತನಿಧಿ ಕೇಂದ್ರಗಳಲ್ಲಿ ಬಳಕೆಯಾಗುವ ಉಪಕರಣಗಳಿಗೂ “ವೈದ್ಯಕೀಯ ಸಾಧನಗಳು, ಉಪಕರಣಗಳು, ಆಂತರಿಕ ಬಳಕೆ ಉಪಕರಣಗಳ ನಿಯಮಾವಳಿ 61ರಂತೆ ಶೇ.4 ತೆರಿಗೆ ವಿಧಿಸಬೇಕು ಎಂದು ಸೆ.11ರಂದು ತೀರ್ಪು ನೀಡಿದೆ.

ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರು ವಿಕಿಪೀಡಿಯಾದಲ್ಲಿನ ಮಾಹಿತಿ ಆಧರಿಸಿ ರಕ್ತನಿಧಿ ಕೇಂದ್ರಗಳ ಉಪಕರಣಗಳು ಹಾಗೂ ವೈದ್ಯಕೀಯ ಉಪಕರಣಗಳನ್ನು ಪ್ರತ್ಯೇಕಿಸಿ ನೋಡಿರುವುದರಿಂದಲೇ ಇಂತಹ ನಿಯಮಬಾಹಿರ ಆದೇಶ ಹೊರಡಿಸಲು ಸಾಧ್ಯವಾಗಿದೆ ಎಂದೂ ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಜತೆಗೆ ರಕ್ತ ಸಂರಕ್ಷಣೆಗೆ ರೆಫ್ರಿಜರೇಟರ್‌ ಹಾಗೂ ಇತರೆ ಉಪಕರಣಗಳನ್ನು ವಿಶೇಷ ವಿನ್ಯಾಸದಡಿ ರೂಪಿಸಲಾಗಿರುತ್ತದೆ ಎಂಬ ಅಂಶವನ್ನೂ ಪರಿಗಣಿಸದಿರುವುದು ಎದ್ದು ಕಾಣುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದೆ.

ರಕ್ತ ಅತ್ಯಮೂಲ್ಯವಾಗಿದ್ದು ಅದನ್ನು ಸುರಕ್ಷಿತವಾಗಿಡುವುದು, ಅಗತ್ಯವಿದ್ದವರಿಗೆ ಸಕಾಲದಲ್ಲಿ ಒದಗಿಸುವ ಪ್ರಕ್ರಿಯೆಗಳಲ್ಲಿ ಸಾಕಷ್ಟು ಸೂಕ್ಷ್ಮತೆ ಹಾಗೂ ಮುನ್ನೆಚ್ಚರಿಕೆ  ಕೈಗೊಳ್ಳಬೇಕಾಗಿರುತ್ತದೆ. ಅಲ್ಲದೆ ರಕ್ತನಿಧಿ ಕೇಂದ್ರಗಳು, ಆಸ್ಪತ್ರೆಗಳು, ಡಯಾಗ್ನಾಸ್ಟಿಕ್‌ ಕೇಂದ್ರಗಳು ಸಂಪರ್ಕ ಕೊಂಡಿಗಳಾಗಿ ಕಾರ್ಯನಿರ್ವಹಿಸಲಿವೆ. ಹೀಗಾಗಿ ರಕ್ತನಿಧಿ ಕೇಂದ್ರಗಳಲ್ಲಿ ಬಳಸುವ ಉಪಕರಣಗಳು ವೈದ್ಯಕೀಯ ಉಪಕರಣಗಳಾಗಿಯೇ ಪರಿಗಣಿತವಾಗಲಿವೆ ಎಂಬುದನ್ನು ಗ್ರಹಿಸದೇ ಹೊರಡಿಸಿರುವ ಆಯುಕ್ತರ ಆದೇಶ ಕಾನೂನುಬಾಹಿರ  ಎಂದು ನ್ಯಾಯಪೀಠ ತಿಳಿಸಿದೆ.

ರಕ್ತನಿಧಿ ಕೇಂದ್ರಗಳಿಗೆ ಉಪಕರಣಗಳನ್ನು ಮಾತ್ರ ಪೂರೈಸುವ ಅರ್ಜಿದಾರ ಕಂಪನಿ ಇತರೆ ಉಪಕರಣಗಳ ಮಾರಾಟದಲ್ಲಿ ತೊಡಗಿಸಿಕೊಂಡಿಲ್ಲ. ಅಲ್ಲದೆ ಇದೇ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಇತರ ಕಂಪನಿಗಳಿಗೆ ಮೌಲ್ಯವರ್ಧಿತ ತೆರಿಗೆ ವಿಧಿಸದ ಆಯುಕ್ತರು ಈ ಕಂಪನಿಗೆ ಮಾತ್ರ ವಿಧಿಸಿರುವ ಕ್ರಮ ಸರಿಯಾಗಿಲ್ಲ. ಈ ಪ್ರಕರಣದಲ್ಲಿ ಆಯುಕ್ತರು ಜವಾಬ್ದಾರಿಯುತವಾಗಿ ನಡೆದುಕೊಂಡಿಲ್ಲ. ಒಂದೇ ಇಲಾಖೆ ಭಿನ್ನ ಆದೇಶ ಹೊರಡಿಸುವುದು ಕಾನೂನು ಬಾಹಿರವಾಗಿದ್ದು  ಈ ಪ್ರಕರಣದಲ್ಲಿನ ಆಯುಕ್ತರ ಆದೇಶ ಕಾನೂನು ಮಾನ್ಯತೆ ಹೊಂದಿಲ್ಲ ಎಂದು ನ್ಯಾಯಪೀಠ ತಿಳಿಸಿದೆ. ಕೇಂದ್ರಗಳಲ್ಲಿ ಬಳಕೆಯಾಗುವ ರೆಫ್ರಿಜರೇಟರ್‌, ಪ್ಲಾಸ್ಮಾ ಎಕ್ಸಪ್ರಸರ್, ಕ್ರಯೋಬಾತ್ಸ್ ಸೇರಿದಂತೆ ಇತರೆ ಉಪಕರಣಗಳನ್ನೂ  ವೈದ್ಯಕೀಯ ಉಪಕರಣಗಳ ನಿಯಮಾವಳಿಗಳಿಗೆ ಅನ್ವಯವಾಗುವಂತೆ ಶೇ.4 ಮಾತ್ರ ತೆರಿಗೆ ವಿಧಿಸಬೇಕು ಎಂದು ಕಂದಾಯ ಇಲಾಖೆ ಸೇರಿದಂತೆ ಸಕ್ಷಮ ಪ್ರಾಧಿಕಾರಗಳಿಗೆ ನ್ಯಾಯಾಲಯ ಆದೇಶಿಸಿದೆ.

Advertisement

ಪ್ರಕರಣ ಏನು?
ಬೆಂಗಳೂರಿನ ಬಸವನಗುಡಿಯ ಆದಿತ್ಯ ಸರ್ಜಿಕಲ್‌ ಕಂಪನಿಯು ರಕ್ತನಿಧಿ ಕೇಂದ್ರಗಳಿಗೆ ರೆಫ್ರಿಜರೇಟರ್‌, ಕ್ರಯೋಬಾತ್‌ ಸೇರಿದಂತೆ ಇನ್ನಿತರೆ ಉಪಕರಣಗಳು ಸರಬರಾಜು ಮಾಡಿದ್ದು, ಈ ಉಪಕರಣಗಳು ವಿಕಿಪೀಡಿಯಾದ ವೈದ್ಯಕೀಯ ಉಪಕರಣಗಳ ಪಟ್ಟಿಯಲ್ಲಿಲ್ಲ. ಹಾಗಾಗಿ ಈ ಉಪಕರಣಗಳಿಗೆ ಶೇ.12.5 ಮೌಲ್ಯವರ್ಧಿತ ತೆರಿಗೆ ಪಾವತಿಸುವಂತೆ ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರು 2016ರ ಜೂನ್‌ 27ರಂದು ಆದೇಶ ಹೊರಡಿಸಿದ್ದರು. ಈ ಆದೇಶ ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದ ಕಂಪನಿ, ವಿಕಿಪೀಡಿಯಾದ ಮಾಹಿತಿ ಆಧರಿಸಿರುವ ವಾಣಿಜ್ಯ ಇಲಾಖೆ ಆಯುಕ್ತರ ಆದೇಶ ಕಾನೂನು ಬಾಹಿರವಾಗಿದ್ದು, ಆಯುಕ್ತರ ಆದೇಶ ರದ್ದುಪಡಿಸಬೇಕು ಎಂದು ಕೋರಿದ್ದರು.

– ಮಂಜುನಾಥ ಲಘುಮೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next