Advertisement

Order: ಬಾಕಿ ಹಣ ಕೊಡದ್ದಕ್ಕೆ ದಿಲ್ಲಿಯ ಹಿಮಾಚಲ ಭವನ ಹರಾಜು: ʼಕೈʼ ಸರಕಾರಕ್ಕೆ ಹಿನ್ನಡೆ

02:05 AM Nov 20, 2024 | Team Udayavani |

ಶಿಮ್ಲಾ: ಹಿಮಾಚಲ ಪ್ರದೇಶ ಕಾಂಗ್ರೆಸ್‌ ಸರಕಾರಕ್ಕೆ ಹಿನ್ನಡೆ ಎಂಬಂತೆ ದಿಲ್ಲಿಯಲ್ಲಿ ಇರುವ ಹಿಮಾಚಲ ಪ್ರದೇಶ ಭವನವನ್ನು ಹರಾಜು ಹಾಕುವಂತೆ ರಾಜ್ಯ ಹೈಕೋರ್ಟ್‌ ಮಂಗಳವಾರ ಆದೇಶಿಸಿದೆ. ಖಾಸಗಿ ವಿದ್ಯುತ್‌ ಕಂಪೆನಿ ಠೇವಣಿ ಇರಿಸಿದ್ದ 64 ಕೋಟಿ ರೂ. ವಾಪಸ್‌ ನೀಡಲು ರಾಜ್ಯ ಸರಕಾರ ವಿಫ‌ಲವಾಗಿರುವ ಹಿನ್ನೆಲೆಯಲ್ಲಿ ಬಡ್ಡಿ ಸಹಿತ 150 ಕೋಟಿ ರೂ. ನೀಡಬೇಕು ಎಂದು ಹೈಕೋರ್ಟ್‌ ಆದೇಶಿಸಿದೆ.

Advertisement

ಇದರ ಜತೆಗೆ ಕಂಪೆನಿಗೆ ಠೇವಣಿ ಮೊತ್ತ ಹಿಂದಿರುಗಿಸುವಲ್ಲಿ ವಿಳಂಬ ಮಾಡಿದ ಅಧಿಕಾರಿಗಳ ಬಗ್ಗೆ ತನಿಖೆ ನಡೆಸಿ 15 ದಿನಗಳಲ್ಲಿ ವರದಿ ಸಲ್ಲಿಸುವಂತೆ ನ್ಯಾಯಪೀಠ ಆದೇಶಿಸಿ, ಡಿ. 6ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಗ್ಯಾರಂಟಿ ಯೋಜನೆಗಳ ಜಾರಿಯಿಂದ ಹಿಮಾಚಲ ಪ್ರದೇಶ ಸರಕಾರಕ್ಕೆ ಆರ್ಥಿಕ ಸಂಕಷ್ಟ ಉಂಟಾಗಿದೆ ಎಂಬ ವರದಿಗಳ ನಡುವೆಯೇ ಈ ತೀರ್ಪು ಬಂದಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸುಖ್ವಿಂದರ್‌ ಸಿಂಗ್‌ ಸುಖು, ಹೈಕೋರ್ಟ್‌ ತೀರ್ಪಿನ ಬಗ್ಗೆ ಅಧ್ಯಯನ ನಡೆಸಿ ಮೇಲ್ಮನವಿ ಸಲ್ಲಿಸಲಾಗುತ್ತದೆ ಎಂದಿದ್ದಾರೆ. ಹೈಕೋರ್ಟ್‌ ತೀರ್ಪಿನ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಿಎಂ ಮತ್ತು ವಿಪಕ್ಷ ನಾಯಕ ಜೈರಾಮ್‌ ಠಾಕೂರ್‌, ವಿನಾಕಾರಣಕ್ಕಾಗಿ ರಾಜ್ಯ ಸುದ್ದಿಯಲ್ಲಿದೆ. ರಾಜ್ಯ ಸರಕಾರದ ನೀತಿಯಿಂದಾಗಿ ಬಂಡವಾಳ ಹೂಡಿಕೆದಾರರು ಹೂಡಿಕೆ ಮಾಡಲು ಮುಂದಾಗುತ್ತಿಲ್ಲ ಎಂದು ದೂರಿದ್ದಾರೆ. ಕೇಂದ್ರ ಸರಕಾರದ ಜತೆಗಿನ ಒಪ್ಪಂದದಿಂದಾಗಿ ರಾಜ್ಯದಲ್ಲಿ ಕೆಲವು ಬೃಹತ್‌ ಯೋಜನೆಗಳು ಅನುಷ್ಠಾನದಲ್ಲಿವೆ ಎಂದಿದ್ದಾರೆ.

ಏನಿದು ಪ್ರಕರಣ?
ಹಿಮಾಚಲ ಪ್ರದೇಶದ ಲಾಹುಲ್‌ ಮತ್ತು ಸ್ಪಿಟಿ ಜಿಲ್ಲೆಯ ಚೆನಾಬ್‌ ನದಿಯಲ್ಲಿ 320 ಮೆ.ವ್ಯಾ. ಸಾಮರ್ಥ್ಯದ ಜಲವಿದ್ಯುತ್‌ ಯೋಜನೆ ಸ್ಥಾಪಿಸಲು 2009ರಲ್ಲಿ ಅಧಿಕಾರದಲ್ಲಿ ಇದ್ದ ಬಿಜೆಪಿ ಸರಕಾರ ತೀರ್ಮಾನಿಸಿತ್ತು. ಅದಕ್ಕಾಗಿ ಸೆಲಿ ಹೈಡ್ರೋಪವರ್‌ ಇಲೆಕ್ಟ್ರಿಕಲ್‌ ಕಂಪೆನಿಗೆ ಗುತ್ತಿಗೆ ನೀಡಲಾಗಿತ್ತು. ಒಪ್ಪಂದದ ಅನ್ವಯ ರಾಜ್ಯ ಸರಕಾರ ಮೂಲ ಸೌಕರ್ಯಗಳನ್ನು ನೀಡಬೇಕಾಗಿತ್ತು.

ಯೋಜನೆ ಅನುಷ್ಠಾನದ ಬಗ್ಗೆ ಕಂಪೆನಿ ಹಲವು ಸುತ್ತಿನ ಮಾತುಕತೆ ನಡೆಸಿತ್ತು. ಅಂತಿಮವಾಗಿ 2017ರ ಆಗಸ್ಟ್‌ನಲ್ಲಿ ಸೆಲಿ ಹೈಡ್ರೋಪವರ್‌ ಇಲೆಕ್ಟ್ರಿಕಲ್‌ ಕಂಪೆನಿ ಯೋಜನೆಯಿಂದ ಹಿಂದೆ ಸರಿಯುವ ಬಗ್ಗೆ ಅರಿಕೆ ಮಾಡಿತ್ತು. ಜತೆಗೆ ಯೋಜನೆಗಾಗಿ ಠೇವಣಿ ಇರಿಸಿದ್ದ 64 ಕೋಟಿ ರೂ. ಮೊತ್ತವನ್ನು ವಾಪಸ್‌ ನೀಡಲು ಸರಕಾರಕ್ಕೆ ನಿರ್ದೇಶನ ನೀಡುವಂತೆ ಅರಿಕೆ ಮಾಡಿತ್ತು.

Advertisement

2017ರ ಸೆಪ್ಟಂಬರ್‌ನಲ್ಲಿ ಕಂಪೆನಿಯು ಯೋಜನೆ ಅನುಷ್ಠಾನ ಮಾಡಿಲ್ಲ ಎಂಬ ಕಾರಣ ನೀಡಿ ಹಿಮಾಚಲ ಪ್ರದೇಶ ಸರಕಾರ ಒಪ್ಪಂದ ರದ್ದು ಮಾಡಿತ್ತು. ಅದರ ವಿರುದ್ಧ ಕಂಪೆನಿ ಮಧ್ಯಸ್ಥಿಕೆದಾರ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿ 64 ಕೋಟಿ ರೂ. ಠೇವಣಿ ವಾಪಸ್‌ ಮಾಡುವಂತೆ ಒತ್ತಾಯಿಸಿತ್ತು. ಆ ಕೋರ್ಟ್‌ ಕಂಪೆನಿಯ ಪರವಾಗಿ ತೀರ್ಪು ನೀಡಿದ್ದರೂ ರಾಜ್ಯ ಸರಕಾರ ಮೊತ್ತ ವಾಪಸ್‌ ಮಾಡುವಲ್ಲಿ ವಿಫ‌ಲವಾಗಿತ್ತು.

ಹೀಗಾಗಿ ರಾಜ್ಯ ಸರಕಾರದ ವಿರುದ್ಧ ಕಂಪೆನಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. 2023ರ ಜನವರಿಯಲ್ಲಿ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಪೀಠವು ಬಡ್ಡಿ ಸಹಿತ ಠೇವಣಿ ಮೊತ್ತ ನೀಡಬೇಕು ಎಂದು ರಾಜ್ಯ ಸರಕಾರಕ್ಕೆ ಆದೇಶಿಸಿತ್ತು. ಅಂತಿಮವಾಗಿ ರಾಜ್ಯ ಸರಕಾರದ ವಿರುದ್ಧ ಆದೇಶ ನೀಡಿದ ಹೈಕೋರ್ಟ್‌ ಹೊಸದಿಲ್ಲಿಯಲ್ಲಿ ಇರುವ ಹಿಮಾಚಲ ಪ್ರದೇಶ ಭವನವನ್ನು ಹರಾಜು ಹಾಕಿ ಕಂಪೆನಿಗೆ 150 ಕೋಟಿ ರೂ. ಮೊತ್ತ ನೀಡಬೇಕು ಎಂದು ಆದೇಶಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next