ಚಿಕ್ಕಮಗಳೂರು: ಧರ್ಮದ ವಿಚಾರದಲ್ಲಿ ಡ್ರಾಮಾ ಒಳ್ಳೆಯದಲ್ಲ ತಕ್ಷಣ ಏನಾದರು ಆಗಲಿ ಎಂದು ಗಟ್ಟಿ ನಿರ್ಧಾರ ತೆಗೆದುಕೊಂಡು ಕೂಡಲೇ ದತ್ತಪೀಠವನ್ನು ಹಿಂದೂಗಳ ಪೀಠವೆಂದು ಆದೇಶಿಸಿ, ಹಿಂದೂ ಅರ್ಚಕರ ನೇಮಿಸಿಬೇಕು ಎಂದು ಶ್ರೀರಾಮಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ನಗರದ ಶಂಕರ ಮಠದಲ್ಲಿ 18ನೇ ವರ್ಷದ ಶ್ರೀರಾಮ ಸೇನೆಯ ದತ್ತಮಾಲಾ ಅಭಿಯಾನಕ್ಕೆ ದತ್ತಪೀಠದಲ್ಲಿ 50ಕ್ಕೂ ಹೆಚ್ಚು ಶ್ರೀರಾಮಸೇನೆಯ ಕಾರ್ಯಕರ್ತರು ಮಾಲಾಧಾರಣೆ ಮಾಡುವ ಮೂಲಕ ಚಾಲನೆ ನೀಡಿದರು. ಇಂದಿನಿಂದ ಏಳು ದಿನಗಳು ದತ್ತಮಾಲಾ ಅಭಿಯಾನ ನಡೆಯಲಿದೆ.
ಈ ಸಂದರ್ಭದಲ್ಲಿ ದತ್ತಮಾಲಾಧಾರಣೆ ಬಳಿಕ ಮಾತನಾಡಿದ ಅವರು, ಪ್ರತಿ ವರ್ಷ ಬರೋದು, ಹೆಣ ಇಲ್ಲದ ಗೋರಿ ನೋಡಿ ವಾಪಸ್ಸು ಹೋಗುವುದು. ಎಚ್ಚರಿಕೆ ನೀಡಿ ಬೇಜಾರು, ಆಕ್ರೋಶವಾಗಿದೆ. ಬಿಜೆಪಿ ಸರ್ಕಾರದ ಮೇಲೆ ಹೇಸಿಗೆ ಬರುತ್ತಿದೆ ಎಂದರು. ನ.13ರೊಳಗೆ ಅರ್ಚಕರ ನೇಮಿಸದಿದ್ದರೆ ಪರಿಸ್ಥಿತಿ ಕಠಿಣವಾಗುತ್ತೆ ಎಂದು ಎಚ್ಚರಿಸಿದರು.
ಚಿಕ್ಕಮಗಳೂರು ತಾಲೂಕಿನ ದತ್ತಪೀಠದಲ್ಲಿ 50ಕ್ಕೂ ಹೆಚ್ಚು ಶ್ರೀರಾಮಸೇನೆಯ ಕಾರ್ಯಕರ್ತರು ಮಾಲಾಧಾರಣೆ ಮಾಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.
ಹೇಗೆ ಬಿಜೆಪಿ ಅಧ್ಯಕ್ಷರ ಕಾರು ಅಲುಗಾಡಿತ್ತೋ, ಅದೇ ರೀತಿ ಸರ್ಕಾರ ಅಲುಗಾಡುತ್ತೆ. ದತ್ತಪೀಠವನ್ನು ಹಿಂದೂಗಳಿಗೆ ಒಪ್ಪಿಸದಿದ್ದರೆ ಯಡಿಯೂರಪ್ಪರ ಪೀಠ ಹೋಗುತ್ತೆ ಎಂದು ಹೇಳಿದ್ದೆ. ದತ್ತ ಗುರುಗಳ ಶಾಪದಿಂದ ಯಡಿಯೂರಪ್ಪ ಪೀಠ ಕಳೆದುಕೊಂಡರು. ಈಗ ಮುಖ್ಯಮಂತ್ರಿ ಬೊಮ್ಮಾಯಿಗೂ ಅದೇ ಹೇಳುತ್ತಿದ್ದೇವೆ. ಮುಂದೆ ಸರ್ಕಾರ ಬರಬೇಕಂದ್ರೆ ತಕ್ಷಣವೇ ದತ್ತಪೀಠವನ್ನು ಹಿಂದುಗಳಿಗೆ ಒಪ್ಪಿಸಿ, ಇಲ್ಲವಾದರೆ, ಯಡಿಯೂರಪ್ಪನವರಿಗೆ ಆದ ಪರಿಸ್ಥಿತಿಯೇ ನಿಮಗೂ ಆಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನವೆಂಬರ್ 13 ರಂದು ದತ್ತಪೀಠದಲ್ಲಿ ಮಾಲಾಧಾರಿಗಳು ದತ್ತ ಪಾದುಕೆ ದರ್ಶನ ಪಡೆಯಲಿದ್ದಾರೆ.