ಕಾಸರಗೋಡು: ಪ್ರಸ್ತುತ ವರ್ಷದಲ್ಲಿ ಪ್ರಥಮವಾಗಿ ಉತ್ತಮ ಮಳೆ ಯಾಗುತ್ತಿದ್ದು ಕಾಸರಗೋಡು ಜಿಲ್ಲೆಯಲ್ಲಿ ವಿವಿಧೆಡೆ ಕಡಲ್ಕೊರೆತ, ಕೃಷಿ ನಾಶ ಸಂಭವಿಸಿದೆ. ಮೊಗ್ರಾಲ್ ಪುತ್ತೂರಿನಲ್ಲಿ ಗುಡ್ಡೆ ಜರಿದು ಮನೆಯೊಂದು ಹಾನಿಗೀಡಾಗಿದೆ.
ಕಾಸರಗೋಡು ನೆಲ್ಲಿಕುಂಜೆ ಸಮುದ್ರ ಕಿನಾರೆಯಲ್ಲಿರುವ ಪಾರ್ಕ್ ನ ಸುತ್ತುಗೋಡೆಯ ಒಂದು ಭಾಗ ತೀವ್ರ ಕಡಲ್ಕೊರೆತದಿಂದ ಕುಸಿದು ಬಿದ್ದಿದೆ. ಮಾತ್ರವಲ್ಲ ಉದ್ಯಾನದಿಂದ ಸಮುದ್ರಕ್ಕೆ ಇಳಿಯುವ ಮೆಟ್ಟಿಲುಗಳೂ ಕಡಲ್ಕೊರೆತದಿಂದ ಸಮುದ್ರ ಪಾಲಾಗಿವೆ. ಇದಲ್ಲದೆ ಉದ್ಯಾನದ ಇತರ ಸುತ್ತುಗೋಡೆಗಳೂ ಕುಸಿದು ಬೀಳುವ ಅಂಚಿನಲ್ಲಿವೆ. ಕಾಸರಗೋಡು ಲೈಟ್ ಹೌಸ್ ಬಳಿಯಲ್ಲಿರುವ ಈ ಪಾರ್ಕ್ ಹಾನಿಗೀಡಾಗಿದೆ.
ಮೊಗ್ರಾಲ್ ಪುತ್ತೂರಿನ ದೊಡ್ಡ ಹಿತ್ತಿಲುವಿನ ವಿಮಲ ಅವರ ಮನೆಯ ಮೇಲೆ ಗುಡ್ಡ ಜರಿದು ಬಿದ್ದಿದೆ. ಇದರಿಂದ ಮನೆಯ ಅಡುಗೆ ಕೊಠಡಿ, ಸಿಟೌಟ್ ಭಾಗಗಳು ಹಾನಿಗೀಡಾಗಿವೆ. ನಿದ್ರಿಸುತ್ತಿದ್ದ ವಿಮಲ ಹಾಗೂ ಮಕ್ಕಳು ಶಬ್ದ ಕೇಳಿ ಹೊರಕ್ಕೆ ಓಡಿದ ಕಾರಣದಿಂದ ಅಪಾಯದಿಂದ ಪಾರಾಗಿದ್ದಾರೆ.
ಸರಿಯಾಗಿ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಬಹುತೇಕ ಕಡೆಗಳಲ್ಲಿ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಬೋವಿಕ್ಕಾನದಿಂದ ಚೆರ್ಕಳ ವರೆಗಿನ ರಸ್ತೆಯಲ್ಲಿ ಮಳೆ ನೀರು ಕಟ್ಟಿ ನಿಂತು ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಈ ರಸ್ತೆ ಬದಿಯಲ್ಲಿ ಸೂಕ್ತವಾದ ಚರಂಡಿ ಇಲ್ಲದ ಕಾರಣ ಮಳೆ ನೀರೆಲ್ಲ ರಸ್ತೆಯಲ್ಲೇ ಹರಿಯುತ್ತಿದೆ. ಇದರಿಂದಾಗಿ ವಾಹನ ಸಂಚಾರ ಸಂದರ್ಭದಲ್ಲಿ ಕಾರಂಜಿಯಂತೆ ನೀರು ಚಿಮ್ಮುತ್ತದೆ. ಇದರಿಂದ ನಡೆದು ಹೋಗುವವರಿಗೂ ದ್ವಿಚಕ್ರ, ತ್ರಿಚಕ್ರ ಸಹಿತ ಸಣ್ಣ ವಾಹನಗಳಲ್ಲಿ ಪ್ರಯಾಣಿಸುವವರಿಗೆ ಕೆಸರು ನೀರಿನ ಅಭಿಷೇಕವಾಗುತ್ತಿದೆ.
ಇದೇ ರೀತಿ ಚೆಂಗಳದಿಂದ ನಾಯ ಮ್ಮಾರ್‌ಮೂಲೆ ವರೆಗೂ ಚರಂಡಿ ಅವ್ಯವ ಸ್ಥೆಯಿಂದ ಮಳೆ ನೀರು ಹೆದ್ದಾರಿಯಲ್ಲೇ ಹರಿಯುತ್ತಿದೆ. ರಸ್ತೆ ಬದಿಯ ತಗ್ಗು ಪ್ರದೇಶವನ್ನು ಮಣ್ಣು, ಕಲ್ಲು ಹಾಕಿ ಎತ್ತರಗೊಳಿಸಿದ ಕಾರಣ ಆ ಭಾಗದ ನೀರು ಕೂಡಾ ರಸ್ತೆಗೆ ಹರಿಯುತ್ತಿದೆ.
ಮಾವಿನಕಟ್ಟೆ-ಕೋಳಾರಿ ರಸ್ತೆಯಲ್ಲೂ ಸ್ಥಿತಿ ಇದೇ ರೀತಿಯಿದೆ. ಕಾಸರಗೋಡು ನಗರದಲ್ಲಿ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದೆ.
ಆರೆಂಜ್ ಅಲರ್ಟ್
ರಾಜ್ಯದಲ್ಲಿ ಶುಕ್ರವಾರದಿಂದ ಧಾರಾಕಾರ ಮಳೆಯಾಗುತ್ತಿದ್ದು ಕಾಸರಗೋಡು ಸಹಿತ 9 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಕೋಟ್ಟಯಂ, ಪತ್ತನಂತಿಟ್ಟ, ಇಡುಕ್ಕಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಆಲಪ್ಪುಳ, ಎರ್ನಾಕುಳಂ ಜಿಲ್ಲೆಯಲ್ಲಿ ಎಲ್ಲೋ ಅಲೆರ್ಟ್ ಘೋಷಿಸಲಾಗಿದೆ. ಸಮುದ್ರದಲ್ಲಿ ಭಾರೀ ಬಿರುಗಾಳಿ ಬೀಸಿ ಕಡಲುಬ್ಬರ ಆಳೆತ್ತರದ ಅಲೆಗಳು ಏಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯ ವರದಿಯಲ್ಲಿ ಹೇಳಿದೆ. ಈ ಹಿನ್ನೆಲೆಯಲ್ಲಿ ಬೆಸ್ತರು ಯಾವುದೇ ಕಾರಣಕ್ಕೂ ಮೀನುಗಾರಿಕೆಗೆ ತೆರಳದಂತೆ ಮುನ್ನೆಚ್ಚರಿಕೆ ನೀಡಲಾಗಿದೆ.