ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ಆರಂಭಿಕ ಪತ್ತೆಯ ಬಗ್ಗೆ ಜಾಗೃತಿಯನ್ನು ಹೆಚ್ಚಿಸಲು ಭಾರತದಲ್ಲಿ ನವೆಂಬರ್ 7ರಂದು ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನವನ್ನು ಆಚರಿಸಲಾಗುತ್ತದೆ.
ಇತ್ತೀಚೆಗಿನ ವರ್ಷಗಳಲ್ಲಿ ಭಾರತದಲ್ಲಿ ಯುವ ಜನಾಂಗದವರಲ್ಲಿ ಬಾಯಿಯ ಕ್ಯಾನ್ಸರ್ ಹೆಚ್ಚಾಗಿ ಕಂಡುಬರುತ್ತದೆ. ತುಟಿಗಳು, ಗಲ್ಲಗಳ ಒಳಪದರ, ವಸಡುಗಳು, ನಾಲಿಗೆಯ ಮುಂಭಾಗ, ನಾಲಿಗೆಯ ಕೆಳಗೆ ಬಾಯಿಯ ಕೆಳಭಾಗ, ಬಾಯಿಯ ಮೇಲ್ಛಾವಣಿಯ ಎಲುಬಿನ ಭಾಗದಲ್ಲಿ ಈ ಕ್ಯಾನ್ಸರ್ ಬೆಳವಣಿಗೆಗಳು ಕಂಡು ಬರುತ್ತದೆ.
ಈ ಕ್ಯಾನ್ಸರ್‌ಗಳು ಮೊದಲು ಕ್ಯಾನ್ಸರ್ ಪೂರ್ವ ಗಾಯಗಳಂತೆ (precancerous lesions) ಪ್ರಾರಂಭವಾಗುತ್ತದೆ. ಬಾಯಿಯಲ್ಲಿ ಅಲ್ಲಲ್ಲಿ ಕೆಂಪು ಗಂಟಿನಂತೆ (erythroplakia) ಅಥವಾ ಬಿಳಿ ಗಂಟಿನಂತೆ/ಗಾಯದಂತೆ (leukoplakia) ಅಥವಾ ಬಿರುಕು ರೂಪದಲ್ಲಿ ಕಾಣಿಸಿಕೊಳ್ಳಬಹುದು. ಈ ಗಾಯಗಳು/ ಹುಣ್ಣುಗಳು ಪ್ರಾಥಮಿಕ ಹಂತದಲ್ಲಿ ನೋವಿಲ್ಲದೆ ಇರಬಹುದು. ಈ ಕ್ಯಾನ್ಸರ್ ಪೂರ್ವ ಗಾಯಗಳು- ಲ್ಯುಕೋಪ್ಲಾಕಿಯಾ, ಎರಿಥ್ರೋಪ್ಲಾಕಿಯಾ ಕ್ಯಾನ್ಸರ್ ಆಗಿ ರೂಪಾಂತರಗೊಳ್ಳಲು ಸರಾಸರಿ ಸುಮಾರು 10-15 ವರ್ಷ ಬೇಕಾಗಬಹುದು.
ಆದ್ದರಿಂದ ರೋಗ ಉಲ್ಬಣವಾಗುವ ಮೊದಲು ಅದನ್ನು ಪತ್ತೆ ಹಚ್ಚಲು, ನಿರ್ವಹಣೆ ಮಾಡಲು ಸಾಕಷ್ಟು ಸಮಯದ ಅವಕಾಶ ಇದೆ. ಬಾಯಿಯ ಕ್ಯಾನ್ಸರ್ ಮುಂಚಿತವಾಗಿ ಪತ್ತೆಯಾದರೆ ಚಿಕಿತ್ಸೆಗೆ ಚೆನ್ನಾಗಿ ಪ್ರತಿಕ್ರಿಯಿಸುತ್ತದೆ. ನಮ್ಮಲ್ಲಿ ತಂಬಾಕು, ಪಾನ್ ಮಸಾಲ ಜಗಿಯುವ ಅಭ್ಯಾಸ ಇರುವವರು ಹಾಗೂ ಅದನ್ನು ಬಾಯಿಯಲ್ಲಿ ಹೆಚ್ಚು ಸಮಯ ಇಟ್ಟುಕೊಳ್ಳುವವರು ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಈ ಕ್ಯಾನ್ಸರ್‌ಗಳು ಅಂತವರಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ.
ಅಪಾಯಕಾರಿ ಅಂಶಗಳು
ತಂಬಾಕು ಜಗಿಯುವಿಕೆ, ಸುಣ್ಣ, ಅಡಿಕೆ ಹಾಗೂ ತಂಬಾಕು ಸಹಿತ ವೀಳ್ಯದೆಲೆ ಜಗಿಯುವುದು ಪಾನ್ ಬೀಡ ಜಗಿಯುವುದು ಹಾಗೂ ಅದನ್ನು ಹೆಚ್ಚು ಸಮಯ ದವಡೆಯಲ್ಲಿ ಇಟ್ಟುಕೊಳ್ಳುವುದರಿಂದ ದವಡೆಯ ಸುತ್ತ ಕವಳಿನ ಚರ್ಮ-ಲೋಳೆ ಪೊರೆ (mucus membrane) ಹಾನಿಗೊಂಡು ಕ್ರಮೇಣ ಕ್ಯಾನ್ಸರ್ ಪೂರ್ವ ಗಾಯಗಳಾಗಿ ಬದಲಾಗಬಹುದು. ಆಲ್ಕೋಹಾಲ್ ಸೇವನೆ, ಚೂಪಾದ ಹಲ್ಲು ಹಾಗೂ ಅಸಮರ್ಪಕ ಕೃತಕ ದಂತಪಂಕ್ತಿಗಳಿಂದ ಬಾಯಿಯ/ಕವಳಿನ ಒಳಪದರಕ್ಕೆ (ಲೋಳೆ ಪೊರೆ) ಪದೇಪದೆ ಹಾನಿ/ಗಾಯ ಆಗುತ್ತಿರುತ್ತದೆ. ಈ ತರಹದ ನಿರಂತರ ಗಾಯ/ಪೆಟ್ಟು ಕ್ಯಾನ್ಸರ್ ಪ್ರಚೋದಕಗಳಾಗಿ ಮಾರ್ಪಾಡಾಗಬಹುದು ಹಾಗೂ ಅಲ್ಲಿ ಹೆಚ್ಚು ಹೆಚ್ಚು ಜೀವಕೋಶಗಳು ವಿಭಜನೆ, ಬೆಳವಣಿಗೆಗೆ ಪ್ರಚೋದಿಸಬಹುದು ಹಾಗೂ ಇವು ಅನಂತರ ಕ್ಯಾನ್ಸರ್ ಪೂರ್ವ ಗಾಯಗಳಾಗಿ ಗೋಚರಿಸಿ ಕಾಲಾಂತರದಲ್ಲಿ ಈ ಗಾಯಗಳೇ ಕ್ಯಾನ್ಸರ್‌ಗಳಾಗಿ ಮಾರ್ಪಾಡಾಗಬಹುದು. ಬಾಯಿಯಲ್ಲಿ ಕಂಡುಬರುವ ಕೆಲವು ವೈರಸ್ ಸೋಂಕುಗಳು ಹಾಗೂ ಬಾಯಿಯನ್ನು ಸ್ವಚ್ಚವಾಗಿಟ್ಟುಕೊಳ್ಳದೆ ಇರುವುದು ಕೂಡ ಇಂತಹ ಬೆಳವಣಿಗೆಗೆ ಕಾರಣವಾಗಬಹುದು.
ಬಾಯಿಯ ಕ್ಯಾನ್ಸರ್ ಚಿಹ್ನೆಗಳು ಹಾಗೂ ಲಕ್ಷಣಗಳು
ಬಾಯಿಯ ಮೃದುವಾದ ಅಂಗಾಂಶಗಳ ಮೇಲೆ ಬಿಳಿಯ ಕಲೆಗಳು/ ಕೆಂಪು ಕಲೆ ಪ್ರಾರಂಭಿಕ ಸೂಚನೆ
ನಾಲಿಗೆ, ತುಟಿ ಅಥವಾ ಬಾಯಿಯಲ್ಲಿ ಗಡ್ಡೆ / ಹುಣ್ಣುಗಳು -ಮೂರು ವಾರಗಳಿಗಿಂತ ಹೆಚ್ಚು ಕಾಲ ಮುಂದುವರಿಯುವುದು
ಬಾಯಿ ದೊಡ್ಡದಾಗಿ ತೆರೆಯಲು ತೊಂದರೆ ಆಗುವುದು.
ಆಹಾರ ಜಗಿಯಲು, ನುಂಗಲು, ಮಾತನಾಡಲು, ದವಡೆ ಇಲ್ಲವೇ ನಾಲಿಗೆಯನ್ನು ಚಲಿಸಲು ಕಷ್ಟಕರವಾಗುವುದು ಎರಡು ವಾರಕ್ಕಿಂತಲೂ ಹೆಚ್ಚು ಗುಣವಾಗದ ಬಾಯಿಯ ನೋವು
ಕೆನ್ನೆಯಲ್ಲಿ ಗಡ್ಡೆ ಅಥವಾ ದಪ್ಪವಾಗುವುದು
ಗಂಟಲಿನಲ್ಲಿ ಏನಾದರೂ ಸಿಲುಕಿಕೊಂಡಿದೆ ಎಂಬ ಭಾವನೆ
ಜಗಿಯಲು ಅಥವಾ ನುಂಗಲು ತೊಂದರೆ
ದವಡೆ ಅಥವಾ ನಾಲಿಗೆಯನ್ನು ಚಲಿಸುವಲ್ಲಿ ತೊಂದರೆ
ನಾಲಿಗೆಯ ಅಥವಾ ಇತರ ಬಾಯಿಯ ಪ್ರದೇಶದ ರಕ್ತಸ್ರಾವ ಅಥವಾ ಮರಗಟ್ಟುವಿಕೆ
ಧ್ವನಿಯಲ್ಲಿ ಬದಲಾವಣೆಗಳು ಅಥವಾ ಮಾತಿನ ಸಮಸ್ಯೆಗಳು.
ಕುತ್ತಿಗೆಯಲ್ಲಿ ಗೆಡ್ಡೆಯ ಬೆಳವಣಿಗೆ
ಬಾಯಿಯ ಸ್ವಯಂ ತಪಾಸಣೆ ಕ್ರಮಗಳು
ನೀರಿನಿಂದ ಬಾಯಿಯನ್ನು ತೊಳೆಯಿರಿ ಮತ್ತು ಸಾಕಷ್ಟು ಬೆಳಕು ಇರುವಲ್ಲಿ ಕನ್ನಡಿಯ ಮುಂದೆ ನಿಂತುಕೊಳ್ಳಿ
ಬಾಯಿಯ ಯಾವುದೇ ಅಸಹಜತೆಗಾಗಿ ಕನ್ನಡಿಯಲ್ಲಿ ನೋಡಿ
ತಲೆ ಮತ್ತು ಕತ್ತಿನ ಭಾಗವನ್ನು ಕನ್ನಡಿಯಲ್ಲಿ ಪರೀಕ್ಷಿಸುವುದು
ಮುಖದ ಚರ್ಮವನ್ನು ಗಮನಿಸುವುದು
ಕುತ್ತಿಗೆಯ ಬದಿ ಮತ್ತು ಎದುರು ಭಾಗದಲ್ಲಿ ಮೆತ್ತಗೆ ಒತ್ತಿ ನೋಡುವುದು
ತುಟಿಯಲ್ಲಿ ಉಬ್ಬು ಅಥವಾ ಗಂಟುಗಳಿವೆಯೇ ಎಂದು ಗಮನಿಸುವುದು
ಕೆನ್ನೆಯ ಒಳಭಾಗದಲ್ಲಿ ಕೆಂಪು ಅಥವಾ ಬಿಳಿ ವರ್ಣದ ಕಲೆಗಳಿವೆಯೇ ಎಂದು ನೋಡುವುದು
ಕೆಳ ನಾಲಗೆ ಮತ್ತು ನಾಲಗೆಯ ಪರೀಕ್ಷೆ
ಯಾವುದೇ ಅಸಹಜತೆ-ಬಾಯಿಯಲ್ಲಿ ಪಟ್ಟಿ (ಬಿಳಿ/ಕೆಂಪು) ಹುಣ್ಣು, ಒರಟು ಪ್ರದೇಶ, ಕಣಾವೃತ ಪ್ರದೇಶ ಅಥವಾ ಊತ ಕಂಡುಬಂದರೆ ಮತ್ತಷ್ಟು ಪರೀಕ್ಷೆ, ನಿರ್ವಹಣೆಗಾಗಿ ಸಮೀಪದ ತಜ್ಞ ವೈದ್ಯರನ್ನು ಭೇಟಿಯಾಗಬೇಕು.
ರೋಗದ ಪತ್ತೆ/ ಸ್ಕ್ರೀನಿಂಗ್ ಪರೀಕ್ಷೆ
30 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು (ಪುರುಷರು ಹಾಗೂ ಮಹಿಳೆಯರು), ಅನಂತರ ಪ್ರತೀ ಐದು ವರ್ಷಗಳಲ್ಲಿ ಒಮ್ಮೆಯಾದರೂ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳಬೇಕು
ನಿರಂತರ ತಂಬಾಕು ಸೇವನೆ ಹಾಗೂ ಮದ್ಯಪಾನ ಮಾಡುವವರು, ಮಾದಕವಸ್ತು ಬಳಸುವವರು ತಮ್ಮ ವಯಸ್ಸನ್ನು ಲೆಕ್ಕಿಸದೇ ಪದೇ ಪದೇ ತಪಾಸಣೆ ಮಾಡಿಸಿಕೊಳ್ಳುತ್ತಿರಬೇಕು. ಅಲ್ಲದೇ ಇಂತಹ ವ್ಯಕ್ತಿಗಳು ಪದೇ ಪದೇ ಸ್ವಯಂ ಪರೀಕ್ಷೆ ಮಾಡಿಕೊಳ್ಳುತ್ತಿರಬೇಕು.
ವೈದ್ಯರು ಆರಂಭಿಕ ಹಂತದಲ್ಲಿ ಬಯಾಪ್ಸಿಯ ಮೂಲಕ ರೋಗನಿರ್ಣಯ ಮಾಡಬಹುದು. ಕ್ಯಾನ್ಸರ್ ಇರುವುದು ದೃಢಪಟ್ಟರೆ ಸಿ.ಟಿ., ಎಂ.ಆರ್.ಐ.ಯಂತಹ ಪರೀಕ್ಷೆಗಳು ಬೇಕಾಗಬಹುದು. ಬಾಯಿಯ ಕ್ಯಾನ್ಸರ್ ಗೆ ಸಾಮಾನ್ಯವಾಗಿ ಇತರ ಕ್ಯಾನ್ಸರ್‌ನಂತೆ ಶಸ್ತ್ರಚಿಕಿತ್ಸೆ ಮೂಲಕ ಅಥವಾ ಶಸ್ತ್ರಚಿಕಿತ್ಸೆ, ವಿಕಿರಣ ಮತ್ತು ಕಿಮೋಥೆರಪಿ ಸಂಯೋಜಿತ ಚಿಕಿತ್ಸೆ ನೀಡಬೇಕಾಗಬಹುದು. ತಂಬಾಕು ಜಗಿಯುವಿಕೆ, ಸುಣ್ಣ, ಅಡಿಕೆ ಹಾಗೂ ತಂಬಾಕು ಸಹಿತ ವೀಳ್ಯದೆಲೆ ಜಗಿಯುವುದು ಪಾನ್ ಬೀಡ ಜಗಿಯುವುದನ್ನು ನಿಲ್ಲಿಸುವುದು ಹಾಗೂ ಉತ್ತಮ ಬಾಯಿಯ ನೈರ್ಮಲ್ಯ ಕಾಪಾಡಿಕೊಳ್ಳುವುದು, ತಜ್ಞ ವೈದ್ಯರ ಮೂಲಕ ಪದೇಪದೆ ಬಾಯಿಯ ತಪಾಸಣೆ ಮಾಡಿಸಿಕೊಳ್ಳುವುದು/ ಇಂತಹ ಕ್ರಮಗಳು ಬಾಯಿಯ ಕ್ಯಾನ್ಸರ್ ಉಂಟಾಗುವುದನ್ನು ಹಾಗೂ ಅದರಿಂದ ಉಂಟಾಗುವ ಸಾವುಗಳನ್ನು ತಡೆಯಲು ಸಹಕಾರಿಯಾಗುತ್ತದೆ.
-ಡಾ| ಚೈತ್ರಾ ಆರ್. ರಾವ್, ಅಸೋಸಿಯೆಟ್ ಪ್ರೊಫೆಸರ್ ಕಮ್ಯುನಿಟಿ ಮೆಡಿಸಿನ್ ವಿಭಾಗ ಮತ್ತು ಕೋ-ಆರ್ಡಿನೇಟರ್, ಸೆಂಟರ್ ಫಾರ್ ಟ್ರಾವೆಲ್ ಮೆಡಿಸಿನ್, ಕೆ.ಎಂ.ಸಿ., ಮಣಿಪಾಲ.
-ಡಾ| ಅಶ್ವಿನಿಕುಮಾರ್ ಗೋಪಾಡಿ, ಪ್ರೊಫೆಸರ್ ಮತ್ತು ಮುಖ್ಯಸ್ಥರು ಕಮ್ಯುನಿಟಿ ಮೆಡಿಸಿನ್ ವಿಭಾಗ, ಕೆ.ಎಂ.ಸಿ., ಮಣಿಪಾಲ
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಓಂಕಾಲಜಿ ವಿಭಾಗ, ಕೆಎಂಸಿ, ಮಾಹೆ, ಮಣಿಪಾಲ)