ಕುಂದಾಪುರ: ಸೂಕ್ತ ಮುಂಜಾಗ್ರತಾ ಕ್ರಮಗಳೊಂದಿಗೆ ಎಸೆಸೆಲ್ಸಿ ಪರೀಕ್ಷೆಯನ್ನು ಉತ್ತಮ ರೀತಿಯಲ್ಲಿ ನಿಭಾಯಿಸಲಾಗಿದೆ.
ಮನೆಯವರ ಮೂಲಕವಾಗಿ ಮೂವರು ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ಹರಡಿದ್ದರ ಹೊರತಾಗಿ ಜಿಲ್ಲೆಯ ಪರೀಕ್ಷಾ ಕೇಂದ್ರದಿಂದ ಯಾವುದೇ ವಿದ್ಯಾರ್ಥಿಗಳಿಗೆ ಸೋಂಕು ಹರಡಿಲ್ಲ.
ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆ ಮೇಲೆ ನಂಬಿಕೆಯಿಟ್ಟು ಪೋಷಕರು ಮಕ್ಕಳನ್ನು ಪರೀಕ್ಷೆಗೆ ಕಳಿಸಿದ್ದು ಆ ನಂಬಿಕೆಯನ್ನು ಉಳಿಸಿಕೊಂಡು ಮಕ್ಕಳನ್ನು ಸುರಕ್ಷಿತವಾಗಿ ಕಳಿಸಿದ್ದೇವೆ. ಪರೀಕ್ಷಾ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಿದ ಶಿಕ್ಷಕರು ಕೋವಿಡ್ ಪರೀಕ್ಷೆ ಮಾಡಲು ಇಚ್ಛಿಸಿದರೆ ಅದಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದ್ದಾರೆ.
ಅವರು ಶುಕ್ರವಾರ ಕುಂದಾಪುರ ಜೂನಿಯರ್ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ, ಪರೀಕ್ಷಾ ಕೊಠಡಿಗಳನ್ನು ವೀಕ್ಷಿಸಿ ಅಧಿಕಾರಿಗಳು ಮತ್ತು ಶಿಕ್ಷಕರು ವಹಿಸಿದ ಮುಂಜಾಗ್ರತಾ ಕ್ರಮಗಳನ್ನು ಶ್ಲಾಘಿಸಿದರು.
ಉಡುಪಿ ಜಿಲ್ಲೆಯಲ್ಲಿ ಸದ್ಯ 160 ಮಂದಿ ಕೋವಿಡ್ ಸೋಂಕಿತರು ಆಸ್ಪತ್ರೆಯಲ್ಲಿದ್ದು ಅವರ ಪೈಕಿ ನಾಲ್ವರಿಗೆ ಮಾತ್ರ ಗಂಭೀರ ಸ್ಥಿತಿಯಿದೆ. ಒಬ್ಬರು ವೆಂಟಿಲೇಟರ್ ಅಳವಡಿಕೆಯಲ್ಲಿದ್ದು ಉಳಿದ ಮೂವರು ಒಂದೆರಡು ದಿನದಲ್ಲಿ ಡಿಸ್ಚಾರ್ಜ್ ಆಗಲಿದ್ದಾರೆ. ಪ್ರತಿನಿತ್ಯ ವೈದ್ಯರ ಜತೆ ಚರ್ಚೆ ನಡೆಸುತ್ತಿದ್ದು ಕೊರೊನಾ ಸೋಂಕಿತರೆಲ್ಲರೂ ಚಿಕಿತ್ಸೆಗೆ ಸ್ಪಂದಿಸುತ್ತಿರುವುದು ಸಮಾಧಾನದ ವಿಚಾರವಾಗಿದೆ.
ಯಾರಿಗಾದರೂ ಜ್ವರ, ಶೀತ, ಕೆಮ್ಮದಂತಹ ಲಕ್ಷಣಗಳಿದ್ದರೆ ಮಾತ್ರೆ ತೆಗೆದುಕೊಂಡು ಸುಮ್ಮನಾಗದೇ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಜನರು ಜೀವದ ಬಗ್ಗೆ ಜಾಗರೂಕತೆ ವಹಿಸುವ ಅನಿವಾರ್ಯ ಇದೆ ಎಂದರು.
ಕುಂದಾಪುರ ತಾಲೂಕಿನಲ್ಲಿ ಯಾವುದೇ ಅಡ್ಡಿ ಆತಂಕಗಳು ಇಲ್ಲದೇ ಎಸೆಸೆಲ್ಸಿ ಪರೀಕ್ಷೆ ಸಾಂಗವಾಗಿ ನಡೆದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್ ತಿಳಿಸಿದ್ದಾರೆ.ಕುಂದಾಪುರ ಉಪ ವಿಭಾಗದ ಸಹಾಯಕ ಕಮಿಷನರ್ ಕೆ. ರಾಜು ಉಪಸ್ಥಿತರಿದ್ದರು.