Advertisement

ಕೇಂದ್ರ ಸರಕಾರದಿಂದ ದಬ್ಬಾಳಿಕೆ

09:43 AM Jan 31, 2019 | Team Udayavani |

ಬಸವಕಲ್ಯಾಣ: ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಿಬ್ಬಂದಿ ಮೇಲೆ ಒಂದಲ್ಲ ಒಂದು ದಬ್ಟಾಳಿಕೆ ನಡೆಸುತ್ತ ಬರಲಾಗುತ್ತಿದೆ. ಇದರ ಬಗ್ಗೆ ನಾವು ತುಂಬಾ ಜಾಗೃತರಾಗಬೇಕಾಗಿದೆ. ಇಲ್ಲದಿದ್ದರೆ ನಮಗೆ ಉಳಿಗಾಲವಿಲ್ಲ ಎಂದು ದೆಹಲಿಯ ಎಐಎಫ್‌ಎಡಬ್ಲ್ಯೂಎಚ್ ಅಧ್ಯಕ್ಷೆ ಉಷಾರಾಣಿ ಹೇಳಿದರು.

Advertisement

ಅಂಗನವಾಡಿ ಕೇಂದ್ರಗಳನ್ನು ಶಿಶುಪಾಲನಾ ಕೇಂದ್ರಗಳನ್ನಾಗಿ ಪುನಃ ರೂಪಿಸಬೇಕು ಮತ್ತು ನೌಕರರ ಸೇವೆ ಕಾಯಂ ಮಾಡಬೇಕು ಎಂದು ಒತ್ತಾಯಿಸಿ ಮತ್ತು ಅಂಗನವಾಡಿ ನೌಕರರ 7ನೇ ರಾಜ್ಯಮಟ್ಟದ ಸಮ್ಮೇಳನ ನಿಮಿತ್ತ ಜ.30ರಿಂದ ಫೆ.1ರ ವರೆಗೆ ಹಮ್ಮಿಕೊಂಡ ಕಾರ್ಯಕ್ರಮದ ಅಂಗವಾಗಿ ನಗರದ ಥೇರ ಮೈದಾನದ ಸಭಾ ಭವನದಲ್ಲಿ ಬುಧವಾರ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

ದೇಶದ ಸ್ವಾತಂತ್ರ್ಯ ನಂತರ ಅಂಗನವಾಡಿ ಕೇಂದ್ರಗಳಿಗಾಗಿ ಸಾಕಷ್ಟು ಯೋಜನೆ ಜಾರಿ ಮಾಡಿ 1975ರಿಂದ ಬಡತನ ಹೋಗಲಾಡಿಸಲು ಮತ್ತು ಗರ್ಭಿಣಿಯರಿಗೆ ಹಾಗೂ ಮಕ್ಕಳಿಗಾಗಿ ಕೆಲಸ ಮಾಡುತ್ತ ಬರಲಾಗುತ್ತಿದೆ. ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಪೊಲೀಯೋ ಮುಕ್ತ ದೇಶ ಮಾಡುವ ಕೀರ್ತಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸಲ್ಲುತ್ತಿದೆ ಎಂದು ಹೇಳಿದ್ದರು. ಆದರೆ ಇಂದಿನ ಪ್ರಧಾನ ಮಂತ್ರಿ ಮೋದಿ ಅವರು ನಮ್ಮ ಯೋಜನೆ ಕಡಿತ ಮಾಡಲು ಹೊರಟಿರುವುದು ಮಾತ್ರ ದುರಾಷ್ಟಕರ ಸಂಗತಿಯಾಗಿದೆ. ಇದನ್ನು ನೋಡಿದರೆ ಅವರು ತಮ್ಮ ಅಧಿಕಾರ ಉಳಿಸಿಕೊಳ್ಳಲು ಹಾಗೂ ಉದ್ಯಮಿಗಳ ಅಭಿವೃದ್ಧಿ ಮಾಡಲು ಹೊರಟಿರುವಂತೆ ಕಾಣುತ್ತಿದೆ ಎಂದು ಹೇಳಿದರು.

ತಮ್ಮ ಸರ್ಕಾರದ ಸಾಧನೆಗಾಗಿ ನಾಲ್ಕು ವರ್ಷಗಳಲ್ಲಿ 9 ಸಾವಿರ ಕೋಟಿ ರೂ. ಜಾಹಿರಾತಿಗಾಗಿ ಖರ್ಚು ಮಾಡಿದ್ದಾರೆ. ಆದರೆ ಅದರಲ್ಲಿ ಒಂದು ಪೈಸೆ ಗರ್ಭಿಣಿಯರಿಗೆ ಮತ್ತು ಅಂಗನವಾಡಿ ಮಕ್ಕಳಿಗಾಗಿ ಖರ್ಚು ಮಾಡಿಲ್ಲ ಎಂದು ಮೋದಿ ವಿರುದ್ಧ ವಾಗ್ಧಾಳಿ ನಡೆಸಿದರು.

ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಎಸ್‌. ಮೀನಾಕ್ಷಿ ಸುಂದರಂ ಮಾತನಾಡಿ, ಅಂಗನವಾಡಿ ನೌಕರರ ಸಮೇಳನವನ್ನು ನಮ್ಮ ಭವಿಷ್ಯ ಮತ್ತು ದೇಶದ ಭವಿಷ್ಯ ಉಳಿಸಬೇಕು ಎಂಬ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದೆ. ಕೇಂದ್ರ ಸರ್ಕಾರ ಅಂಗನವಾಡಿ ನೌಕರರ ನೀತಿ ಕುಗ್ಗಿಸುವ ಕೆಲಸ ಮಾಡುತ್ತಿದೆ. ಏಕೆಂದರೆ ಕಾರ್ಪೋರೇಟ್ ಮತ್ತು ಉದ್ಯಮಿಗಳು ದೇಶದ ಅಧಿಕಾರವನ್ನು ನಡೆಸುತ್ತಿವೆ. ವಿನಃ ಮೋದಿ ಅಲ್ಲ ಎಂದು ಆರೋಪಿಸಿದರು.

Advertisement

ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ ನೌಕರರ ಸಂಘದ ಅಧ್ಯಕ್ಷ ಮಾರುತಿ ಮಾನಪಡೆ, ದೆಹಲಿ ಎಐಎಫ್‌ಎಡಬ್ಲ್ಯೂಎಚ್ ಪ್ರಧಾನ ಕಾರ್ಯದರ್ಶಿ ಎಂ.ಆರ್‌. ಸಿಂಧು, ಎಚ್.ಎಸ್‌. ಸುನಂದಾ ಮಾತನಾಡಿ, ಮೇನಕಾ ಗಾಂಧಿ, ಸ್ಮೃತಿ ಇರಾನಿಯಿಂದ ಗರ್ಭಿಣಿಯರ ಹಾಗೂ ಮಕ್ಕಳ ಸಂರಕ್ಷಣೆ ಆಗುತ್ತಿಲ್ಲ. ದೇಶದ 28 ಲಕ್ಷ ಅಂಗನವಾಡಿ ಕಾರ್ಯಕರ್ತೆಯರ ಶ್ರಮದಿಂದ ಸಂರಕ್ಷಣೆ ಮಾಡಲು ಸಾಧ್ಯವಾಗಿದೆ. ಆದರೆ ಮೋದಿ ಸರ್ಕಾರ ಅಂಗನವಾಡಿಗೆ ಬರುವ 10 ಸಾವಿರ ಕೋಟಿ ರೂ. ಅನುದಾನ ಕಡಿತಗೊಳಿಸಿದೆ. ಹಾಗಾಗಿ ಕೇಂದ್ರ ಸರ್ಕಾರ ಸ್ವಾಮಿನಾಥ ವರದಿ ಜಾರಿ ಮಾಡಬೇಕು. ಅಂಗನವಾಡಿ ನೌಕರರಿಗೆ ಕನಿಷ್ಠ 18 ಸಾವಿರ ರೂ. ವೇತನ, 5 ಸಾವಿರ ರೂ. ಮಾಸಾಶನ ನೀಡಬೇಕು ಎಂದು ಒತ್ತಾಯಿಸಿದರು.

ಮೋದಿ ಅವರ ಭಾಷಣದ ಮೇಲೆ ಯಾರು ನಂಬಿಕೆ ಇಡಬಾರದು ಎಂದು ಸಲಹೆ ನೀಡಿದರು. ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷೆ ಮಾತನಾಡಿ, ಕೇಂದ್ರ ಸರ್ಕಾರ ಘೋಷಣೆ ಮಾಡಿದ ಸಂಬಳದಲ್ಲಿ ಕೇವಲ 900 ರೂ. ನೀಡುತ್ತಿದೆ. ಉಳಿದ ಹಣವನ್ನು ರಾಜ್ಯ ಸರ್ಕಾರ ಭರಿಸುತ್ತಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರ ಮಾತೃಪೂರ್ಣ ಯೋಜನೆ ಜಾರಿಗೆ ತಂದಿದೆ. ಆದರೆ ಮೊಟ್ಟೆ, ತರಕಾರಿಗಾಗಿ ಇರುವ ಹಣ 6 ತಿಂಗಳಾದರು ಬರುವುದಿಲ್ಲ. ಆದರೂ, ಅಂಗನವಾಡಿ ಕಾರ್ಯಕರ್ತೆಯರು ಅದನ್ನು ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಂಬಂಧ ಇಲ್ಲದ ಅಧಿಕಾರಿಗಳು ಅಂಗನವಾಡಿ ಭೇಟಿ ನೀಡಿ ಅಮಾನತು ಮಾಡುವ ಆದೇಶ ಕೊಟ್ಟಿದ್ದಾರೆ ಎಂದು ಹೇಳಿದರು.

ನಮಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇದೆ ಹಾಗೂ ಸಂಬಂಧಿಸಿದ ಸಚಿವರು ಇದ್ದಾರೆ. ಸಿಕ್ಕ ಸಿಕ್ಕ ಅಧಿಕಾರಿಗಳು ಭೇಟಿ ನೀಡಬಾರದು. ಇಲ್ಲದಿದ್ದರೆ ನಮಗೆ ಸಂಬಂಧ ಇಲ್ಲದ ಮಾತೃಪೂರ್ಣ ಯೋಜನೆ ನಿಲ್ಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರಮುಖರಾದ ಪ್ರಧಾನ ಕಾರ್ಯದರ್ಶಿ ಹಾಗೂ ಸ್ವಾಗತ ಸಮಿತಿ ಅಧ್ಯಕ್ಷೆ ಶ್ರೀದೇವಿ ಚುಡೇ, ಶಾಂತಲಾ ಎನ್‌. ಘಂಟೆ, ಪ್ರಭು ಸಂತೋಷಕರ್‌, ಸುಶೀಲಾ ಹತ್ತಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಅಂಗನವಾಡಿ ಸಿಬ್ಬಂದಿ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಅಂಗನವಾಡಿ ನೌಕರರು, ಸಿಬ್ಬಂದಿ ಏನು ಮಾಡುತ್ತಿದ್ದಾರೆ ಎಂಬ ಮಾಹಿತಿಗಾಗಿ ಜಿಪಿಎಸ್‌ ಅಳವಡಿಸಬೇಕು ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಆದರೆ ನಿಜವಾಗಿ ಜಿಪಿಎಸ್‌ ವ್ಯವಸ್ಥೆಯನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಸಚಿವರಿಗೆ ಮಾಡಬೇಕಾಗಿದೆ. ಏಕೆಂದರೆ ಅಂಗನವಾಡಿ ಕಾರ್ಯಕರ್ತೆಯರು ನಿತ್ಯ 14ರಿಂದ 16 ಗಂಟೆ ಸರ್ಕಾರದ ವಿವಿಧ ಯೋಜನೆಗಳ ಕುರಿತು ಸರ್ವೆ ಮಾಡುವಲ್ಲಿ ತೊಡಗಿರುತ್ತಾರೆ. ಅಂಗನವಾಡಿ ನೌಕರರು ಒಗ್ಗಟ್ಟಾಗಿ 2019ರಲ್ಲಿ ಬಿಜೆಪಿ ಭಗಾವೊ-ದೇಶ ಬಚಾವೊ, ಮೋದಿ ಹಠಾವೊ, ದೇಶ ಬಚಾವೋ ನಿರ್ಣಯ ತೆಗೆದುಕೊಳ್ಳಬೇಕಾಗಿದೆ.
•ಉಷಾರಾಣಿ, ಎಐಎಫ್‌ಎಡಬ್ಲ್ಯೂಎಚ್ ಅಧ್ಯಕ್ಷೆ

ನೌಕರ‌ರ ಬೃಹತ್‌ ರ್ಯಾಲಿ
ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ (ಸಿಐಟಿಯು)7ನೇ ರಾಜ್ಯ ಮಟ್ಟದ ಸಮ್ಮೇಳನದ ಅಂಗವಾಗಿ ಬುಧವಾರ ಬೃಹತ್‌ ರ್ಯಾಲಿ ನಡೆಯಿತು. ನಗರದ ಕೋಟೆಯಿಂದ ಆರಂಭವಾದ ಬೃಹತ್‌ ರ್ಯಾಲಿ ಪ್ರಮುಖ ವೃತ್ತಗಳ ಮೂಲಕ ಸಭಾ ಭವನದ ವರೆಗೆ ನಡೆಯಿತು. ರ್ಯಾಲಿಯಲ್ಲಿ ಸಹಸ್ರಾರರು ಸಂಖ್ಯೆಯಲ್ಲಿ ನೌಕರ‌ರು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.

ವಿಚಾರ ಸಂಕಿರಣ ಇಂದು
ಜ.31ರಂದು ಬೆಳಗ್ಗೆ 10:30ಕ್ಕೆ ತಾಯಿ ಮಕ್ಕಳ ಹಕ್ಕು ಕುರಿತು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವ ಜಯಮಾಲಾ ಕಾರ್ಯಕ್ರಮ ಉದ್ಘಾಟಿಸುವರು. ಸಾಹಿತಿ ಎಚ್.ಎಸ್‌.ಅನುಪಮ ಹಾಗೂ ನ್ಯಾಯವಾದಿ ಸುಧಿಧೀರಕುಮಾರ ಮರೊಳ್ಳಿ ವಿಷಯ ಮಂಡಿಸುವರು. ಕರ್ನಾಟಕ ರಾಜ್ಯ ಸಮಿತಿ ಸಹ ಕಾರ್ಯದರ್ಶಿ ಯಮುನಾ ಗಾಂವ್ಕರ್‌ ಅಧ್ಯಕ್ಷತೆ ವಹಿಸುವರು.

Advertisement

Udayavani is now on Telegram. Click here to join our channel and stay updated with the latest news.

Next