ಕುಷ್ಟಗಿ: ಪಟ್ಟಣದ ಹೊರವಲಯದ ಅಲೆಮಾರಿ ಬುಡಕಟ್ಟು ಜನಾಂಗದವರು ವಾಸವಾಗಿರುವ ಸಂತ ಶಿಶುನಾಳ ಶರೀಫ್ ನಗರದಲ್ಲಿ ತಳಕಲ್-ವಾಡಿ ರೈಲು ಮಾರ್ಗದ ರೈಲ್ವೇ ನಿಲ್ದಾಣ ನಿರ್ಮಾಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ತೆರವುಗೊಳ್ಳುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿಯನ್ನು ಸಂತ ಶಿಶುನಾಳ ಶರೀಫ್ ನಗರಕ್ಕೆ ಹೊಂದಿಕೊಂಡಿರುವ ಸ್ಥಳದಲ್ಲೇ ನಿರ್ಮಿಸಬೇಕೆಂಬ ಬೇಡಿಕೆ ವ್ಯಕ್ತವಾಗಿದೆ.
ಚತುಷ್ಪಥ ರಾಷ್ಟ್ರೀಯ ಹೆದ್ದಾರಿ-50 ಹಾಗೂ ಕಂದಕೂರು ರಸ್ತೆಯ ಮಧ್ಯೆ ಭಾಗದಲ್ಲಿ ನೈರುತ್ಯ ವಲಯದ ರೈಲ್ವೇ ನಿಲ್ದಾಣ ನಿರ್ಮಿಸುವ ಯೋಜನೆ ಇದೆ. ಈ ಹಿನ್ನೆಲೆಯಲ್ಲಿ ಸಂತ ಶಿಶುನಾಳ ಶರೀಫ್ ನಗರದ 35 ಮನೆಗಳು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ತೆರವುಗೊಳಿಸಲಾಗುತ್ತಿದೆ.
ಈಗಾಗಲೇ 35 ಮನೆಗಳಿಗೆ ತಲಾ 3 ಲಕ್ಷ ರೂ. ಪರಿಹಾರ ನೀಡಲಾಗಿದ್ದು, ಶಾಲೆಗೂ 12 ಲಕ್ಷ ರೂ. ರೈಲ್ವೆ ಇಲಾಖೆ ನಿಗದಿಪಡಿಸಿದೆ. ಆದರೆ ಶಾಲೆ ನಿರ್ಮಾಣಕ್ಕೆ ಜಾಗೆಯ ತೊಂದರೆ ಇದೆ. ಸಂತ ಶಿಶುನಾಳ ಶರೀಫ್ ನಗರದ ಉತ್ತರ, ಪೂರ್ವ ಹಾಗೂ ದಕ್ಷಿಣ ದಿಕ್ಕಿನಲ್ಲಿ ರೈತರ ಜಮೀನು ಇದ್ದು, ಪಶ್ಚಿಮ ಭಾಗದಲ್ಲಿ ಸ.ನಂ. 59ರಲ್ಲಿ ರಾಜ್ಯಪಾಲರ ಹೆಸರಿನಲ್ಲಿ ನೋಂದಣಿಯಾಗಿರುವ ಕೆಐಡಿಬಿಯ 25 ಗುಂಟೆ ಜಾಗೆ ಇದೆ.
ಶಾಲೆ ನಿರ್ಮಿಸುವ ಸಂಬಂಧ ಕೆಐಡಿಬಿಯ ಸದ್ಯಕ್ಕೆ 11 ಗುಂಟೆಯಾದರೂ ಬಿಟ್ಟು ಕೊಟ್ಟರೆ ಶಾಲೆ ನಿರ್ಮಿಸಲು ಅನಕೂಲವಾಗಲಿದೆ. ಇದೇ ಸ.ನಂ.ಗೆ ಹೊಂದಿಕೊಂಡಿರುವ ರೈತರ ಜಮೀನಿನಲ್ಲಿ ಶಾಲೆಗೆ ಅಗತ್ಯವಿರುವ ಜಾಗೆ ಖರೀದಿಸಬೇಕು. ಈ ಶಾಲೆಯನ್ನು ಕೃಷ್ಣಗಿರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಮಾರುತಿ ನಗರದ ಶಾಲೆಯಲ್ಲಿ ವಿಲೀನಗೊಳಿಸುವ ಪ್ರಯತ್ನ ಮಾಡಬಾರದು ಎನ್ನುವುದು ಸ್ಥಳೀಯರ ಬೇಡಿಕೆಯಾಗಿದೆ.
ರೈಲ್ವೇ ನಿಲ್ದಾಣ ನಿರ್ಮಿಸುವ ಹಿನ್ನೆಲೆಯಲ್ಲಿ ಶಾಲೆ, ಅಂಗನವಾಡಿ ತೆರವುಗೊಳಿಸುವುದಾದರೆ, ರೈಲ್ವೇ ಇಲಾಖೆಯವರೇ ಕೆಐಡಿಬಿಯಿಂದ ಶಾಲೆಗಾಗಿ 25 ಗುಂಟೆಯಲ್ಲಿ ಜಮೀನು ಸ್ವಾಧೀನಪಡಿಸಿಕೊಳ್ಳಬೇಕಿದೆ. ರೈಲ್ವೇ ಇಲಾಖೆ ಶಾಲೆಗೆ ಬರೀ 12 ಲಕ್ಷ ರೂ. ಪರಿಹಾರ ನೀಡಿದ್ದು, ಇದು ಕನಿಷ್ಟ ಪರಿಹಾರ. ಯಾಕೆಂದರೆ ಎನ್.ಎ. (ಭೂ ಪರಿವರ್ತನೆ) ನಿವೇಶನ ಆಗಿದ್ದು, ಹೆಚ್ಚಿನ ಪರಿಹಾರ ಸಿಗಬೇಕಿದೆ. ಈ ಕುರಿತು ಸಂಬಂಧಿಸಿದ ಕೆಐಡಿಬಿ ಅಧಿಕಾರಿ ಹಾಗೂ ರೈಲ್ವೇ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸುವೆ
. -ಗಂಗಾಧರಸ್ವಾಮಿ ಹಿರೇಮಠ, ಪುರಸಭೆ ಅಧ್ಯಕ್ಷ
ಭಿಕ್ಷೆ ಬೇಡಿ, ಹಾವು ಆಡಿಸಿ, ಪ್ಲಾಸ್ಟಿಕ್ ಕೊಡ ಮಾರಿ ಜೀವನ ನಡೆಸುತ್ತಿದ್ದವರಿಗೆ ಸರ್ಕಾರ ಜಾಗೆ ಖರೀದಿಸಿ 100 ಮನೆಗಳನ್ನು ನಿರ್ಮಿಸಿ, ಮಕ್ಕಳ ಶಿಕ್ಷಣಕ್ಕೆ ಶಾಲೆ, ಅಂಗನವಾಡಿ ನಿರ್ಮಿಸಲಾಗಿದೆ. ಈಗ ಅದನ್ನು ರೈಲ್ವೇ ನಿಲ್ದಾಣ ನಿರ್ಮಿಸುವ ಸಂಬಂಧ ಸರ್ಕಾರ ಕಸಿದುಕೊಂಡಿದೆ. ಈ ಶಾಲೆ ನಿರ್ಮಿಸಿದ್ದರಿಂದ ನಮ್ಮ ಮಕ್ಕಳು ಈ ಶಾಲೆಯಲ್ಲಿ ಶಿಕ್ಷಣ ಕಲಿತು ಪಿಯುಸಿವರೆಗೆ ಓದುತ್ತಿದ್ದಾರೆ. 80ಕ್ಕೂ ಅಧಿಕ ಮಕ್ಕಳು ಬೇರೆಡೆ ಕಲಿಯುವುದು ಅಸಾಧ್ಯ. ಶಾಲೆ ತೆರವುಗೊಂಡರೆ ನಮ್ಮ ಬಡಾವಣೆಯ ಪಕ್ಕದಲ್ಲಿ ಶಾಲೆ, ಅಂಗನವಾಡಿ ನಿರ್ಮಿಸಬೇಕು. ಹಲವು ಹೋರಾಟದಿಂದ ಮನೆ ನಿರ್ಮಿಸಿಕೊಂಡಿದ್ದು, ಶಾಲೆಯನ್ನು ಇಲ್ಲಿಯೇ ಉಳಿಸಿಕೊಳ್ಳುವ ಹೋರಾಟ ಅನಿವಾರ್ಯ ಆಗಲಿದೆ. –
ಮಹಿಬೂಬಸಾಬ್ ಮದಾರಿ, ಅಲೆಮಾರು ಬುಡಕಟ್ಟು ಸಮಾಜದ ಅಧ್ಯಕ್ಷ