ತಿ.ನರಸೀಪುರ: ರಾಜ್ಯದಲ್ಲಿರುವ ಸಂವಿಧಾನ ವಿರೋಧಿಗಳು ಹಾಗೂ ಕನ್ನಡ ಸಾಹಿತ್ಯದಲ್ಲಿರುವ ಇತಿಹಾಸವನ್ನು ಅರಿಯದವರು ಟಿಪ್ಪು ಜಯಂತಿ ವಿರೋಧಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಅಧ್ಯಕ್ಷ ಎನ್.ಕೆ.ಫರೀದ್ ಹೇಳಿದರು. ಪಟ್ಟಣದ ಗುರುಭವನದಲ್ಲಿ ಶುಕ್ರವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಟಿಪ್ಪು ಸುಲ್ತಾನ್ ಜಯಂತಿಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ದೇಶದ ಪ್ರಥಮ ಪ್ರಜೆಯಾದ ರಾಷ್ಟ್ರಪತಿ ಅವರೇ ಟಿಪ್ಪು ಓರ್ವ ಸ್ವಾತಂತ್ರ್ಯ ಸೇನಾನಿ ಅಂದರು. ರಾಜ್ಯದ ಉತ್ಛನ್ಯಾಯಾಲಯ ಜಯಂತಿಗೆ ತಡೆ ನೀಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದರೂ ಟಿಪ್ಪು ಸುಲ್ತಾನ್ ಜನುಮ ದಿನದ ಆಚರಣೆಗೆ ವಿರೋಧಿಸಿದ್ದು ಸರಿಯಲ್ಲ ಎಂದರು.
ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನಾ, ಟಿಪ್ಪು ಸುಲ್ತಾನ್‌ರನ್ನು ಜಾತ್ಯತೀತ ನೆಲೆಯಲ್ಲಿ ಧರ್ಮದ ಹೊರತಾಗಿ ಎಲ್ಲರೂ ನೋಡಬೇಕು. ಮೈಸೂರು ಸಂಸ್ಥಾನದ ದೊರೆಯಾಗಿದ್ದ ಸಂದರ್ಭದಲ್ಲಿ ಪ್ರಜಾಪ್ರಭುತ್ವ ಚಿಂತನೆಯಿಂದ ಎಲ್ಲಾ ಧರ್ಮವನ್ನು ಸಮಾನವಾಗಿ ಕಾಣುತ್ತಿದ್ದರು ಎಂದರು.
ಸಮಾಜ ಸೇವಕ ಎನ್.ಕೆ.ಫರೀದ್ ಸೇರಿದಂತೆ ಜಿಲ್ಲಾ ವಕ್ಫ್ ಬೋರ್ಡ್ ಸದಸ್ಯ ಬಿ.ಮನ್ಸೂರ್ ಆಲಿ, ಮೃಗಾಲಯ ಪ್ರಾಧಿಕಾರದ ನಿರ್ದೇಶಕ ಅಮ್ಜದ್ ಖಾನ್, ತಾಪಂ ಸದಸ್ಯ ಬಿ.ಸಾಜಿದ್ ಅಹಮ್ಮದ್, ಬನ್ನೂರು ಪುರಸಭೆ ಮಾಜಿ ಅಧ್ಯಕ್ಷ ಮುನಾವರ್ ಪಾಷಾರನ್ನು ಸನ್ಮಾನಿಸಲಾಯಿತು.
ತಾಪಂ ಅಧ್ಯಕ್ಷ ಸಿ.ಚಾಮೇಗೌಡ, ಜಿಪಂ ಸದಸ್ಯರಾದ ಮಂಜುನಾಥನ್, ಎಂ.ಅಶ್ವಿನ್‌ಕುಮಾರ್, ಮಾಜಿ ಅಧ್ಯಕ್ಷ ಎಸ್.ಎನ್.ಸಿದ್ದಾರ್ಥ, ತಾಪಂ ಸದಸ್ಯರಾದ ರಾಮಲಿಂಗಯ್ಯ, ಬಿ.ಸಾಜಿದ್ ಅಹಮ್ಮದ್, ಬಿಎಸ್ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎನ್.ಪ್ರಭುಸ್ವಾಮಿ, ಉಪನ್ಯಾಸಕ ಕುಮಾರಸ್ವಾಮಿ, ಮುಖಂಡರಾದ ಪೀರ್‌ಖಾನ್, ಸಯ್ಯದ್ ಯಾಹಿಯಾ, ಸುಹೇಲ್, ನಸೀರ್ ಮತ್ತಿತರರಿದ್ದರು.