Advertisement

ಆರ್‌ವಿಎಂ ಗೊಂದಲ! ಚುನಾವಣ ಆಯೋಗಕ್ಕೆ ವಿಪಕ್ಷಗಳಿಂದ ಪ್ರಶ್ನೆಗಳ ಮಳೆ

12:41 AM Jan 17, 2023 | Team Udayavani |

ಹೊಸದಿಲ್ಲಿ: ಇವಿಎಂ ಆಯಿತು ಈಗ ಆರ್‌ವಿಎಂ ವಿಚಾರದಲ್ಲಿ ರಾಜಕೀಯ ವಾಗ್ಯುದ್ಧ ಆರಂಭವಾಗುವ ಲಕ್ಷಣ ಕಾಣಿಸುತ್ತಿದೆ.

Advertisement

ವಲಸೆ ಮತದಾರರಿಗೆ ದೂರದಲ್ಲಿದ್ದುಕೊಂಡೇ ಮತ ಚಲಾಯಿಸಲು ಅವಕಾಶ ಕಲ್ಪಿಸುವಂಥ ರಿಮೋಟ್‌ ವೋಟಿಂಗ್‌ ಮಷೀನ್‌(ಆರ್‌ವಿಎಂ) ಕುರಿತು ರಾಜಕೀಯ ಪಕ್ಷಗಳಿಗೆ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆಯನ್ನು ಚುನಾವಣ ಆಯೋಗವು ಸೋಮವಾರ ಆಯೋಜಿಸಿತ್ತು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ವಿಪಕ್ಷಗಳು, ರಿಮೋಟ್‌ ವೋಟಿಂಗ್‌ ಮಷೀನ್‌ನ ಅಗತ್ಯವೇನಿದೆ ಎಂದು ಕೇಳಿರುವುದಲ್ಲದೇ ಚುನಾವಣ ಆಯೋಗಕ್ಕೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿವೆ.

ಇಂಥದ್ದೊಂದು ಯಂತ್ರದ ಅಗತ್ಯವೇನಿದೆ ಎಂಬ ಪ್ರಶ್ನೆಗೆ ಉತ್ತರ ಸಿಗುವವರೆಗೂ ಯಾವುದೇ ವಿಪಕ್ಷವೂ ಆಯೋಗ ಕರೆದಿರುವ ಸಮಾಲೋಚನ ಸಭೆಯಲ್ಲಿ ಪ್ರಾತ್ಯಕ್ಷಿಕೆಯನ್ನು ನೋಡಲು ಬಯಸುವುದಿಲ್ಲ ಎಂದು ಕಾಂಗ್ರೆಸ್‌ ಹಿರಿಯ ನಾಯಕ ದಿಗ್ವಿಜಯ್‌ ಸಿಂಗ್‌ ಹೇಳಿದರು.

ಇದೇ ವೇಳೆ ಮೊಟ್ಟಮೊದಲಿಗೆ ಆರ್‌ವಿಎಂ ಪರಿಕಲ್ಪನೆಯೇ ಸ್ವೀಕಾರಾರ್ಹವಲ್ಲ. ಇದನ್ನು ಪರಿಚಯಿಸುವ ಮೊದಲು ಚುನಾವಣ ಆಯೋಗವು ದೇಶದ ಹಲವು ಪಕ್ಷಗಳು ಇವಿಎಂ ಕುರಿತು ಎತ್ತಿರುವ ಕಳವಳಗಳಿಗೆ ಉತ್ತರಿ  ಸಬೇಕು. ನಗರ ಪ್ರದೇಶದ ಮತದಾರರು ಏಕೆ ಹಕ್ಕು ಚಲಾವಣೆಯಲ್ಲಿ ಹಿಂದಿದ್ದಾರೆ ಎಂಬುದನ್ನು ಅರಿತು, ಅದನ್ನು ಸರಿಪಡಿಸುವ ಕೆಲಸ ಮಾಡಬೇಕು ಎಂದೂ ವಿಪಕ್ಷಗಳು ಸಲಹೆ ನೀಡಿವೆ.

ಪ್ರಾತ್ಯಕ್ಷಿಕೆ ಮುಂದೂಡಿಕೆ: ಈ ವಿಚಾರದ ಬಗ್ಗೆ ಚರ್ಚೆ ಮಾಡಲು ಇನ್ನಷ್ಟು ಕಾಲಾವಕಾಶ ನೀಡುವಂತೆ ವಿಪಕ್ಷಗಳು ಆಗ್ರಹಿಸಿದ ಕಾರಣ ಆರ್‌ವಿಎಂ ಯಂತ್ರಗಳ ಪ್ರಾತ್ಯಕ್ಷಿಕೆಯನ್ನು ಚುನಾವಣ ಆಯೋಗ ಮುಂದೂಡಿತು. ಅಲ್ಲದೇ ರಿಮೋಟ್‌ ವೋಟಿಂಗ್‌ ಮಷೀನ್‌ ಬಳಕೆ ಕುರಿತು ಪ್ರತಿಕ್ರಿಯೆ ಸಲ್ಲಿಸಲು ನೀಡಲಾಗಿದ್ದ ಗಡು ವನ್ನೂ ಫೆ.28ರ ವರೆಗೆ ವಿಸ್ತರಣೆ ಮಾಡಿತು. ಈ ಹಿಂದೆ ಜ.31ರೊಳಗಾಗಿ ಪ್ರತಿಕ್ರಿಯೆ ನೀಡುವಂತೆ ಸೂಚಿಸಲಾಗಿತ್ತು.

Advertisement

ಆಯೋಗವು ಒಟ್ಟು 8 ರಾಷ್ಟ್ರೀಯ ಪಕ್ಷಗಳು ಹಾಗೂ ಮಾನ್ಯತೆ ಪಡೆದಿರುವ ರಾಜ್ಯಮಟ್ಟದ 57 ಪಕ್ಷಗಳಿಗೆ ಆಹ್ವಾನ ನೀಡಿತ್ತು. ರವಿವಾರವೇ ಸಭೆ ಸೇರಿ ಚರ್ಚೆ ಮಾಡಿದ್ದ ವಿಪಕ್ಷಗಳು, ಆಯೋಗದ ನಿರ್ಧಾರವನ್ನು ವಿರೋಧಿಸುವ ಜಂಟಿ ನಿರ್ಧಾರವನ್ನು ಕೈಗೊಂಡಿದ್ದವು.

ಆಯೋಗದ ವಾದವೇನು?
ಸರಕಾರಿ ಸ್ವಾಮ್ಯದ ಸಂಸ್ಥೆಯಾದ ಎಲೆಕ್ಟ್ರಾನಿಕ್ಸ್‌ ಕಾರ್ಪೊರೇಶನ್‌ ಆಫ್ ಇಂಡಿಯಾವು ಈ ಯಂತ್ರವನ್ನು ಅಭಿವೃದ್ಧಿಪಡಿಸಿದೆ. ಇದನ್ನು ಯಾವುದೇ ಅಂತರ್ಜಾಲ ಸಂಪರ್ಕವಿಲ್ಲದೇ ಬಳಸಬಹುದಾಗಿದೆ. ಈ ಯೋಜನೆ ಜಾರಿಗೆ ಬಂದರೆ ದೊಡ್ಡಮಟ್ಟದ ಸಾಮಾಜಿಕ ಬದಲಾ ವಣೆ ಕಾಣಬಹುದು. ಬೇರೆ ಬೇರೆ ರಾಜ್ಯಗಳಲ್ಲಿ, ನಗರಗಳಲ್ಲಿ ಕಾರ್ಯನಿರ್ವಹಿಸುವಂಥವರು, ವಲಸೆ ಕಾರ್ಮಿಕರು ತಾವಿದ್ದ ಸ್ಥಳದಿಂದಲೇ ಹಕ್ಕು ಚಲಾಯಿಸಬಹುದು ಎಂದು ಚುನಾವಣ ಆಯೋಗ ಪ್ರತಿಪಾದಿಸಿದೆ.

ವಿಪಕ್ಷಗಳ ಪ್ರಶ್ನೆಗಳೇನು?
-ವಲಸೆ ಕಾರ್ಮಿಕನು ಬೇರೆ ರಾಜ್ಯದಲ್ಲೂ ನೋಂದಣಿ ಮಾಡಿಕೊಂಡು, ತನ್ನ ಊರಲ್ಲೂ ನೋಂದಣಿ ಮಾಡಿಕೊಂಡಿದ್ದರೆಆಗ ಡುಪ್ಲಿಕೇಟ್‌ ತಡೆಯಲು ಏನು ಮಾಡುತ್ತೀರಿ?
-ದೂರದೂರಲ್ಲಿ ಮತಗಟ್ಟೆ ಸ್ಥಾಪಿಸಲು ನಿಗದಿತ ಸ್ಥಳವನ್ನು ಹೇಗೆ ನಿರ್ಧರಿಸುತ್ತೀರಿ?
-ಕ್ಷೇತ್ರದಾಚೆಗೆ ದೂರದೂರಲ್ಲಿ ನಡೆಯುವ ಮತದಾನ ಪ್ರಕ್ರಿಯೆಯನ್ನು ಪೋಲಿಂಗ್‌ ಏಜೆಂಟ್‌ ನಿಗಾ ವಹಿಸುವುದು ಹೇಗೆ?
-ವಿವಿಪ್ಯಾಟ್‌ ಸ್ಲಿಪ್‌ಗಳ ಸಾಗಾಟ ಹಾಗೂ ದಾಸ್ತಾನು ಎಲ್ಲಿ, ಹೇಗೆ ಮಾಡುತ್ತೀರಿ?
-ದೂರದೂರಲ್ಲಿ ಚಲಾವಣೆಯಾದ ಮತಗಳನ್ನು ಪ್ರತ್ಯೇಕವಾಗಿ ಎಣಿಸುತ್ತೀರಾ ಅಥವಾ ಕ್ಷೇತ್ರದ ಮತಗಳೊಂದಿಗೆ ಮಿಶ್ರ ಮಾಡುತ್ತೀರಾ?
-ಅರ್ಹ ವಲಸೆ ಕಾರ್ಮಿಕರು ಬೇರೆ ಬೇರೆ ರಾಜ್ಯಗಳಲ್ಲಿರುವಾಗ ನಾವು(ಪಕ್ಷಗಳು) ಚುನಾವಣ ಪ್ರಚಾರ ಮಾಡುವುದು ಹೇಗೆ?

Advertisement

Udayavani is now on Telegram. Click here to join our channel and stay updated with the latest news.

Next