ಬೆಂಗಳೂರು: ಕೆಶಿಪ್ ಯೋಜನೆಯಡಿ ನಿರ್ಮಿಸಿರುವ 19 ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಿಸುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೂಡಲೆ ಕೈಬಿಡದಿದ್ದರೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ರಾಜ್ಯ ಲಾರಿ ಮಾಲೀಕರ ಮತ್ತು ಏಜೆಂಟರ ಸಂಘದ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ ಎಚ್ಚರಿಸಿದ್ದಾರೆ.
ರಾಜ್ಯದಲ್ಲಿ 27 ಟೋಲ್ ರಸ್ತೆಗಳಿದ್ದು, ಪ್ರತಿ ವರ್ಷ 6 ಸಾವಿರ ಕೋಟಿ ರೂ.ಗಳನ್ನು ಟೋಲ್ ಮೂಲಕ ಸಂಗ್ರಹಿಸುತ್ತಿದ್ದಾರೆ. ಪ್ರತಿ ಕಿ.ಮೀ.ಗೆ ಲಾರಿ ಮಾಲೀಕರು 4ರೂ.ನಂತೆ ಟೋಲ್ ಪಾವತಿಸುತ್ತಿದ್ದು, ಇದು ಡಿಸೇಲ್ ದರಕ್ಕಿಂತಲೂ ದುಬಾರಿಯಾಗಿದೆ. ಕಾಮಗಾರಿ ಪೂರ್ಣ ಮುಗಿಯುವ ಮೊದಲೇ 19 ರಸ್ತೆಗೆ ಸುಣ್ಣಬಣ್ಣ ಬಳಿದು ಟೋಲ್ ಪ್ಲಾಜಾ ನಿರ್ಮಿಸಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
19 ರಸ್ತೆಗಳಲ್ಲಿ ಟೋಲ್ ಸಂಗ್ರಹ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಲಾರಿ, ಟ್ಯಾಕ್ಸಿ, ಕ್ಯಾಬ್ ಹಾಗೂ ಇತರೆ ವಾಹನದ ಮಾಲೀಕರ ಸಂಘದ ಸಭೆ ಜು.23ರಂದು ವಿಜಯಪುರದಲ್ಲಿ ನಡೆಯಲಿದೆ. ಅಷ್ಟರೊಳಗೆ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ, ಅನಿರ್ದಿಷ್ಟಾವಧಿ ಮುಷ್ಕರ ನಡೆಸುವ ನಿರ್ಧಾರವನ್ನು ಆ ದಿನದ ಸಭೆಯಲ್ಲಿ ತೆಗೆದುಕೊಳ್ಳಲಿದ್ದೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಟೋಲ್ ಮೂಲಕ ರಾಜ್ಯ ಸರ್ಕಾರ ಹಗಲು ದರೋಡೆ ಮಾಡುತ್ತಿದೆ. ರಸ್ತೆ ನಿರ್ಮಾಣವಾಗಿ 15-20 ವರ್ಷ ಕಳೆದರೂ ಟೋಲ್ ಸಂಗ್ರಹ ಮಾಡುತ್ತಿದ್ದಾರೆ. ನೈಸ್ ರಸ್ತೆಯ ಟೋಲ್ ಅವಧಿ ಮುಗಿದು ನಾಲ್ಕು ವರ್ಷವಾದರೂ ಇನ್ನೂ ಅದನ್ನು ಮುಂದುವರಿಸಿದ್ದಾರೆ. ಟೋಲ್ ಮೂಲಕ ಕೋಟ್ಯಂತರ ರೂ. ಸಂಗ್ರಹಿಸುತ್ತಿದ್ದಾರೆ ಎಂದು ಆರೋಪಿಸಿದರು. ಜಿಎಸ್‌ಟಿ ಜಾರಿ ನಂತರ ವಾಣಿಜ್ಯ ತೆರಿಗೆ ಸೆಸ್ ಕಡಿತ ಮಾಡಲಾಗಿದೆ.
ಆದರೆ, ಪ್ರತಿ 30 ಕಿ.ಮೀ.ಗೆ ಆರ್‌ಟಿಒ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ. ಒಮ್ಮೆ ತಪಾಸಣೆ ಮಾಡಿದ ಲಾರಿಯನ್ನೇ ಮತ್ತೆ ಮತ್ತೆ ತಪಾಸಣೆ ಮಾಡುತ್ತಿರುತ್ತಾರೆ. ಕರ್ನಾಟಕ ಹೊರತುಪಡಿಸಿ ಬೇರ್ಯಾವ ರಾಜ್ಯದಲ್ಲೂ ಇಂಥ ಸ್ಥಿತಿ ಇಲ್ಲ. ರಾಜ್ಯ ಸರ್ಕಾರ ನಮ್ಮ ಯಾವ ಬೇಡಿಕೆಗೂ ಸ್ಪಂದಿಸುತ್ತಿಲ್ಲ ಎಂದು ದೂರಿದರು. ಸಂಘದ ಕಾರ್ಯದರ್ಶಿ ಬಿ.ವಿ.ನಾರಾಯಣಪ್ಪ, ಟ್ಯಾಕ್ಸಿ ಅಸೋಸಿಯೇಷನ್‌ನ ರಾಧಾಕೃಷ್ಣ ಹೊಳ್ಳ ಇತರರಿದ್ದರು.