Advertisement

ಮರಳು ಸಾಗಣೆಗೆ ತೊರೆಬೀರನಹಳ್ಳಿ ಗ್ರಾಮಸ್ಥರ ವಿರೋಧ

04:56 PM Jun 05, 2018 | |

ಚಳ್ಳಕೆರೆ: ತಾಲೂಕಿನ ತೊರೆಬೀರನಹಳ್ಳಿ ಗ್ರಾಮದಲ್ಲಿ ಅಕ್ರಮ ಮರಳು ತುಂಬುವುದನ್ನು ವಿರೋಧಿಸಿ ಗ್ರಾಮಸ್ಥರು ಮರಳು ತುಂಬುವ ಜಾಗದ ಸ್ಥಳದಲ್ಲೇ ಟೆಂಟ್‌ಹಾಕಿ ಅಡುಗೆ ಮಾಡಿ ಸೋಮವಾರ ಪ್ರತಿಭಟಿಸಿದರು.

Advertisement

ತಾಲೂಕಿನ ಗಡಿಭಾಗದಲ್ಲಿರುವ ವೇದಾವತಿ ನದಿಪಾತ್ರದ ಗ್ರಾಮಗಳ ಗ್ರಾಮಸ್ಥರು ಯಾವುದೇ ಕಾರಣಕ್ಕೂ ನಾವು ವೇದಾವತಿ ನದಿಯ ಮರಳನ್ನು ಬೇರೆಡೆಗೆ ಅಕ್ರಮವಾಗಿ ಸಾಗಿಸಲು ಬಿಡುವುದಿಲ್ಲ. ಸುತ್ತಮುತ್ತಲ 10 ಹಳ್ಳಿಗಳಲ್ಲಿ
300ಕ್ಕೂ ಹೆಚ್ಚು ಕೊಳವೆಬಾವಿಗಳಿದ್ದು, ಮರಳು ತೆಗೆದರೆ ಅಂತರ್ಜಲ ಕುಸಿದು ಸಾವಿರಾರು ರೈತರು ನಷ್ಟ ಅನುಭವಿಸಬೇಕಾಗುತ್ತದೆ. ಈ ಭಾಗದ ರೈತರ ವಿರೋಧ ಲೆಕ್ಕಿಸದೆ ಸರ್ಕಾರ ಐದು ವರ್ಷಗಳ ಅವಧಿಗೆ ಮರಳು
ಟೆಂಡರ್‌ ನೀಡಿರುವುದು ಈ ಭಾಗದ ಜನರಿಗೆ ಸರ್ಕಾರವೆಸಗಿದ ದ್ರೋಹವೆಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. 

ಈ ವೇಳೆ ಮಾತನಾಡಿದ ಗ್ರಾಪಂ ಸದಸ್ಯ ಹನುಮಂತರಾಯ, ಕಳೆದ 20 ವರ್ಷಗಳಿಂದ ವೇದಾವತಿ ನದಿಪಾತ್ರದ ಮರಳನ್ನು ಸರ್ಕಾರ ಹರಾಜು ಮೂಲಕ ಕೆಲವು ಖಾಸಗಿಯವರಿಗೆ ನೀಡುತ್ತಾ ಬಂದಿದೆ. ಆದರೆ, ತೊರೆಬೀರನಹಳ್ಳಿ ಗ್ರಾಮದಲ್ಲಿ ಮಾತ್ರ ಯಾವುದೇ ಕಾರಣಕ್ಕೂ ಮರಳು ತುಂಬದಂತೆ ಕಳೆದ 20 ವರ್ಷಗಳಿಂದ ಜಾಗೃತಿ ವಹಿಸಲಾಗಿದೆ. ಗ್ರಾಮಸ್ಥರು ನಿರಂತರವಾಗಿ ವೇದಾವತಿ ನದಿಯಲ್ಲಿಯೇ ಮೊಕ್ಕಾಂ ಮಾಡಿ, ಮರಳು ಸಂರಕ್ಷಣೆ ಮಾಡಿದ್ದಾರೆ ಎಂದರು.

ಕೋನಿಗರಹಳ್ಳಿ, ಕಲಮರಹಳ್ಳಿ, ದೊಡ್ಡ ಬೀರನಹಳ್ಳಿ, ಟಿ.ಎನ್‌.ಕೋಟೆ, ಯಲಗಟ್ಟೆ, ಯಲಗಟ್ಟೆ ಗೊಲ್ಲರಹಟ್ಟಿ, ಗೊರ್ಲತ್ತು, ನಾರಾಯಣಪುರ ಮುಂತಾದ ಗ್ರಾಮಗಳ ರೈರು ಮರಳು ಸಾಗಾಣಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ, ಸರ್ಕಾರ ಇಬ್ಬರು ವ್ಯಕ್ತಿಗಳ ಹೆಸರಿನಲ್ಲಿ ಮುಂದಿನ ಐದು ವರ್ಷಗಳ ವರೆಗೆ ಟೆಂಡರ್‌ ನೀಡಿದೆ. ಈ ಭಾಗದ ರೈತರನ್ನು, ಸಾರ್ವಜನಿಕರನ್ನು ಲೆಕ್ಕಿಸದೆ ಟೆಂಡರ್‌ ಪ್ರಕ್ರಿಯೆ ನಡೆಸಲಾಗಿದೆ. ಟೆಂಡರ್‌ ಪಡೆದವರು ಮರಳು ತುಂಬಲು ನಿರಂತರವಾಗಿ ಪ್ರಯತ್ನಿಸುತ್ತಿದ್ದರೂ ಸಹ ಗ್ರಾಮಸ್ಥರ ಮುಷ್ಕರದಿಂದ ಸಾಧ್ಯವಾಗಿಲ್ಲ. ಸರ್ಕಾರ ಈ ಟೆಂಡರನ್ನು ರದ್ದು ಪಡಿಸಬೇಕು. ನೀರಿನ ಅಂತರ್ಜಲ ಹೆಚ್ಚಿಸುವ ದೃಷ್ಠಿಯಿಂದ ಮರಳು ಟೆಂಡರ್‌ ಮರು ಪರಿಶೀಲಸಬೇಕು ಎಂದು ಆಗ್ರಹಿಸಿದರು.

ಟೆಂಟ್‌ ಹಾಕಿ ಮೊಕ್ಕಾಂ ಹೂಡಿದ ಗ್ರಾಮಸ್ಥರು: ಕಳೆದ ಐದು ದಿನಗಳಿಂದ ಗ್ರಾಮಸ್ಥರು ಕೆರೆಯಲ್ಲಿಯೇ ಅಡುಗೆ ತಯಾರಿಸಿಕೊಂಡು ಮೊಕ್ಕಾಂ ಮಾಡಿ ಪ್ರತಿಭಟನೆ ನಡೆಸುತ್ತಿದ್ದರೂ ಯಾವ ಜನಪ್ರತಿನಿಧಿಗಳು ಸಹ ಭೇಟಿ ನೀಡಿಲ್ಲ. ರೈತರ ಆಹವಾಲನ್ನು ಕೇಳಿಯೇ ಇಲ್ಲ. ಕೇವಲ ಮರಳು ಸಾಗಣೆಗೆ ಪಾತ್ರ ಶಕ್ತಿ ಮೀರಿ ಪ್ರಯತ್ನ ನಡೆಯುತ್ತಿದೆ.

Advertisement

ಯಾವುದೇ ಕಾರಣಕ್ಕೂ ಈ ಗ್ರಾಮದ ಮರಳು ಹೊರ ಹೋಗಲು ಬಿಡುವುದಿಲ್ಲವೆಂದು ಗ್ರಾಮಸ್ಥರಾದ ಡಾ| ಶ್ರೀನಿವಾಸ್‌, ಎಚ್‌. ರಂಗಯ್ಯ, ಗೋಪಾಲಕೃಷ್ಣ, ಬಾಲು, ಪ್ರಹ್ಲಾದ್‌, ರಾಧಮ್ಮ, ಮಂಜಮ್ಮ, ರತ್ನಮ್ಮ, ದುರುಗಮ್ಮ,
ಕರಿಯಮ್ಮ, ಲಕ್ಷ್ಮೀದೇವಿ, ಸಾಕಮ್ಮ ಇತರರು ಎಚ್ಚರಿಸಿದರು.

ಯುವ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಎಚ್‌.ಎನ್‌. ಆದರ್ಶ ಮಾತನಾಡಿ, ತೊರೆಬೀರನಹಳ್ಳಿ ಗ್ರಾಮಸ್ಥರ ಹೋರಾಟ ಅತ್ಯಂತ ನೈಜ್ಯವಾಗಿದ್ದು, ನಮ್ಮ ಸಂಘಟನೆಯೂ ಸಹ ಇವರಿಗೆ ಬೆಂಬಲ ನೀಡಲಿದೆ. ಅಕ್ರಮದ ಬಗ್ಗೆ ಈಗಾಗಲೇ ನಮ್ಮ ಸಂಘಟನೆ ಸಂಬಂಧಪಟ್ಟ ಇಲಾಖೆಗೆ ಮನವಿಯೂ ನೀಡಿದ್ದು, ಅಧಿಕಾರಿಗಳು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದರು.

ರಾಜ್ಯ ಸರ್ಕಾರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಲೋಕೋಪಯೋಗಿ ಇಲಾಖೆ ನಿಯಮದಡಿ ಹರಾಜು ಪ್ರಕ್ರಿಯೆ
ನಡೆದಿದೆ. ಜಿಲ್ಲಾಧಿ ಕಾರಿಗಳೇ ಈ ಬಗ್ಗೆ ಟೆಂಡರ್‌ ಪರಿಶೀಲನೆ ನಡೆಸಿದ್ದು, ಕಾನೂನಿನ ರೀತಿ ಮುಂದಿನ ಐದು ವರ್ಷಗಳ ಅವಧಿಗೆ ಮರಳು ಸಾಗಾಟ ಮಾಡಲು ಟೆಂಡರ್‌ ನೀಡಲಾಗಿದೆ. ಸರ್ಕಾರದ ನಿಯಮ ಪಾಲನೆಗೆ ಪೊಲೀಸ್‌ ಇಲಾಖೆ ಸಹ ಸನ್ನದ್ಧವಾಗಿದೆ. ಧರಣಿ ನಿರತ ಗ್ರಾಮಸ್ಥರ ಮನವೊಲಿಸಲಾಗುವುದು. ಸರ್ಕಾರದ ನಿಯಮದಡಿ ಮಾತ್ರ ಮರಳು ಮಾರಾಟವಾಗುತ್ತಿದೆ. ಗ್ರಾಮಸ್ಥರು ಆರೋಪದಲ್ಲಿ ಯಾವುದೇ ಉರಳಿಲ್ಲ. ನಿಯಮ ಬಿಟ್ಟು ಯಾವುದೇ ಅಕ್ರಮ ನಡೆದಿಲ್ಲ. ಅಕ್ರಮ ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. 
ಎನ್‌. ತಿಮ್ಮಣ್ಣ, ವೃತ್ತ ನಿರೀಕ್ಷಕ.

Advertisement

Udayavani is now on Telegram. Click here to join our channel and stay updated with the latest news.

Next