Advertisement

ಇಂಗ್ಲಿಷ್‌ ಶಿಕ್ಷಕಿ ವರ್ಗಾವಣೆಗೆ ವಿರೋಧ

12:45 PM Jun 04, 2019 | Team Udayavani |

ಅಂಕೋಲಾ: ತಾಲೂಕಿನ ಅಗಸೂರಿನ ಹೊನ್ನಳ್ಳಿ ಹಿ.ಪ್ರಾ. ಶಾಲೆಯ ಇಂಗ್ಲಿಷ ಶಿಕ್ಷಕಿಯನ್ನು ಹೆಚ್ಚುವರಿಗೊಳಿಸಿ, ವರ್ಗಾವಣೆ ಮಾಡಿದನ್ನು ಖಂಡಿಸಿ ಗ್ರಾಮಸ್ಥರು, ಪಾಲಕರು ಹಾಗೂ ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನೆ ನಡೆಸಿದರು.

Advertisement

ಅಗಸೂರು ಗ್ರಾಪಂ ಸದಸ್ಯ ಗೋಪು ನಾಯಕ ಅಡ್ಲೂರು ಮಾತನಾಡಿ, ಈ ಶಾಲೆಯಲ್ಲಿ 10-15 ವರ್ಷಗಳಿಂದ ಮುಕ್ಕಾಂ ಹೂಡಿರುವ ಶಿಕ್ಷಕರನ್ನು ವರ್ಗಾವಣೆಗೊಳಿಸದೇ, ಕಳೆದೆರಡು ವರ್ಷಗಳಿಂದ ಇಂಗ್ಲಿಷ ಶಿಕ್ಷಕಿಯಾಗಿ ಬಂದ ಸೃಜನಾ ಬೀರಣ್ಣ ನಾಯಕರನ್ನು ವರ್ಗಾವಣೆಗೊಳಿಸಿ ಇಲ್ಲಿಯ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಶಿಕ್ಷಣ ಇಲಾಖೆ ಆಟ ಆಡಲು ಹೊರಟಿರುವುದು ಖಂಡನೀಯ. ಈ ಶಿಕ್ಷಕಿ ಶಾಲೆಗೆ ಸೇವೆಗೆ ಬಂದಾಗಿನಿಂದ ಮಕ್ಕಳ ಶೈಕ್ಷಣಿಕ ಗುಣಮಟ್ಟವು ಸಹ ಹೆಚ್ಚಾಗಿದೆ. ಆದರೆ ಇದೇ ಶಿಕ್ಷಕಿ ಗುರಿಯಾಗಿಸಿಟ್ಟುಕೊಂಡು ವರ್ಗಾವಣೆಗೊಳಿಸಿರುವುದು ಸರಿಯಲ್ಲ. ಈ ಬಗ್ಗೆ ಶಾಸಕರು, ಡಿಡಿಪಿಐ ಅವರು ಲಕ್ಷ್ಯವಹಿಸಿ ಶಿಕ್ಷಕಿಯ ಸೇವೆಯನ್ನು ಮುಂದುವರಿಸಬೇಕು ಎಂದು ಆಗ್ರಹಿಸಿದರು.

ಅಗಸೂರು ಗ್ರಾಪಂ ಉಪಾಧ್ಯಕ್ಷ ಯಶ್ವಂತ ತಿಮ್ಮಾ ಗೌಡ ಮಾತನಾಡಿ, ಎಲ್ಲಡೆ ಆಂಗ್ಲ ಮಾಧ್ಯಮವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯಲಾಗುತ್ತಿದೆ. ಆದರೆ ಇಲ್ಲಿರುವ ಒಬ್ಬ ಇಂಗ್ಲಿಷ ಶಿಕ್ಷಕಿಯನ್ನು ವರ್ಗಾವಣೆಗೊಳಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಶಿಕ್ಷಣ ಇಲಾಖೆ ಕೊಡಲಿ ಏಟು ನೀಡುತ್ತಿದೆ. ಈ ಶಿಕ್ಷಕಿಯ ಸೇವೆಯನ್ನು ಮುಂದುವರೆಸದೆ ಇದ್ದಲ್ಲಿ ಮಕ್ಕಳ ಶಾಲೆಗೆ ಕಳುಹಿಸದೇ ಪ್ರತಿಭಟನೆ ನಡೆಸಲಾಗುವುದು. ಕೂಡಲೇ ಈ ಬಗ್ಗೆ ಶಿಕ್ಷಣಾಧಿಕಾರಿಗಳು ಸಭೆ ನಡೆಸಿ ಕ್ರಮ ಕೈಗೊಳ್ಳುವಂತಾಗಬೇಕು ಎಂದು ಆಗ್ರಹಿಸಿದರು.

ಎಸ್‌ಡಿಎಂಸಿ ಅಧ್ಯಕ್ಷ ಪಾಂಡುರಂಗ ಬುದ್ದು ಗೌಡ ಮಾತನಾಡಿ ಶಿಕ್ಷಕಿಯ ವರ್ಗಾವಣೆಯನ್ನು ರದ್ದುಗೊಳಿಸಿ ಇದೇ ಶಾಲೆಯಲ್ಲಿ ಮುಂದುವರಿಸವಂತಾಗಬೇಕು. ಇಲ್ಲದಿದ್ದಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುವುದು ಅನಿವಾರ್ಯವಾದೀತು ಎಂದು ಎಚ್ಚರಿಸಿದರು.

ಎಸ್‌ಡಿಎಂಸಿ ಉಪಾಧ್ಯಕ್ಷೆ ಪ್ರಭಾವತಿ ಗೌಡ, ಪ್ರಮುಖರಾದ ರತ್ನಾ ಬುದ್ದು ಗೌಡ, ಗಿರೀಶ ಗೌಡ, ಕುಸಮಾ ಗೌಡ, ಆನಂದು ಗೌಡ, ಗಂಗಾಧರ ಗೌಡ, ಚಂದ್ರು ಗೌಡ, ಬುದ್ದು ಗೌಡ, ಮಂಗು ಗೌಡ, ಸುಮನಾ ಗೌಡ, ನಾಗವೇಣಿ ಗೌಡ, ಶಂಕ್ರವ್ವ ಫರ್ನಾಂಡಿಸ್‌, ಮಂಗು ಗೌಡ, ಈಶ್ವರ ಗೌಡ, ರುಕ್ಕು ಗೌಡ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

Advertisement

ಬಿಇಒ ಮೊಬೈಲ್ ಸ್ವಿಚ್ ಆಫ್‌:

ಈ ಬಗ್ಗೆ ಅಹವಾಲನ್ನು ಗ್ರಾಮಸ್ಥರು, ಪಾಲಕರು ಶಿಕ್ಷಣಾಧಿಕಾರಿಗಳ ಗಮನಕ್ಕೆ ತರಲು ಕ್ಷೇತ್ರ ಶಿಕ್ಷಣಾಕಾರಿ ಶ್ಯಾಮಲಾ ನಾಯಕ ಅವರು ಮೊಬೈಲ್ ಸಂಪರ್ಕಕ್ಕೆ ಪ್ರಯತ್ನಿಸಿದರು. ಆದರೆ ಅವರ ಮೊಬೈಲ್ ಸ್ವಿಚ್ ಆಪ್‌ ಇತ್ತು. ಶಾಲೆಯ ಮುಖ್ಯಾಧ್ಯಾಪಕರು ಮಾತ್ರ ಶಿಕ್ಷಣಾಧಿಕಾರಿಗಳ ಆದೇಶ ಬಂದಿದೆ. ಇದರನ್ವಯ ಶಿಕ್ಷಕಿಯನ್ನು ರಿಲೀವ್‌ ಮಾಡುತ್ತಿದ್ದೇನೆ. ವಾನೇನು ಮಾಡಲು ಬರುವದಿಲ್ಲ. ಶಿಕ್ಷಣಾಧಿಕಾರಿಗಳು ವೈಯಕ್ತಿಕ ನಂಬರ ನೀಡದಂತೆ ಹೇಳಿದ್ದಾರೆ ಎಂದು ಮುಖ್ಯಾಧ್ಯಾಪಕರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು. ಡಿಡಿಪಿಐ ಅವರು ನಿಮ್ಮ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನಿಮ್ಮ ಆಗ್ರಹವನ್ನು ಹೇಳಿ ಎಂದರು. ಆದರೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪಾಲಕರ- ಗ್ರಾಮಸ್ಥರ ಕೈಗೆ ಸಿಗದೇ ಇರುವುದರಿಂದ ಪರಿತಪಿಸಂತಾಯಿತು.
Advertisement

Udayavani is now on Telegram. Click here to join our channel and stay updated with the latest news.

Next