ಬಾಗಲಕೋಟೆ: ಜಿಲ್ಲೆಯ ಜಮಖಂಡಿ ತಾಲೂಕಿನ ಮರೆಗುದ್ದಿ, ಮುಧೋಳ ತಾಲೂಕಿನ ಬುದ್ನಿ ಪಿ.ಎಂ. ಗ್ರಾಮದ ವ್ಯಾಪ್ತಿಯಲ್ಲಿರುವ ಬಾಲಾಜಿ ಎಂ ಸ್ಯಾಂಡ್ ಕಾರ್ಖಾನೆ ಯಾವುದೇ ಕಾರಣಕ್ಕೂ ಆರಂಭಿಸಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿ ವಿವಿಧ ಗ್ರಾಮಗಳ ರೈತರು ಶನಿವಾರ ಪ್ರತಿಭಟನೆ ನಡೆಸಿದರು.
ಮುಧೋಳ ಮತ್ತು ಜಮಖಂಡಿ ತಾಲೂಕಿನ ವಿವಿಧ ಗ್ರಾಮಗಳ ರೈತರು ಜಿಲ್ಲಾಡಳಿತ ಭವನಕ್ಕೆ ಆಗಮಿಸಿ, ಪ್ರತಿಭಟನೆ ನಡೆಸಿ ಬಳಿಕ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ|ಕೆ. ರಾಜೇಂದ್ರ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ರೈತ ಮುಖಂಡರು ಮಾತನಾಡಿ, ಪ್ರಾರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಪ್ರಾರಂಭವಾದಾಗ ಇದರ ಭೀಕರತೆ ರೈತರಿಗೆ ಅರ್ಥವಾಗಲಿಲ್ಲ. ನಂತರದ ದಿನಗಳಲ್ಲಿ ರೈತರಿಗೆ ಮತ್ತು ಸಾರ್ವಜನಿಕರಿಗೆ ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿತ್ತು.
ಬ್ಲಾಸ್ಟಿಂಗ್‌ದಿಂದ ರೈತರ ಬೋರ್‌ವೆàಲ್‌ಗಳು ಬಂದ್ ಆದವು, ಮನೆಗಳು ಬಿರುಕು ಬಿಟ್ಟವು, ಹೊಲ- ಗದ್ದೆಗಳಲ್ಲಿ ಧೂಳು ತುಂಬಿದ್ದರಿಂದ ದನ -ಕರುಗಳಿಗೆ ಮೇವು ಹಾಕುವುದು ಸಹಿತ ದುಸ್ತರವಾಯಿತ್ತು. ಎರಡು ಗ್ರಾಮಗಳಲ್ಲಿ ಧೂಳು ಆವರಿಸಿ ವಾತಾವರಣ ಕಲುಷಿತಗೊಂಡು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ಆರೋಪಿಸಿದರು.
ಈ ಎಂ. ಸ್ಟಾಂಡ್ ಘಟಕಕ್ಕೆ ಕಾನೂನುಬಾಹಿರವಾಗಿ ಅನುಮತಿ ನೀಡಲಾಗಿತ್ತು. ಈ ಘಟಕದ ಪಕ್ಕದಲ್ಲಿಯೇ ಕಾಲುವೆ ಇದ್ದು, ಅರಣ್ಯ ಪ್ರದೇಶ ಇದೆ. ಈ ಘಟಕದಿಂದ ಮರಳನ್ನು ಸಾಗಿಸಲು ರಸ್ತೆಯೇ ಇಲ್ಲ. ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಈ ಘಟಕಕ್ಕೆ ಅನುಮತಿ ನೀಡಲಾಗಿದೆ. ಹೀಗಾಗಿ ಇದನ್ನು ರದ್ದುಗೊಳಿಸಿ, 60 ದಿನಗಳ ಕಾಲ ಧರಣಿ ಸತ್ಯಾಗ್ರಹ ನಡೆಸಲಾಗಿತ್ತು.
ನಂತರ 2019 ರ ಜುಲೈ ಮೊದಲನೇ ವಾರದಲ್ಲಿ ಜಿಲ್ಲಾಧಿಕಾರಿ ಕಛೇರಿ ಮುಂದೆ ಮಳೆಯನ್ನು ಲೆಕ್ಕಿಸದೆ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿ ಅಂದಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಚಿವರಿಗೆ ಮನವಿ ಸಲ್ಲಿಸಲಾಗಿತ್ತು. ಆಗ ಈ ಘಟಕ ಬಂದ್ ಆಗಿತ್ತು. ಈಗ ಪುನಃ ಕಾರ್ಖಾನೆ ಆರಂಭಿಸಲು ತಯಾರಿ ನಡೆಸಿದ್ದು, ಯಾವುದೇ ಕಾರಣಕ್ಕೂ ಅನುಮತಿ ಕೊಡಬಾರದು ಎಂದು ಆಗ್ರಹಿಸಿದರು. ರೈತ ಸಂಘದ ಮುಖಂಡರಾದ ಬಸವಂತಪ್ಪ ಕಾಂಬಳೆ, ಯಲ್ಲಪ್ಪ ಹೆಗಡೆ ಮುಂತಾದವರು ಪಾಲ್ಗೊಂಡಿದ್ದರು.