Advertisement

ಮದ್ಯದಂಗಡಿ ಆರಂಭಕ್ಕೆ ವಿರೋಧ

02:17 PM Mar 30, 2022 | Team Udayavani |

ಚಳ್ಳಕೆರೆ: ತಾಲೂಕಿನ ತಳಕು ಹೋಬಳಿಯ ತಿಮ್ಮಪ್ಪಯ್ಯನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಸಾಮ್ಯದ ಎಂಎಸ್‌ಐಎಲ್‌ ಮದ್ಯಂಗಡಿಯನ್ನು ಆರಂಭಿಸುವ ನಿಟ್ಟಿನಲ್ಲಿ ಈಗಾಗಲೇ ನಿವೇಶನವೊಂದನ್ನು ಗುರುತಿಸಲಾಗಿದ್ದು ಈ ಜಾಗ ಸರ್ಕಾರಿ ಪ್ರಾಥಮಿಕ ಶಾಲೆಯ ಸಮೀಪದಲ್ಲಿದೆ. ಯಾವುದೇ ಕಾರಣಕ್ಕೂ ಗ್ರಾಮದಲ್ಲಿ ಮದ್ಯದಂಗಡಿ ಆರಂಭಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಗ್ರಾಮಸ್ಥರು ನಗರದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ಎನ್‌. ರಘುಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.

Advertisement

ಮುಖಂಡರಾದ ಎಂ. ಶಾಂತಮ್ಮ, ಹನುಮಂತಪ್ಪ, ಶಿವಣ್ಣ, ಮಹೇಂದ್ರ, ತಿಪ್ಪೇಸ್ವಾಮಿ, ಪ್ರಕಾಶ್‌, ಕೆ.ಒ. ಮುದ್ದಣ್ಣ, ಮಂಜಣ್ಣ, ಕರಿಯಣ್ಣ, ಹರಿಪ್ರಸಾದ್‌, ಪಾಲಮ್ಮ ಮೊದಲಾದವರು ಮಾತನಾಡಿ, ಈಗಾಗಲೇ ಗ್ರಾಮದ ಕೆಲವು ಖಾಸಗಿ ಅಂಗಡಿಗಳಲ್ಲಿ ಪ್ರತಿನಿತ್ಯ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದರಿಂದ ನೂರಾರು ಬಡ ಕುಟುಂಬಗಳು ಹಾಳಾಗಿವೆ. ಯುವಕರು ಹಾಗೂ ಮದ್ಯವ್ಯಸನಿಗಳು ಸಂಜೆ ವೇಳೆ ಕುಡಿದು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಓಡಾಡುತ್ತಾರೆ. ರಸ್ತೆಯಲ್ಲಿ ಮಹಿಳೆಯರು ಓಡಾಟ ಮಾಡುವುದೇ ಕಷ್ಟವಾಗಿದೆ. ಇದರಿಂದ ಗ್ರಾಮವೂ ಸೇರಿದಂತೆ ಗಿಡ್ಡಾಪುರ, ಗಜ್ಜಾಗನಹಳ್ಳಿ, ದೇವರಹಳ್ಳಿ, ಓಬಯ್ಯನಹಟ್ಟಿ, ಜಂಭಯ್ಯನಹಟ್ಟಿ, ಗೊಲ್ಲರಹಟ್ಟಿ ವ್ಯಾಪ್ತಿಯ ನೂರಾರು ಕುಟುಂಬಗಳು ಕುಡಿತಕ್ಕೆ ಬಲಿಯಾಗುವ ಎಲ್ಲಾ ಸಾಧ್ಯತೆಗಳಿವೆ. ಗ್ರಾಮಗಳಲ್ಲಿ ನಿತ್ಯ ಜಗಳ ಹಾಗೂ ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ. ಆದ್ದರಿಂದ ಗ್ರಾಮದಲ್ಲಿ ಸರ್ಕಾರಿ ಮದ್ಯದಂಗಡಿ ಆರಂಭಿಸದಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್‌ ಎನ್‌. ರಘುಮೂರ್ತಿ, ಗ್ರಾಮದಲ್ಲಿ ಸರ್ಕಾರಿ ಮದ್ಯಂಗಡಿ ತೆರೆಯದಂತೆ ಸಲ್ಲಿಸಿರುವ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸಂಬಂಧಪಟ್ಟ ಇಲಾಖೆಗೆ ಇಂದೇ ಕಳುಹಿಸಿಕೊಡುತ್ತೇನೆ. ಜಿಲ್ಲಾಧಿಕಾರಿಗಳ ಸೂಚನೆಯಂತೆ ಕಾರ್ಯ ನಿರ್ವಹಿಸುವುದಾಗಿ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next