ರಾಯಚೂರು: ಹೈದರಾಬಾದ್-ಕರ್ನಾಟಕ ಭಾಗಕ್ಕೆ ಗದಗ ಜಿಲ್ಲೆಯ ರೋಣ ತಾಲೂಕಿನ 60 ಗ್ರಾಮಗಳನ್ನು ಸೇರಿಸುವ ಮೂಲಕ ಸಂವಿಧಾನದ 371(ಜೆ) ಸೌಲಭ್ಯ ವಿಸ್ತರಿಸಿರುವ ಸಚಿವ ಸಂಪುಟದ ನಿರ್ಧಾರಕ್ಕೆ ಜಿಲ್ಲೆಯಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ನಗರದ ಅಂಬೇಡ್ಕರ್ ವೃತ್ತದಲ್ಲಿ ಬೆಳಗ್ಗೆ ಹೈದರಾಬಾದ್ ಕರ್ನಾಟಕ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸದಸ್ಯರು ಸಚಿವರಾದ ಎಚ್. ಕೆ.ಪಾಟೀಲ್, ಎಚ್.ಎಂ.ರೇವಣ್ಣ, ಶರಣಪ್ರಕಾಶ ಪಾಟೀಲ್, ಈಶ್ವರ ಖಂಡ್ರೆ, ಬಸವರಾಜ ರಾಯರೆಡ್ಡಿ, ಸಂತೋಷ ಲಾಡ್, ಪ್ರಿಯಾಂಕ್ ಖರ್ಗೆ ಅವರ ಪ್ರತಿಕೃತಿ ದಹಿಸಿದರು. ಸಿಎಂ ಸಿದ್ದರಾಮಯ್ಯ, ಸಚಿವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಜಿಲ್ಲಾಧಿಕಾರಿ ಮೂಲಕ ಸಿಎಂ ಸಿದ್ದರಾಮಯ್ಯರಿಗೆ ಮನವಿ ಸಲ್ಲಿಸಿದರು. ಹೈ-ಕ ಹಿಂದುಳಿದ ಕಾರಣಕ್ಕೆ 371 ಕಲಂ ತಿದ್ದುಪಡಿ ಮಾಡಿ ವಿಶೇಷ ಸ್ಥಾನಮಾನ ನೀಡುವ ಮೂಲಕ ಅಭಿವೃದ್ಧಿಗೆ ಒತ್ತು ನೀಡಲಾಯಿತು. ವಿಶೇಷ ಸ್ಥಾನಮಾನ ಸಿಕ್ಕು ಐದು ವರ್ಷಗಳಾದರೂ ರಾಜ್ಯ ಸರ್ಕಾರ ಸರಿಯಾಗಿ ಅನುಷ್ಠಾನಗೊಳಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಆದರೆ, ಇಂಥ ಪರಿಸ್ಥಿತಿಯಲ್ಲಿ ಗದಗ ಜಿಲ್ಲೆಯ ರೋಣ ತಾಲೂಕಿನ 60 ಗ್ರಾಮಗಳನ್ನು ಹೈ-ಕ ಪ್ರದೇಶಕ್ಕೆ ಸೇರಿಸುವ ಸಚಿವ ಸಂಪುಟದ ನಿರ್ಧಾರ ಈ ಭಾಗಕ್ಕೆ ಸೌಲಭ್ಯ ವಂಚಿಸುವ ಹುನ್ನಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಸಂಪುಟದ ಉಪಸಮಿತಿ ಶಿಫಾರಸುಗಳಂತೆ ಹರಪನಹಳ್ಳಿ ತಾಲೂಕನ್ನು ಈ ಹಿಂದೆ ಬಳ್ಳಾರಿ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಕಾರಣ ಸೇರಿಸಿರುವುದಕ್ಕೆ ಆಕ್ಷೇಪವಿಲ್ಲ. ಸಚಿವ ಸಂಪುಟದ ನಿರ್ಧಾರ ಹೈ-ಕ ಪ್ರದೇಶದ ಸೌಕರ್ಯ ವಂಚಿಸುವ ಹುನ್ನಾರವಾಗಿದೆ. ಈ ಕುರಿತು ನಡೆದ ಸಭೆಯಲ್ಲಿ ಹೈ-ಕ ಪ್ರದೇಶದ ಶಾಸಕರು ಹಾಗೂ ಸಚಿವರು ಸಮ್ಮತಿ ಸೂಚಿಸಿರುವ ಕ್ರಮ ಖಂಡನೀಯ. ಈ ನಿರ್ಧಾರವನ್ನು ಕೂಡಲೇ ಕೈಬಿಡಬೇಕು. ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ, ಆರು ಜಿಲ್ಲೆಗಳಲ್ಲೂ ನಿರಂತರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಒಕ್ಕೂಟದ ಮುಖಂಡರಾದ ಬಸವರಾಜ ಕಳಸ, ಅಶೋಕ ಕುಮಾರ ಸಿ.ಕೆ.ಜೈನ, ಸಿರಾಜ್, ಡಿ.ವೀರೇಶ, ಹೀರಾ, ಪ್ರಕಾಶ ವಕೀಲ, ಕೆ.ರಾಜೇಶಕುಮಾರ, ಶಿವರಾಜ, ಖಲೀಲ್ ಪಾಷಾ, ರುದ್ರಯ್ಯ ಗುಣಾರಿ, ಎಂ.ಎನ್. ಮೈತ್ರಿಕರ್, ರಾಮು ಸೇರಿ ನೂರಾರು ಜನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.