ಚಿಕ್ಕಮಗಳೂರು: ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಪ್ರದೇಶವೆಂದು ಘೋಷಿಸುವುದನ್ನು ವಿವಿಧ ಸಂಘಟನೆಗಳ ಮುಖಂಡರು ತೀವ್ರವಾಗಿ ವಿರೋಧಿಸಿದರು.
ಮಂಗಳವಾರ ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ವಿವಿಧ ಮುಖಂಡರ ಸಭೆಯಲ್ಲಿ ಇದಕ್ಕೆ ವಿರೋಧ ವ್ಯಕ್ತವಾಯಿತು. ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಬೋಜೇಗೌಡ ಮಾತನಾಡಿ, ಸಂರಕ್ಷಿತಮೀಸಲು ಪ್ರದೇಶದ ವ್ಯಾಪ್ತಿಯಲ್ಲಿರುವ ಜನರ ಆತಂಕ ನಿವಾರಿಸುವುದು ಹಾಗೂ ಸ್ಥಳೀಯ ನಿವಾಸಿಗಳ ಒತ್ತಾಯಗಳನ್ನು ಈಡೇರಿಸಲು ಪ್ರಮುಖ ಆದ್ಯತೆ ನೀಡಬೇಕೆಂದು ತಿಳಿಸಿದರು.
ಸಂರಕ್ಷಿತ ಮೀಸಲು ಪ್ರದೇಶದ ಘೋಷಣೆಯಿಂದ ಆ ಭಾಗದ ಹಲವಾರು ಹಳ್ಳಿಗಳ ಜನರಿಗೆ ಆಗುವ ಸಮಸ್ಯೆಯ ಬಗ್ಗೆ ಅಲ್ಲಿನ ನಿವಾಸಿಗಳಲ್ಲಿ ಆತಂಕವಿದೆ. ಜನ-ಜಾನುವಾರು ಮುಂದಿನ ದಿನಗಳಲ್ಲಿ ಬದುಕಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಬಾರದು. ಈಗಾಗಲೇ ಹಲವು ಅರಣ್ಯಸಂರಕ್ಷಣಾ ಯೋಜನೆಗಳ ಹೆಸರಿನಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೇಲೆ ಸದಾ ತೂಗುಕತ್ತಿ ನೇತಾಡುತ್ತಿದೆ. ಜನರ ಬದುಕು ಆತಂಕದಲ್ಲಿದೆ ಎಂದರು.
ಚಿಕ್ಕಮಗಳೂರು ಉಪಸಂರಕ್ಷಣಾಕಾರಿ ಜಗದೀಶ್ ಮಾತನಾಡಿ, ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಪ್ರದೇಶದಲ್ಲಿ ಭವಿಷ್ಯದಲ್ಲಿ ಸಾರ್ವಜನಿಕ ಉಪಯೋಗಕ್ಕೆ ಹಾಗೂ ಇತರೆ ಸರ್ಕಾರಿ ಉದ್ದೇಶಗಳಿಗೆ ಬೇಕಾಗುವ ಕಂದಾಯಭೂಮಿ ಇಲ್ಲವಾಗುತ್ತದೆ ಎಂಬ ಆಕ್ಷೇಪಣೆ ಬಂದಿದ್ದರಿಂದ ನಮೂನೆ 50, 53, 57 ಹಾಗೂ 94ಸಿ ಯಲ್ಲಿ ಸ್ವೀಕೃತಗೊಂಡಿರುವ ಅರ್ಜಿಗಳನ್ನು ಹಾಗೂ ಅದರ ವಿಸ್ತೀರ್ಣದ ಬಗ್ಗೆ ನಿಖರ ಮಾಹಿತಿಯೊಂದಿಗೆ ಕಂದಾಯ ಇಲಾಖೆಗೆ ಸೇರಿದ ಪ್ರದೇಶದಲ್ಲಿ ಅರಣ್ಯ, ಕಂದಾಯ ಭೂಮಾಪನಾ ಇಲಾಖೆಯವರು ದಾಖಲೆಗಳನ್ನು ಜಂಟಿಯಾಗಿ ಪರಿಶೀಲಿಸಿ ಮುಂದಿನ ಸಭೆಗೆ ಸಲ್ಲಿಸಲು ಇದೇ ಜು.28 ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಕುರಿತಾದ ಸಭೆಯಲ್ಲಿ ಸೂಚಿಸಲಾಗಿದೆ ಎಂದರು.
2017ರ ಏಪ್ರಿಲ್ 27 ರಂದು ಮುಳ್ಳಯ್ಯನಗಿರಿ ಮೀಸಲು ಪ್ರದೇಶವೆಂದು ಘೋಷಿಸಿರುವುದರಿಂದ ಮುಂದಿನ ದಿನಗಳಲ್ಲಿ ಪರಿಸರ ನಾಶದಿಂದ ಉಂಟಾಗುವ ಸಮಸ್ಯೆಗಳನ್ನು ತಪ್ಪಿಸಬಹುದೆಂದು ಶಾಸಕರಾದ ಸಿ.ಟಿ.ರವಿಯವರು ಚಿಕ್ಕಮಗಳೂರಿನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಶಿಫಾರಸ್ಸುಪತ್ರ ಬರೆದಿದ್ಯಾಗಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಮಾಹಿತಿ ನೀಡಿದರು.
ಯೋಜನಾ ವ್ಯಾಪ್ತಿಯ ಪ್ರದೇಶದ ಜನರ ಪರವಾಗಿ ವಿವಿಧ ರಾಜಕೀಯ ಮುಖಂಡರಾದ ಎಚ್.ಎಚ್. ದೇವರಾಜ್, ಎಂ.ಎಲ್. ಮೂರ್ತಿ, ಗಾಯತ್ರಿ ಶಾಂತೇಗೌಡ, ಕೆ.ಟಿ. ರಾಧಾಕೃಷ್ಣ, ಬಿಜೆಪಿ ಜಾಗರ ಹೋಬಳಿ ಅಧ್ಯಕ್ಷ ರವಿ, ರೇಣುಕಾರಾಧ್ಯ ಮಾತನಾಡಿದರು.