ಬೆಂಗಳೂರು: ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳನ್ನು ಅತ್ಯಾಚಾರ ಆರೋಪದಿಂದ ಮುಕ್ತಗೊಳಿಸಿರುವ ಅಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಂತ್ರಸ್ಥೆ ರಾಮಕಥಾ ಗಾಯಕಿ ಹೈಕೋರ್ಟ್‌ನಲ್ಲಿ ಕ್ರಿಮಿನಲ್ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ.
ಈ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ರತ್ನಕಲಾ ಅವರಿದ್ದ ಏಕಸದಸ್ಯ ಪೀಠ ಮಂಗಳವಾರ ನಡೆಸಿತು. ವಿಚಾರಣೆ ವೇಳೆ ಶ್ರೀಗಳ ಪರ ವಾದ ಮಂಡಿಸಿದ ವಕೀಲ ಅರುಣ್ ಶ್ಯಾಮ್, ಪ್ರಕರಣದಲ್ಲಿ ಶ್ರೀಗಳನ್ನು ದೋಷಮುಕ್ತಗೊಳಿಸಿ ಅಧೀನ ನ್ಯಾಯಾಲಯ ನೀಡಿರುವ ತೀರ್ಪು ಪ್ರಶ್ನಿಸಿ ಪ್ರಾಸಿಕ್ಯೂಶನ್ ಈಗಾಗಲೇ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ.
ಹೀಗಾಗಿ ಸಂತ್ರಸ್ಥೆ ಕೂಡ ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲ. ಹೀಗಾಗಿ ಈ ಅರ್ಜಿಯನ್ನು ವಿಚಾರಣೆಗೆ ಪುರಸ್ಕರಿಸಬಾರದು ಎಂದು ನ್ಯಾಯಪೀಠಕ್ಕೆ ಕೋರಿದರು. ಸಂತ್ರಸ್ಥೆ ಪರ ಹಿರಿಯ ವಕೀಲ ಎಂ.ಟಿ ನಾಣಯ್ಯ ವಾದಿಸಿ, ಸಂತ್ರಸ್ಥೆ ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲ ಸರಿ, ಆದರೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಏಕಸದಸ್ಯ ಪೀಠ ನೀಡಿರುವ ಆದೇಶ ವಿಭಾಗೀಯ ಪೀಠದಲ್ಲಿ ವಿಚಾರಣಾ ಹಂತದಲ್ಲಿದೆ, ಹೀಗಾಗಿ ಈ ಅರ್ಜಿಯನ್ನು ವಿಚಾರಣೆಗೊಳಪಡಿಸಬಹುದು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶ್ರೀಗಳ ಪರ ವಕೀಲರು, ಹಾಗಾದರೇ ವಿಭಾಗೀಯ ಪೀಠದಲ್ಲಿ ಸಲ್ಲಿಕೆಯಾಗಿರುವ ಅರ್ಜಿ ಇತ್ಯರ್ಥಗೊಂಡ ಬಳಿಕ ಈ ಅರ್ಜಿ ವಿಚಾರಣೆ ನಡೆಯಲಿ ಎಂದು ನ್ಯಾಯಪೀಠಕ್ಕೆ ಕೋರಿದರು. ವಾದ -ಪ್ರತಿವಾದ ಆಲಿಸಿದ ನ್ಯಾಯಪೀಠ, ಜುಲೈ ಮೂರನೇ ವಾರಕ್ಕೆ ವಿಚಾರಣೆ ಮುಂದೂಡಿತು.
ರಾಮಕಥಾ ಗಾಯಕಿ ಮೇಲೆ ಅತ್ಯಾಚಾರ ನಡೆಸಿದ ಆರೋಪ ಪ್ರಕರಣದಿಂದ ರಾಘವೇಶ್ವರ ಶ್ರೀಗಳನ್ನು ದೋಷಮುಕ್ತಗೊಳಿಸಿ 2016ರ ಮಾರ್ಚ್ 31ರಂದು ಅಧೀನ ನ್ಯಾಯಾಲಯ ತೀರ್ಪು ನೀಡಿತ್ತು. ಇದನ್ನ ಪ್ರಶ್ನಿಸಿ ಸಿಐಡಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ.