ಭಟ್ಕಳ: ದುಬೈನಿಂದ ಆಗಮಿಸಿದ ಜನರನ್ನು ಬಸ್ ನಿಲ್ದಾಣ ಹಾಗೂ ಜನವಸತಿ ಪ್ರದೇಶದಲ್ಲಿರುವ ವಸತಿಗೃಹದಲ್ಲಿ ಕ್ವಾರಂಟೈನ್ ಮಾಡಿರುವುದಕ್ಕೆ ಅಕ್ಕಪಕ್ಕದ ನಾಗರಿಕರು ತೀವ್ರ ವಿರೋಧ ವ್ಯಕ್ತಪಡಿಸಿದರು.
ದುಬೈನಿಂದ ಬಂದ 184 ಜನರಲ್ಲಿ 68 ಜನರನ್ನು ಬಸ್ ನಿಲ್ದಾಣದ ಪಕ್ಕದಲ್ಲಿರುವ ಹೊಟೇಲ್‌ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಈ ಬಗ್ಗೆ ಸುತ್ತಮುತ್ತಲಿನ ನಾಗರಿಕರು ವಿರೋಧ ವ್ಯಕ್ತಪಡಿಸಿದರು.
ಅಂಜುಮನ್ ಕಾಲೇಜಿನ ನಿವೃತ್ತ ಪ್ರಾಚಾರ್ಯ ಹಾಗೂ ಸಾಹಿತಿ ಡಾ| ಸಯ್ಯದ್ ಝಮೀರುಲ್ಲಾ ಷರೀಪ್ ಮಾತನಾಡಿ, ಜನವಸತಿ ಇರುವ ಪ್ರದೇಶದಲ್ಲಿ ಹೊರದೇಶದಿಂದ ಬಂದವರನ್ನು ಕ್ವಾರಂಟೈನ್ ಮಾಡಿರುವುದು ಸರಿಯಲ್ಲ. ಪೊಲೀಸರು ನಾವು ಅಡ್ಡಾಡುವ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿ ತಿರುಗಾಡಲು ತೊಂದರೆ ಕೊಟ್ಟಿದ್ದಾರೆ. ಪದೇಪದೇ ಪೊಲೀಸರಿಗೆ ವಿವರ ಕೊಡಲು ಸಾಧ್ಯವೇ? ಎಂದು ಪ್ರಶ್ನಿಸಿದ ಅವರು, ಕ್ವಾರಂಟೈನ್ ಮಾಡಲಾದ ಕೇಂದ್ರದ ಸುತ್ತಮುತ್ತ ಹಲವು ಮನೆಗಳಿದ್ದು, ಅಂಗಡಿಗಳೂ ಇವೆ. ದಿನಂಪ್ರತಿ ಇಲ್ಲಿ ನೂರಾರು ಜನ ತಿರುಗಾಡುತ್ತಾರೆ. ಕ್ವಾರಂಟೈನ್ ಮಾಡಲಾದ ಹೊಟೇಲ್‌ನಲ್ಲಿ ಮಕ್ಕಳ ವೈದ್ಯರ ಕ್ಲಿನಿಕ್ ಇದೆ. ಚಿಕ್ಕ ಮಕ್ಕಳು ಬರುವುದರಿಂದ ತೊಂದರೆಯಾಗಲಿದೆ. ಕ್ವಾರಂಟೈನ್ ಮಾಡಲು ಈಗಾಗಲೇ ಮುಡೇìಶ್ವರದಲ್ಲಿ ಹೋಟೆಲ್ ಗುರುತು ಮಾಡಿದ್ದರೂ ಸಹ ಭಟ್ಕಳದ ಜನವಸತಿ ಪ್ರದೇಶದಲ್ಲಿ ಮಾಡಿರುವುದು ಸರಿಯಲ್ಲ ಎಂದರು.
ಕ್ವಾರಂಟೈನ್‌ನಿಂದ ನಮಗ್ಯಾರಿಗೂ ತೊಂದರೆಯಾಗದಂತೆ ತಾಲೂಕು ಮತ್ತು ಜಿಲ್ಲಾಡಳಿತ ಗಮನಹರಿಸಬೇಕು ಎಂದು ಅವರು ಆಗ್ರಹಿಸಿದರು. ಮಕ್ಕಳ ವೈದ್ಯ ಡಾ| ಖಾನ್ ಸಹ ಇಲ್ಲಿ ಕ್ವಾರಂಟೈನ್ ಮಾಡುವುದರಿಂದ ತೊಂದರೆಯಾಗಲಿದೆ ಎಂದರು.