ಬಳ್ಳಾರಿ: ರೈಲ್ವೆ ಇಲಾಖೆ ಖಾಸಗೀಕರಣ ಮಾಡಲು ಮುಂದಾಗಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ ನಗರದ ರೈಲು ನಿಲ್ದಾಣದ ಆವರಣದಲ್ಲಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ಸಂಘಟನೆಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ರೈಲ್ವೆ ಇಲಾಖೆ ಖಾಸಗೀಕರಣದಿಂದ ಪ್ರಯಾಣಿಕರಿಗೆ ಲಭಿಸುತ್ತಿದ್ದ ಶೇ. 43ರಷ್ಟು ಸಬ್ಸಿಡಿ ರದ್ದಾಗಲಿದೆ. ರೈಲ್ವೆ ಕೋಚ್‌ಗಳು, ಗಾಲಿಗಳು ಮತ್ತು ರೈಲ್ವೆ ಕಾರ್ಯಾಗಾರ ಇತ್ಯಾದಿಗಳಿಗೆ ಸರ್ಕಾರ ಉತ್ಪಾದನಾ ಆರ್ಡರ್‌ಗಳನ್ನು ನಿಲ್ಲಿಸುತ್ತದೆ. ಅವೆಲ್ಲ ದೇಶಿಯ ಖಾಸಗಿ ಬಂಡವಾಳಿಗರು ಮತ್ತು ಅಮೆರಿಕದ ಜನರಲ್ ಎಲೆಕ್ಟ್ರಿಕಲ್‌ನಂಥ ಕಂಪನಿಗಳ ಪಾಲಾಗುವುದರಿಂದ ಈಗಿರುವ ರೈಲ್ವೆ ಉತ್ಪಾದನಾ ಘಟಕಗಳು ಮುಚ್ಚಿ ಅಲ್ಲಿರುವ ಸಾವಿರಾರು ನೌಕರರುಕೆಲಸ ಕಳೆದುಕೊಳ್ಳಲಿದ್ದಾರೆ.
ಕಾಯಂ ನೌಕರರ ಸ್ಥಾನಗಳಲ್ಲಿ ಕೆಲಸಗಾರರು, ಟ್ರೈನೀಸ್, ಹೊರಗುತ್ತಿಗೆ ಕಾರ್ಮಿಕರನ್ನು ನೇಮಿಸಿಕೊಂಡು ಖಾಸಗಿಯವರು ವಿಪರೀತ ಲಾಭ ಮಾಡಿಕೊಳ್ಳಲಿದ್ದಾರೆ. ರೈಲ್ವೆಯಲ್ಲಿ ಮಹಿಳೆಯರಿಗೆ, ದಲಿತರಿಗೆ, ವಿಕಲಚೇತನರು, ಕ್ರೀಡಾಪಟುಗಳಿಗೆ ನೇಮಕಾತಿಗಳಲ್ಲಿ ಸಿಗುತ್ತಿದ್ದ ಎಲ್ಲ ರೀತಿಯ ಮೀಸಲಾತಿಗಳು ರದ್ದಾಗಲಿವೆ. ಜತೆಗೆ ಖಾಸಗೀಕರಣ ಮಾಡಲು ಮುಂದಾಗಿರುವ ದೇಶದ 109 ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಸೇವಾ ಸೌಲಭ್ಯ ಒದಗಿಸುವುದಕ್ಕಿಂತ ಅದರ ಸುತ್ತಮುತ್ತಲಿನ ಅಪಾರ ಪ್ರಮಾಣದ ಭೂಮಿಯನ್ನು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಮತ್ತು ಕಮರ್ಷಿಯಲ್ ಕಾಂಪ್ಲೆಕ್ಸ್ ಮೊದಲಾದ ವಾಣಿಜ್ಯೀಕರಣಕ್ಕೆ ಬಳಸಲು ಅವಕಾಶ ನೀಡಿದಂತಾಗುತ್ತದೆ. ಆದ್ದರಿಂದ ಕೂಡಲೇ ರೈಲ್ವೆ ಇಲಾಖೆ ಖಾಸಗಿಕರಣವನ್ನು ನಿಲ್ಲಿಸಬೇಕು ಎಂದವರು ಒತ್ತಾಯಿಸಿದ್ದಾರೆ. ಬಳಿಕ ನಿಲ್ದಾಣದ ಅಧೀಕ್ಷಕರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಅಧ್ಯಕ್ಷ ಆರ್. ಭಾಸ್ಕರ್‌ರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ. ಸತ್ಯಬಾಬು, ಕಾರ್ಯದರ್ಶಿ ಯು. ಬಸವರಾಜ್, ವಿ.ಎಸ್. ಶಿವಶಂಕರ್, ಚಂದ್ರಕುಮಾರಿ, ಮಲ್ಲಮ್ಮ, ಎಚ್. ತಿಪ್ಪಯ್ಯ, ಪಾಂಡುರಂಗ, ಗಾಳಿ ಬಸವರಾಜ್ ಇದ್ದರು.