ಮದ್ದೂರು: ಕಳಪೆ ಬಿತ್ತನೆ ಬೀಜ ವಿತರಿಸಿರುವ ಅಂಗಡಿ ಮಾಲೀಕರ ವಿರುದ್ಧ ಚನ್ನೇಗೌಡನದೊಡ್ಡಿ ಗ್ರಾಮದ ರೈತರು ಶನಿವಾರ ಪ್ರತಿಭಟನೆ ನಡೆಸಿದರು.
ತಾಲೂಕಿನ ಚನ್ನೇಗೌಡನದೊಡ್ಡಿ ಗ್ರಾಮದ ಸ್ಥಳೀಯ ರೈತರು ಜಮೀನಿನ ಬಳಿ ಅಂಗಡಿ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಗುಣಮಟ್ಟದ ಬಿತ್ತನೆ ಬೀಜ ವಿತರಿಸದೆ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಆರೋಪಿಸಿದರು.
ಕಳೆದ ಒಂದು ವಾರದ ಹಿಂದೆ ಮಂಡ್ಯದ ಹೊಳಲು ಸರ್ಕಲ್ ಬಳಿ ಇರುವ ಕಾವೇರಿ ಅಂಗಡಿಯೊಂದರಲ್ಲಿ ಭತ್ತದ ಬಿತ್ತನೆ ಬೀಜವನ್ನು ಖರೀದಿಸಿ, ಭತ್ತದ ಸಸಿ ಮಡಿ ಹಾಕಿ ಒಂದು ವಾರ ಕಳೆದರೂ ಭತ್ತದ ಪೈರು ಬರದೆ ನಷ್ಟವಾಗಿದೆ ಎಂದು ದೂರಿದರು. ಅಂಗಡಿ ಮಾಲೀಕರಿಗೆ ಬದಲಿ ಬಿತ್ತನೆ ಬೀಜ ಹಾಗೂ ಹಣ ವಾಪಸ್ ನೀಡುವಂತೆ ರೈತ ರಾಮಣ್ಣ ಮನವಿ ಮಾಡಿದರೂ, ಮಾಲೀಕ ಯಾವುದೇ ಪ್ರತಿಕ್ರಿಯೆ ನೀಡದೆ ವಿಳಂಬ ಮಾಡುತ್ತಿದ್ದಾರೆ. ಇವರ ವಿರುದ್ಧ ಕೃಷಿ ಇಲಾಖೆ ಅಧಿಕಾರಿಗಳಿಗೆ ದೂರು ನೀಡುವುದಾಗಿ ಹೇಳಿದರು.
ರೈತರಿಗೆ ಸಂಕಷ್ಟ: ಸಂಕಷ್ಟದಲ್ಲಿರುವ ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ವಿತರಿಸುವಂತೆ ಸರಕಾರ ಹಾಗೂ ಜಿಲ್ಲಾಡಳಿತ ಸೂಚಿಸಿದ್ದರೂ, ಕೆಲ ಅಂಗಡಿ ಮಾಲೀಕರು ಕಳಪೆ ಬಿತ್ತನೆ ಬೀಜ ವಿತರಿಸುತ್ತಿದ್ದಾರೆ. ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತಿದ್ದು, ಬಿತ್ತನೆ ಬೀಜದ ಹಣವನ್ನು ವಾಪಸ್ ನೀಡದಿದ್ದಲ್ಲಿ ಕೃಷಿ ಇಲಾಖೆ ಎದುರು ಪ್ರತಿಭಟನೆ ಹಮ್ಮಿಕೊಳ್ಳುವ ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ರೈತರಾದ ನಾಗಣ್ಣ, ನಾಗರಾಜು, ರಮೇಶ್, ವರದರಾಜು, ಪುನೀತ್, ಉಮೇಶ್ ಹಾಜರಿದ್ದರು.