Advertisement

ಪ್ರಚಾರಕ್ಕೆ ನೋಟಿನ ಮಾದರಿ ಬಳಕೆಗೆ ಆಕ್ಷೇಪ

12:26 PM Apr 26, 2018 | Team Udayavani |

ಬೆಂಗಳೂರು: ಆಮ್‌ ಆದ್ಮಿ ಪಾರ್ಟಿ ತನ್ನ ಅಭ್ಯರ್ಥಿಗಳ ಚುನಾವಣಾ ಪ್ರಚಾರಕ್ಕಾಗಿ 2000 ರೂ. ನೋಟು ಹೋಲುವ, ಅದೇ ಬಣ್ಣದ ನಕಲಿ ನೋಟಿನ ಮಾದರಿಯನ್ನು ಬಳಕೆ ಮಾಡಿಕೊಳ್ಳುತ್ತಿರುವ ವಿಷಯ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Advertisement

ನಕಲಿ ನೋಟಿನ ಒಂದು ಭಾಗದಲ್ಲಿ ಶೂನ್ಯ ಮೌಲ್ಯದೊಂದಿಗೆ, ರಾಷ್ಟ್ರಪಿತ ಗಾಂಧೀಜಿಯವರ ಹಸನ್ಮುಖೀ ಚಿತ್ರ ಮತ್ತು ಇನ್ನೊಂದು ಭಾಗದಲ್ಲಿ ಅಭ್ಯರ್ಥಿಯ ಭಾವ ಚಿತ್ರ, ವಿವರಗಳನ್ನು ಮುದ್ರಿಸುವ ಮೂಲಕ ಪಕ್ಷದ ಅಭ್ಯರ್ಥಿಗಳು ನಗರದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಕ್ಷೇತ್ರಗಳಲ್ಲಿ ಮನೆ ಮನೆಗೆ ತೆರಳಿದಾಗ ಇದೇ ನೋಟಿನ ಮಾದರಿಯ ಕತಪತ್ರ ನೀಡಿ, ಮತ ಕೇಳುತ್ತಿದ್ದಾರೆ.

ಚುನಾವಣಾ ಪ್ರಚಾರಕ್ಕೆ ಈ ರೀತಿಯಲ್ಲಿ ನೋಟಿನ ಮಾದರಿ ಬಳಕೆ ಸರಿಯಲ್ಲ ಎಂದು ಕೆಲವೆಡೆ ಮತದಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗಾಂಧೀಜಿಯವರ ಭಾವಚಿತ್ರ ಹಾಗೂ ಪಕ್ಷದ ಚಿಹ್ನೆಯನ್ನು ಮತ ಕೇಳಲು ಬಳಕೆ ಮಾಡುವುದು ಸರಿಯಲ್ಲ. ನಕಲಿ ನೋಟಿನ ಬಣ್ಣವೂ ಕೂಡ ನೈಜ ನೋಟಿನಂತೆಯೇ ಇದೆ. ಹೀಗಾಗಿ ಪಕ್ಷದ ಪ್ರಚಾರದಲ್ಲಿ ಇಂತಹ ತಂತ್ರಗಾರಿಕೆ ಬಳಸಿರುವುದು ಉತ್ತಮ ಬೆಳವಣಿಗೆಯಲ್ಲ ಎಂದು ಜನತೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನೋಟಿನ ಇನ್ನೊಂದು ಬದಿಯಲ್ಲಿ ಆಮ್‌ ಆದ್ಮಿ ಪಾರ್ಟಿ- ಕೆ.ಆರ್‌.ಪುರಂ ಎಂದು ಬರೆಯಲಾಗಿದೆ.(ಹೀಗೆ ಬೇರೆ ಬೇರೆ ವಿಧಾನಸಭಾ ಕ್ಷೇತ್ರಗಳಲ್ಲಿ, ಆಯಾ ಕ್ಷೇತ್ರಗಳ ಹೆಸರು ಮುದ್ರಿಸಲಾಗಿದೆ) ಕೆ.ಆರ್‌.ಪುರದ ಆಮ್‌ ಆದ್ಮಿ ಪಕ್ಷದ ಅಭ್ಯರ್ಥಿ ಲಿಂಗರಾಜ್‌ ಅರಸ್‌ ಅವರ ಹೆಸರು, ಬೆಂಬಲಿಸಲು ಸಂಪರ್ಕಿಸಿ ಎಂದು ಮೊಬೈಲ್‌ ಸಂಖ್ಯೆ, ಪಕ್ಷದ ಚಿಹ್ನೆ, ಅಭ್ಯರ್ಥಿಯ ಫೇಸ್‌ಬುಕ್‌, ಟ್ವೀಟ್ಟರ್‌, ಇನ್‌ ಸ್ಟಾಗ್ರಾಮ್‌ ಖಾತೆಯ ವಿವರದ ಜತೆಗೆ ಅಭ್ಯರ್ಥಿಯ ಫೋಟೋ ಕೂಡ ಮುದ್ರಿಸಲಾಗಿದೆ. ಈ ಬಗ್ಗೆ ಆಮ್‌ ಆದ್ಮಿ ರಾಜ್ಯ ಸಂಚಾಲಕ ಪ್ರಥ್ವಿ ರೆಡ್ಡಿ ಅವರನ್ನು ಕೇಳಿದರೆ, ಈ ರೀತಿ ಪ್ರಚಾರ ಮಾಡುತ್ತಿರುವ ಕುರಿತು ಮಾಹಿತಿ ಇಲ್ಲ. ಮಾಹಿತಿ ಪಡೆದು ಪ್ರತಿಕ್ರಿಯಿಸುವುದಾಗಿ ಹೇಳಿದ್ದಾರೆ.

ನೋಟಿನ ಮಾದರಿ ಕರಪತ್ರದಲ್ಲಿ ಏನಿದೆ?
ಎರಡು ಸಾವಿರ ರೂ. ಮೌಲ್ಯದ ನೋಟನ್ನೇ ಹೋಲುವ ಬದಲಿನ ನೋಟಿನಲ್ಲಿ ಗಾಂಧೀಜಿಯವರ ಭಾವ ಚಿತ್ರದ ಪಕ್ಷದಲ್ಲೇ ಆಮ್‌ಆದ್ಮಿ ಪಕ್ಷದ ಚಿನ್ನೆಯಾದ ಪೊರಕೆಯ ಚಿತ್ರವನ್ನು ಮುದ್ರಿಸಲಾಗಿದೆ. ಅದರ ಮೇಲೆ ರೂಪಾಯಿ ಚಿಹ್ನೆ ಮತ್ತು ಮೂರು ಸೊನ್ನೆಯನ್ನು ನಮೂದಿಸಿ, ಭ್ರಷ್ಟಾಚಾರ ಸಾಕು ಎಂದು ಮುದ್ರಿಸಲಾಗಿದೆ. ನೋಟುಗಳಲ್ಲಿ ವಿವಿಧ ಭಾಷೆ ಇರುವ ಜಾಗದಲ್ಲಿ “ಲಂಚ ಕೊಳ್ಳುವುದಿಲ್ಲ, ಲಂಚ ಪಡೆಯುವುದಿಲ್ಲ- ಪ್ರಮಾಣ ಮಾಡುತ್ತೇವೆ’ ಎಂಬ ವಾಕ್ಯ ಹಾಗೂ ಪಕ್ಕದಲ್ಲಿ “ಅವಕಾಶ ಕೊಡಿ ವ್ಯತ್ಯಾಸ ನೋಡಿ’ ಎಂದು ಬರೆಯಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next