ದಾವಣಗೆರೆ: ಕಾರ್ಮಿಕ ಕಾಯ್ದೆ ತಿದ್ದುಪಡಿ ವಿರೋಧಿಸಿ ಸೋಮವಾರ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ( ಎಐಟಿಯುಸಿ) ಕಾರ್ಯಕರ್ತರು ಬಳ್ಳಾರಿ ವಿಭಾಗ ಸಹಾಯಕ ಕಾರ್ಮಿಕ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಬಂಡವಾಳಶಾಹಿಗಳು, ಧನವಂತರಿಗೆ ಮಣಿದಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರ ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ 8 ಗಂಟೆಗಳ ಕೆಲಸವನ್ನು 12 ಗಂಟೆಗೆ ಹೆಚ್ಚಿಸಲು ಯತ್ನಿಸುತ್ತಿರುವುದು ಅತ್ಯಂತ ಖಂಡನೀಯ ಎಂದು ಸಂಘಟನೆ ಮುಖಂಡ ಎಚ್.ಕೆ. ರಾಮಚಂದ್ರಪ್ ಆಕ್ರೋಶ ವ್ಯಕ್ತಪಡಿಸಿದರು.
ದಿನದ 24 ಗಂಟೆಯಲ್ಲಿ 8 ಗಂಟೆ ಕೆಲಸ, 8 ಗಂಟೆ ಮನೋರಂಜನೆ, 8 ಗಂಟೆ ನಿದ್ದೆ… ಎಂದು ಬ್ರಿಟಿಷ್ ಕಾಲದಲ್ಲೇ ಹೋರಾಟ ನಡೆಸಿದರ ಪರಿಣಾಮ ಕಾರ್ಮಿಕರು ದಿನಕ್ಕೆ 8 ಗಂಟೆ ಕೆಲಸ ಮಾಡಬೇಕು ಎಂಬ ನಿಯಮ ಜಾರಿಗೆ ತರಲಾಯಿತು. ಯಾವುದೇ ವ್ಯಕ್ತಿ 8 ಗಂಟೆಗಳ ಕಾಲ ಕ್ರಿಯಾಶೀಲರಾಗಿ ಕೆಲಸ ಮಾಡಬಲ್ಲರು ಎಂಬ ವೈಜ್ಞಾನಿಕ ಆಧಾರದಲ್ಲಿ ಸಮಯ ನಿಗದಿಪಡಿಸಿದೆ ಎಂದು ತಿಳಿಸಿದರು.
ಬಿಜೆಪಿ ನೇತೃತ್ವದ ಕೇಂದ್ರ, ರಾಜ್ಯ ಸರ್ಕಾರ ಏಕಾಏಕಿ ಮತ್ತು ಅತ್ಯಂತ ತರಾತುರಿಯಲ್ಲಿ ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ಮಾಡಿ 8 ಗಂಟೆಯ ಕೆಲಸದ ಅವಧಿಯನ್ನ 12 ಗಂಟೆಗೆ ಹೆಚ್ಚಳಕ್ಕೆ ಮುಂದಾಗಿರುವುದು ಕಾರ್ಮಿಕ ವಿರೋಧಿ ನೀತಿಯಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ತಕ್ಷಣಕ್ಕೆ ಕಾರ್ಮಿಕ ಕಾಯ್ದೆ ತಿದ್ದುಪಡಿ ಪ್ರಸ್ತಾಪವನ್ನೇ ಕೈ ಬಿಡಬೇಕು. ಯಾವುದೇ ಒತ್ತಡಕ್ಕು ಮಣಿಯಬಾರದು, ಹಿಂದಿನಿಂದಲೂ ನಡೆದುಕೊಂಡು ಬರುತ್ತಿರುವಂತೆ ದಿನಕ್ಕೆ 8 ಗಂಟೆಗಳ ಕೆಲಸಕ್ಕೆ ಮಾತ್ರ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಮಹಾನಗರ ಪಾಲಿಕೆ ಮಾಜಿ ಸದಸ್ಯ ಆವರಗೆರೆ ಎಚ್.ಜಿ. ಉಮೇಶ್, ಆನಂದರಾಜ್, ಆವರಗೆರೆ ಚಂದ್ರು, ಆವರಗೆರೆ ವಾಸು, ರಂಗನಾಥ್, ಆರ್. ಸುರೇಶ್, ಎನ್.ಎಚ್. ರಾಮಪ್ಪ, ಎನ್.ಟಿ. ಬಸವರಾಜ್ ಇತರರು ಇದ್ದರು.