ಸಾಗರ: ಅಭಿವೃದ್ಧಿಯ ಹೆಸರಿನಲ್ಲಿ ಕೃಷಿ ಪ್ರದೇಶಗಳಲ್ಲಿ ಹೋಂ ಸ್ಟೇ, ರೆಸಾರ್ಟ್‌ಗಳು ಸೇರಿದಂತೆ ವಿವಿಧ ಉದ್ಯಮ ಚಟುವಟಿಕೆಗಳನ್ನುತಮ್ಮ ಭಾಗದಲ್ಲಿ ನಡೆಸುವುದನ್ನು ತೀವ್ರವಾಗಿ ವಿರೋಧಿಸಿ ಖಂಡಿಕಾ ಹಾಗೂ ಮರತ್ತೂರುಗ್ರಾಪಂ ವ್ಯಾಪ್ತಿಯ ಹಳ್ಳಿಯ ಕೃಷಿಕರು ನಿರ್ಣಯ ಸ್ವೀಕರಿಸಿದರು.
ಈ ಸಂಬಂಧ ಖಂಡಿಕಾ, ಬೆಳ್ಳೆಣ್ಣೆ, ಹುಳೇಗಾರು, ಹೊಸಳ್ಳಿ, ಅರೆಹದ, ಕೈತೋಟ,ಗಾಡಿಗೆರೆ, ಹಿಂಡೂಮನೆ ಮೊದಲಾದ ಪಶ್ಚಿಮ ಘಟ್ಟದ ವ್ಯಾಪ್ತಿಯ ವಿವಿಧ ಹಳ್ಳಿಗಳಕೃಷಿಕರು ಮರಾನ್‌ಕುಳಿಯ ಸಭಾಂಗಣದಲ್ಲಿ ಭಾನುವಾರ ಸಮಾಲೋಚನಾ ಸಭೆ ನಡೆಸಿ, ಈ ಭಾಗದ ಖುಷ್ಕಿ ಜಮೀನುಗಳನ್ನು, ಗುಡ್ಡಗಳನ್ನುಖರೀದಿಸಿ ಆಧುನಿಕ ಯಂತ್ರಗಳ ಮೂಲಕ ಸಮತಟ್ಟು ಮಾಡುವ, ರೆಸಾರ್ಟ್‌ಗಳನ್ನು ಕಟ್ಟುವ ಎಲ್ಲ ಮಾದರಿಯ ಚಟುವಟಿಕೆಗಳನ್ನು ಸಂಪೂರ್ಣವಾಗಿ ವಿರೋಧಿಸಲು, ಅಂತಹ ಸಾಧ್ಯತೆಗಳನ್ನು ತಡೆಯಲು ಕಾನೂನಾತ್ಮಕವಾಗಿ ಹಾಗೂ ಪ್ರಜಾತಾಂತ್ರಿಕವಾದ ಹೋರಾಟ ನಡೆಸಲು ನಿರ್ಧಾರ ಪ್ರಕಟಿಸಿದರು.
ಈ ಭಾಗದ ಪ್ರಮುಖ ಮರಾನ್‌ಕುಳಿಎಂ.ಜಿ. ರಾಮಚಂದ್ರ ಮಾತನಾಡಿ, ಸರ್ಕಾರದ ಕಾನೂನು, ಅವಕಾಶಗಳು ಇವೆ ಎಂದು ಸ್ಥಳೀಯ ಜನ ಸುಮ್ಮನೆ ಉಳಿದಿದ್ದರಿಂದಲೇ ಕೊಡಗಿನಲ್ಲಿ ಭೂ ಕುಸಿತದಂತ ಅಪಾಯಗಳನ್ನು ಈಗಾಗಲೇನಾವು ಗಮನಿಸಿದ್ದೇವೆ. ಈ ತರಹದ ಭೂ ಕುಸಿತ ಈಗಾಗಲೇ ನಮ್ಮ ಭಾಗದಲ್ಲೂ ಆರಂಭವಾಗಿದೆ. ನಮ್ಮ ಅಸ್ತಿತ್ವ ಉಳಿಸಿಕೊಳ್ಳಲು ನಾವು ಹೋರಾಟ ಮಾಡಲೇಬೇಕಾದ ಕಾಲ ಬಂದಿದೆ. ಜನಪರವಾದಚಳುವಳಿಯನ್ನು ಯಾವುದೇ ಆಡಳಿತ, ಜನಪ್ರತಿನಿಧಿಗಳು ನಿರ್ಲಕ್ಷಿಸುವುದಿಲ್ಲ ಎಂದರು.
ಕೃಷಿ ಭೂಮಿಯನ್ನು ಧನಾಡ್ಯರು ಖರೀದಿಸುವ ಪ್ರಕ್ರಿಯೆ ದೊಡ್ಡ ಪ್ರಮಾಣದಲ್ಲಿನಡೆಯುತ್ತಿದೆ. ಈಗಿರುವ ಕೃಷಿ ವ್ಯವಸ್ಥೆಯನ್ನು ಮುಂದುವರಿಸುವ ಹೆಜ್ಜೆಗಳಿಗೆ ವಿರೋಧ ಇಲ್ಲ.ಆದರೆ ಹಿಟಾಚಿ, ಜೆಸಿಬಿ, ಬೋರ್ ಯಂತ್ರಗಳು ನಡೆಸುವ ದಾಂಧಲೆಯಿಂದ ಇಲ್ಲಿನ ಭೂ ಸೆಲೆಗಳು ಸಡಿಲವಾಗುತ್ತವೆ. ಈಗಾಗಲೇ ವರದಹಳ್ಳಿ, ನಂದೋಡಿಯಲ್ಲಿ ಆಗಿರುವ ಅಪಾಯಗಳುನಮ್ಮ ಮುಂದಿವೆ. ನಮ್ಮ ಹೋರಾಟಕ್ಕೆ ನಾಡಿನ ಎಲ್ಲ ಪರಿಸರ ಪ್ರೇಮಿಗಳು ಬೆಂಬಲಿಸುತ್ತಾರೆ ಎಂಬ ನಿರೀಕ್ಷೆ ಇಟ್ಟುಕೊಂಡು ಚಳುವಳಿ ರೂಪಿಸಬೇಕು ಎಂದರು.
ಸ್ಥಳೀಯ ಪ್ರಮುಖ ಎಚ್.ಡಿ. ಕೃಷ್ಣಮೂರ್ತಿ ಮಾತನಾಡಿ, ನಮ್ಮ ಪ್ರದೇಶದ ನೈಜ ಪರಿಸರದ ಉಳಿವು ಕೇವಲ ನಮ್ಮ ಹಿತವನ್ನಷ್ಟೇ ಕಾಪಾಡುವುದಿಲ್ಲ. ಇದು ಪರಿಸರದ ಸಮತೋಲನದಲ್ಲಿ ದೊಡ್ಡ ಪಾತ್ರ ವಹಿಸುತ್ತದೆ.ನಮ್ಮ ಪ್ರತಿಭಟನೆಯ ಮೂಲ ಮುಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳುಹಾಗೂ ಪರಿಸರ ಕಾರ್ಯಕರ್ತರ ಬೆಂಬಲದಿಂದ ಮಲೆನಾಡಿನ ದೊಡ್ಡ ನಿಲುವಾಗಿಪ್ರತಿಬಿಂಬಿತವಾಗಬೇಕು. ಹಣ ಕೇಂದ್ರಿತವಾಗಿ ಕೃಷಿ ಖುಷ್ಕಿ ಜಮೀನುಗಳನ್ನು ಮಾರುವವರಿಗೂ ಇಲ್ಲಿನ ಬೆಳವಣಿಗೆಗಳು ಎಚ್ಚರಿಕೆಯ ಸಂದೇಶ ನೀಡುವಂತಾಗಬೇಕು ಎಂದರು.
ಗುರುಮೂರ್ತಿ ಕಾನುತೋಟ, ಹಿಂಡೂಮನೆ ತಿಮ್ಮಪ್ಪ, ಮಂಜುನಾಥ ಅರೆಹದ, ಮೋಹನ್ ಸಸರವಳ್ಳಿ, ಕಾಶಿ ಗಣಪತಿ, ಅರುಣ ಗೋಟಗಾರು, ಜಿತೇಂದ್ರ ಕಶ್ಯಪ್, ಹರ್ಷ ಹಿಂಡೂಮನೆ, ಮಂಜುನಾಥ ಪುರಪ್ಪೇಮನೆ, ಶೇಷಗಿರಿ ಹುಳೇಗಾರು, ಪ್ರೇಮನಾಥ್ ಮತ್ತಿತರರು ಇದ್ದರು.