Advertisement
ಪಠ್ಯಪುಸ್ತಕದ ದರದಲ್ಲಿ ಶೇ.20 ಹೆಚ್ಚಳವಾಗಿರುವುದರಿಂದ ಖಾಸಗಿ ಶಾಲೆಗೆ ಮಕ್ಕಳನ್ನು ಸೇರಿಸಿರುವ ಪಾಲಕ, ಪೋಷಕರಿಗೆ ಇನ್ನಷ್ಟು ಹೊರೆಯಾಗುವ ಸಾಧ್ಯತೆ ಇದೆ. ಪಠ್ಯಪುಸ್ತಕದ ಬೆಲೆಯಲ್ಲಿ ಹೆಚ್ಚಳವಾಗಿರುವುದನ್ನು ಆಡಳಿತ ಮಂಡಳಿಗಳು ಭರಿಸಲು ಸಾಧ್ಯವಿಲ್ಲ. ನೇರವಾಗಿ ಪಾಲಕ, ಪೋಷಕರ ಜೇಬಿಗೆ ಕತ್ತರಿ ಬೀಳಲಿದೆ.
Related Articles
Advertisement
ಈ ಸಂಬಂಧ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ನಿರ್ದೇಶಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇವೆ. ದರ ಹೆಚ್ಚಳ ಮಾಡಿ ಟೆಂಡರ್ ನೀಡಿರುವುದರಿಂದ ಅನಿವಾರ್ಯವಾಗಿ ಹೊಸ ಬೆಲೆಗೆ ಖರೀದಿ ಮಾಡಬೇಕಾಗುತ್ತದೆ ಎಂದು ಹೇಳುತ್ತಿದ್ದಾರೆ.
ದರ ಹೆಚ್ಚಳ ಮಾಡುವುದರಿಂದ ಪಾಲಕ, ಪೋಷಕರ ಮೇಲೆ ಹೊರೆಯಾಗಲಿದೆ. ಎಂದು ರಾಜ್ಯ ಖಾಸಗಿ ಪ್ರಾಥಮಿಕ ಹಾಗೂ ಪ್ರೌಢಶಾಲಾಡಳಿತ ಮಂಡಳಿಗಳ ಒಕ್ಕೂಟ (ಕ್ಯಾಮ್) ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಒತ್ತಾಯಿಸಿದ್ದಾರೆ. ಮಾರುಕಟ್ಟೆಯಲ್ಲಿ ಕಾಗದ ಬೆಲೆ ಹೆಚ್ಚಳವಾಗಿಲ್ಲ.
ಖಾಸಗಿ ಶಾಲೆಗಳಿಗೆ ನೇರವಾಗಿ ಪುಸ್ತಕಗಳನ್ನು ಸರಬರಾಜು ಮಾಡುವುದರಲ್ಲೂ ಪಠ್ಯಪುಸ್ತಕ ಸಂಘ ವಿಫಲವಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಕಾರ್ಯದರ್ಶಿ ಮತ್ತು ಶಿಕ್ಷಣ ಇಲಾಖೆ ಆಯುಕ್ತರಿಗೂ ಮನವಿ ಮಾಡಲಾಗಿದೆ. ಜನವರಿಯಲ್ಲಿ ಆನ್‌ಲೈನ್ ನೀಡಿದ್ದ ದರದ ಮಾಹಿತಿಗೂ ಈಗ ಕೇಳುತ್ತಿರುವ ದರಕ್ಕೂ ವ್ಯತ್ಯಾಸವಿದೆ. ದರ ಹೆಚ್ಚಳವನ್ನು ತಕ್ಷಣವೇ ವಾಪಾಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಶಿಕ್ಷಣ ಇಲಾಖೆ ಸಮರ್ಥನೆ: ಪುಸ್ತಕಗಳ ಮುದ್ರಣದ ಬಳಿಕ ತಗಲುವ ವೆಚ್ಚದ ಆಧಾರದಲ್ಲಿ ಬೆಲೆ ನಿಗದಿ ಮಾಡಲಾಗುತ್ತದೆ. ಕಾಗದ, ಉತ್ಪಾದನಾ ವೆಚ್ಚ, ಆಡಳಿತಾತ್ಮಕ ವೆಚ್ಚ ಹೆಚ್ಚಳವಾಗಿದ್ದರಿಂದ ಅನಿವಾರ್ಯವಾಗಿ 1ರಿಂದ 10ನೇ ತರಗತಿ ವಿದ್ಯಾರ್ಥಿಗಳ ಪುಸ್ತಕಗಳ ಬೆಲೆ ಕೂಡ ಹೆಚ್ಚಿಸಬೇಕಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸ್ಪಷ್ಪಪಡಿಸಿದೆ.
ಕಳೆದ ವರ್ಷದ ದರಪಟ್ಟಿ: 2018-19ರಲ್ಲಿ 1ರಿಂದ 10ನೇ ತರಗತಿಯ ಪುಸ್ತಕದ ಬೆಲೆ ಎಷ್ಟು ಎಂಬುದನ್ನು ಕರ್ನಾಟಕ ಪಠ್ಯಪುಸ್ತಕ ಸಂಘ ವೆಬ್‌ಸೈಟ್‌ನಲ್ಲಿ ಪ್ರಕಟಿಸಿತ್ತು. ನಲಿಕಲಿ ಪುಸ್ತಕ ಹೊರತುಪಡಿಸಿ ಬೇರೆಲ್ಲ ಪುಸ್ತಕಗಳಿಗೂ ನಿರ್ದಿಷ್ಟ ದರ ನಿಗದಿ ಮಾಡಿತ್ತು. ಪ್ರತಿ ಪುಸ್ತಕಕ್ಕೂ ವಿಭಿನ್ನ ಬೆಲೆ ನಿರ್ಧರಿಸಲಾಗಿತ್ತು. 17 ರೂ.ಗಳಿಂದ ಆರಂಭವಾಗಿ 65 ರೂ.ವರೆಗೂ ವಿವಿಧ ಪುಸ್ತಕದ ಬೆಲೆ ನಿಗದಿಯಾಗಿತ್ತು. ಅದರಂತೆ ಖಾಸಗಿ ಶಾಲೆಗಳಿಗೆ ವಿತರಿಸಲಾಗಿತ್ತು.