Advertisement

ಕಸ ವಿಲೇವಾರಿ ಘಟಕ ಸ್ಥಾಪನೆಗೆ ವಿರೋಧ

03:10 PM Aug 31, 2021 | Team Udayavani |

ಬಂಗಾರಪೇಟೆ: ಕಸ ವಿಲೇವಾರಿ ಘಟಕ ಸ್ಥಾಪನೆಗೆ ರೈತರು ಅಡ್ಡಿಪಡಿಸಿದ್ದರಿಂದ ಗ್ರಾಪಂ ಅಧಿಕಾರಿಗಳು ಬರೀ ಕೈಯಲ್ಲಿ ವಾಪಸ್‌ ಆದ ಘಟನೆ ಬೂದಿಕೋಟೆ ಗ್ರಾಪಂ ವ್ಯಾಪ್ತಿಯ ಶ್ರೀರಂಗಬಂಡಹಳ್ಳಿ ಗ್ರಾಮದಲ್ಲಿ ನಡೆದಿದೆ.

Advertisement

ಗ್ರಾಮಗಳಲ್ಲಿ ಸಂಗ್ರಹ ಆಗುವ ಕಸವನ್ನು ಎಲ್ಲೆಂದರಲ್ಲಿ ಎಸೆಯುವುದರಿಂದ ಸಾಂಕ್ರಾಮಿಕ ರೋಗ ಹರಡಲಿದೆ. ಹೀಗಾಗಿ ಸ್ವಚ್ಛತೆ ಕಾಪಾಡಿ, ಉತ್ತಮ ಪರಿಸರ ನಿರ್ಮಿಸಲು ಸರ್ಕಾರ ಎಲ್ಲಾ ಗ್ರಾಪಂನಿಂದಕಸ ವಿಲೇವಾರಿ ಘಟಕ ಸ್ಥಾಪಿಸಲು ಒತ್ತು ನೀಡುತ್ತಿದೆ.

ಹೋಬಳಿ ಕೇಂದ್ರವೂ ಆದ ತಾಲೂಕಿನ ಬೂದಿಕೋಟೆ ಗ್ರಾಮದಲ್ಲಿ 10 ಸಾವಿರ ಜನಸಂಖ್ಯೆ ಇದೆ. ಸಾಕಷ್ಟ ಕಸ ಸಂಗ್ರಹವಾಗುತ್ತಿದೆ. ಅದರ ವಿಲೇವಾರಿಗೆ ಘಟಕ ಸ್ಥಾಪನೆಗೆ ಶ್ರೀರಂಗಭಂಡಹಳ್ಳಿ ಸರ್ವೆ ನಂ.5ರಲ್ಲಿ 5 ಎಕರೆ ಜಾಗ ಪಂಚಾಯ್ತಿಯಿಂದ ಗುರುತಿಸಲಾಗಿತ್ತು.

ಘಟಕ ಸ್ಥಾಪಿಸಲು ಸ್ಥಳ ಸ್ವಚ್ಛ ಮಾಡಲು ಜೆಸಿಬಿ ಯಂತ್ರದ ಜೊತೆ ಗ್ರಾಪಂ ಸಿಬ್ಬಂದಿ ತೆರಳಿದಾಗ ಗ್ರಾಮದ ರೈತರು ಇದೇ ಸರ್ವೆ ನಂ.5ರಲ್ಲಿ ಹಲವು ಮಂದಿ ಭೂರಹಿತರು ಜಮೀನು ಮಂಜೂರು ಮಾಡಿಸಿಕೊಂಡು ಸಾಗುವಳಿ ಮಾಡುತ್ತಿದ್ದು, ಇನ್ನು ಕೆಲವರು ಜಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ.

ಇದನ್ನೂ ಓದಿ:ಹು-ಧಾ ಪಾಲಿಕೆಯಲ್ಲಿ ಮತ್ತೆ ಬಿಜೆಪಿಗೆ ಗೆಲುವು: ನಳಿನ್ ಕಟೀಲು ವಿಶ್ವಾಸ

Advertisement

ಬೂದಿಕೋಟೆ ಗ್ರಾಪಂ ಕಸ ವಿಲೇವಾರಿ ಘಟಕಕ್ಕೆ ಗುರುತಿಸಿರುವ ಜಾಗ ಯಾರಿಗೂ ಮಂಜೂರಾಗದಿದ್ರೂ ಕೆಲ ರೈತರು ತಮಗೆ ಮಂಜೂರಾಗಿದೆ, ಉಳುಮೆ ಮಾಡುತ್ತಿದ್ದೇವೆ. ಈಗ ಕಸಲೇವಾರಿ ಘಟಕ ಸ್ಥಾಪಿಸಿದರೆ ಜಮೀನು ಕೈ ತಪ್ಪಿ ಹೋಗಲಿದೆ ಎಂದು ಘಟಕ ಆರಂಭಿಸಲು ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಇಲ್ಲಿ ಕಸ ವಿಲೇವಾರಿ ಘಟಕ ಸ್ಥಾಪಿಸಿದರೆ ದುರ್ವಾಸನೆ, ಸಾಂಕ್ರಾಮಿಕ ರೋಗ ಹರಡಲಿದೆ
ಎಂದು ತಕರಾರು ತೆಗೆದು ಕಾಮಗಾರಿ ಕೈಗೊಳ್ಳದಂತೆ ಗ್ರಾಮಸ್ಥರು ಅಡ್ಡಿಪಡಿಸಿದರು.

ಕಸ ವಿಲೇವಾರಿ ಘಟಕ ಅಳವಡಿಸುವ ಜಾಗ ಯಾರಿಗೂ ಸರ್ಕಾರ ಮಂಜೂರು ಮಾಡಿಲ್ಲ, ವಿನಾಕಾರಣ ಕೆಲ ರೈತರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಅವರ ಬಳಿ ಮಂಜೂರಾಗಿರುವ ದಾಖಲೆ ಇದ್ದರೆ ತೋರಿಸಲಿ ಅದು ಬಿಟ್ಟು ವಿರೋಧ ಮಾಡಿ ಅಡ್ಡಿಪಡಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಅಲ್ಲದೆ, ಘಟಕ ಸ್ಥಾಪನೆ ಮಾಡುತ್ತಿರುವುದು ಸಹ ಗ್ರಾಮದಿಂದ2 ಕಿ.ಮೀ ದೂರದಲ್ಲಿದೆ. ಇದರಿಂದ ಯಾರಿಗೂ ತೊಂದರೆಯಿಲ್ಲ ಎಂದು ಪಿಡಿಒ ಜವರೇಗೌಡ ಸ್ಪಷ್ಟಪಡಿಸಿದ್ದಾರೆ. ಪ್ರಕರಣ ತಾಪಂ ಇಒ ಅವರ ಅಂಗಳಕ್ಕೆ ಹೋಗಿದ್ದು, ಅವರ ನಿರ್ಧಾರದಂತೆ ಮುಂದಿನ ಕ್ರಮಕೈಗೊಳ್ಳುವುದಾಗಿ ಗ್ರಾಪಂ ಆಡಳಿತ ಮಂಡಳಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next