Advertisement

ಬೇಂದ್ರೆ ಪರವಾನಗಿ ನವೀಕರಣಕ್ಕೆ ವಿರೋಧ

10:11 AM Jul 24, 2019 | Team Udayavani |

ಹುಬ್ಬಳ್ಳಿ: ಬೇಂದ್ರೆ ಸಾರಿಗೆಯ ರಹದಾರಿ ಪರವಾನಗಿ ನವೀಕರಿಸದಂತೆ ಒತ್ತಾಯಿಸಿ ಕೆಎಸ್‌ಆರ್‌ಟಿಸಿ ಸ್ಟಾಫ್‌ ಆ್ಯಂಡ್‌ ವರ್ಕರ್ಸ್‌ ಫೆಡರೇಶನ್‌ ನೇತೃತ್ವದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸಿಬ್ಬಂದಿ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

Advertisement

ಮಂಗಳವಾರ ಇಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಮಿನಿ ವಿಧಾನಸೌಧಕ್ಕೆ ಮೆರವಣಿಗೆ ಮೂಲಕ ಆಗಮಿಸಿ ಪ್ರತಿಭಟನೆ ನಡೆಸಿದರು. ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಯಾವುದೇ ಆಮಿಷ ಹಾಗೂ ಒತ್ತಡಗಳಿಗೆ ಮಣಿದು ಬೇಂದ್ರೆ ಸಾರಿಗೆಗೆ ರಹದಾರಿ ಪರವಾನಗಿ ನವೀಕರಣ ಅಥವಾ ತಾತ್ಕಾಲಿಕ ರಹದಾರಿ ಪರವಾನಗಿ ನೀಡಬಾರದು. ಅವಳಿ ನಗರದ ನಡುವೆ ಬಿಆರ್‌ಟಿಎಸ್‌ ಯೋಜನೆ ಅನುಷ್ಠಾನಗೊಂಡ ನಂತರ ಬೇಂದ್ರೆ ಸಾರಿಗೆ ರಹದಾರಿ ಪರವಾನಗಿ ನವೀಕರಣ ಮಾಡದಂತೆ ಸರಕಾರ ಸ್ಪಷ್ಟವಾದ ಆದೇಶ ಹೊರಡಿಸಿದೆ. ಬೇಂದ್ರೆ ಸಾರಿಗೆ ಮಾಲೀಕರು ಇತರೆ ಮಾರ್ಗದಿಂದ ನವೀಕರಣ ಪಡೆಯುವ ಕೆಲಸಕ್ಕೆ ಕೈ ಹಾಕಿದ್ದು, ಸರಕಾರ ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳದೆ ಹಿಂದಿನ ಆದೇಶ ಪಾಲನೆ ಮಾಡಬೇಕು ಎಂದು ಒತ್ತಾಯಿಸಿದರು.

ಕಾರ್ಮಿಕ ಮುಖಂಡ ಆರ್‌.ಎಫ್‌. ಕವಳಿಕಾಯಿ ಮಾತನಾಡಿ, ಬೇಂದ್ರೆ ಸಾರಿಗೆ ಬಸ್‌ಗಳು ಸಂಚಾರ ಮಾಡುತ್ತಿರುವುದರಿಂದ ಸಾರಿಗೆ ಸಂಸ್ಥೆಗೆ ನಿತ್ಯ ಸುಮಾರು ಐದು ಲಕ್ಷ ರೂ. ನಷ್ಟವಾಗುತ್ತಿದೆ. ಇತ್ತೀಚೆಗೆ ಬಿಆರ್‌ಟಿಎಸ್‌ ಸಂಸ್ತೆ 100 ಬಸ್‌ಗಳು ನಿತ್ಯ ಸುಮಾರು 800 ಟ್ರಿಪ್‌ಗ್ಳಲ್ಲಿ ಸಂಚಾರ ಮಾಡುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗಿದೆ ಎಂದರು.

ಕಾರ್ಮಿಕ ಮುಖಂಡ ಬಿ.ವಿ. ಕುಲಕರ್ಣಿ ಮಾತನಾಡಿ, ಸಾವಿರಾರು ಕೋಟಿ ರೂ. ಖರ್ಚು ಮಾಡಿ ಬಿಆರ್‌ಟಿಎಸ್‌ ಸಾರಿಗೆ ಅನುಷ್ಠಾನಗೊಳಿಸಲಾಗಿದೆ. ಇದೀಗ ಖಾಸಗಿಯವರಿಗೆ ಅನುಮತಿ ಕೊಡುವುದರಿಂದ ಸಾವಿರಾರು ಕೋಟಿ ರೂ. ಯೋಜನೆ ಸಾಕಷ್ಟು ನಷ್ಟವಾಗಲಿದೆ. ಬೇಂದ್ರೆ ಸಾರಿಗೆ ರಹದಾರಿ ನವೀಕರಣ ಮಾಡುವುದರಿಂದ ಖಾಸಗಿ ಮಾಲೀಕರಿಗೆ ಲಾಭ ಮಾಡಿಕೊಟ್ಟಂತಾಗುತ್ತದೆ. ಈಗಾಗಲೇ ನೂರಾರು ಕೋಟಿ ರೂ. ನಷ್ಟದಲ್ಲಿರುವ ಸಂಸ್ಥೆ ಮತ್ತಷ್ಟು ಆರ್ಥಿಕ ಸಮಸ್ಯೆ ಅನುಭವಿಸಲಿದ್ದು, ಸರಕಾರ, ಸಾರಿಗೆ ಪ್ರಾಧಿಕಾರ, ಸಾರಿಗೆ ಮೇಲ್ಮನವಿ ನ್ಯಾಯಾಧಿಕರಣಗಳು ಯಾವುದೇ ಕಾರಣಕ್ಕೂ ಬೇಂದ್ರೆ ಸಾರಿಗೆ ರಹದಾರಿ ಪರವಾನಗಿ ವಿಚಾರದಲ್ಲಿ ಖಾಸಗಿ ಮಾಲೀಕರನ್ನು ಬೆಂಬಲಿಸಬಾರದು ಎಂದು ಒತ್ತಾಯಿಸಿದರು. ಕಾರ್ಮಿಕ ಮುಖಂಡರಾದ ರಮೇಶ ಪಡತರೆ, ಎನ್‌.ಎ. ಖಾಜಿ, ಎಂ.ವಿ. ಭಗವತಿ, ವೈ.ಎಸ್‌. ಹುಳ್ಳಿ, ಎಸ್‌.ಬಿ. ಹಿರೇಮಠ, ಎ.ಎಲ್. ಕುಲಕರ್ಣಿ, ಬಿ.ಡಿ. ತಿಮ್ಮನಗೌಡರ, ಪ್ರತಿಭಾ ಚರಂತಿಮಠ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next