ಮಂಡ್ಯ: ಭೂ ಸುಧಾರಣೆ, ಎಪಿಎಂಸಿ ಸೇರಿದಂತೆ ವಿವಿಧ ಕಾಯ್ದೆಗಳಿಗೆ ತಿದ್ದುಪಡಿ ಮಾಡಿರುವುದನ್ನು ವಿರೋಧಿಸಿ, ಜಿಲ್ಲೆಯ ವಿವಿಧೆಡೆ ಶುಕ್ರವಾರ ರೈತ ಸಂಘದಿಂದ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಲಾಯಿತು.
ನಗರದ ಜಯಚಾಮರಾಜೇಂದ್ರ ವೃತ್ತದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು, ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದಾಗಿ ಸುಮಾರು ಅರ್ಧ ಗಂಟೆ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ರೈತರೇ ದೇಶದ ಬೆನ್ನೆಲುಬು ಎಂದೇಳುವ ಸರ್ಕಾರಗಳು, ಅದೇ ರೈತನ ಬೆನ್ನನ್ನು ಮುರಿಯುತ್ತಿವೆ. ಅನ್ನದಾತರಿಗೆ ಒಳಿತು ಮಾಡುತ್ತೇವೆ ಎಂದು ಕೇವಲ ಬೊಗಳೆ ಬಿಡುವ ಮೂಲಕ ಓಟ್ ಬ್ಯಾಂಕ್ ರಾಜ ಕಾರಣ ಮಾಡಲಾಗುತ್ತಿದೆ. ರೈತರು ಸರ್ಕಾರದ ಕಣ್ಣು ಗಳೆಂದು ಹೇಳುವುದುಕೇವಲ ಮಾತುಗಳಷ್ಟೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರ ಸಮಸ್ಯೆಗೆ ಪರಿಹಾರ ನೀಡಿ: ದೇಶದಲ್ಲಿ ರೈತರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಬರಗಾಲ, ಸರಿಯಾದ ಬೆಲೆ ಸಿಗದೇ, ದುಬಾರಿ ಹಣ ಕೊಟ್ಟು ವ್ಯವಸಾಯ ಮಾಡಿದರೂ ಕನಿಷ್ಠ ಲಾಭವೂ ಸಿಗುತ್ತಿಲ್ಲ. ಇದರಿಂದಾಗಿ ಅನ್ನದಾತ ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ. ಈ ಸಮಸ್ಯೆಗೆ ಪರಿಹಾರ ಕೊಡುವ ನಿಟ್ಟಿನಲ್ಲಿ ಕನಿಷ್ಠ ಮಟ್ಟದ ಕಾಳಜಿಯನ್ನು ತೋರದ ಸರ್ಕಾರ, ರೈತ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ. ಭೂ ಸುಧಾರಣೆ ಹಾಗೂ ಎಪಿಎಂಸಿ ಕಾಯ್ದೆಗಳಿಗೆ ತಿದ್ದುಪಡಿ ಮಾಡಬಾರದೆಂದು ರೈತರಿಂದ ತೀವ್ರ ವಿರೋಧ ವ್ಯಕ್ತ ವಾಗುತ್ತಿದೆ. ಆದರೆ, ಈ ಬಗ್ಗೆ ಕ್ಯಾರೆ ಎನ್ನುತ್ತಿಲ್ಲ. ಖಾಸಗಿ ಕಂಪನಿ ಹಾಗೂ ಶ್ರೀಮಂತರಿಗೆ ಅನುಕೂಲವಾಗು ವಂತಹ ಯೋಜನೆಗೆ ಹೆಚ್ಚಿನ ಮಹತ್ವ ನೀಡುತ್ತಿರುವುದು ದುರಂತ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆದೇಶ ಕೂಡಲೇ ರದ್ದುಗೊಳಿಸಿ: ಕೇಂದ್ರ ಮತ್ತು ರಾಜ್ಯ ಸರ್ಕಾರ ಕಾಯ್ದೆ ತಿದ್ದುಪಡಿ ಮಾಡಿರುವ ಆದೇಶವನ್ನು ಕೂಡಲೇ ರದ್ದುಗೊಳಿಸಬೇಕು. ಮೈಷುಗರ್ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿಯೇ ಶೀಘ್ರವಾಗಿ ಪ್ರಾರಂಭಿಸಬೇಕು. ಇಲ್ಲದಿದ್ದರೆ ಮುಂದಿನ ದಿನದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ರೈತಸಂಘದ ರಾಜ್ಯಾಧ್ಯಕ್ಷ ಇ.ಎನ್.ಕೃಷ್ಣ, ಹೆಮ್ಮಿಗೆ ಚಂದ್ರಶೇಖರ್, ಮಂಜು, ನಾರಾಯಣ್, ರಾಜೇಶ್, ಕರಿಗೌಡ, ಕೆಂಪೇಗೌಡ, ರಮೇಶ್ ಸೇರಿದಂತೆ ಮತ್ತಿತರರಿದ್ದರು.
ಮನವೊಲಿಕೆ: ಹೆದ್ದಾರಿ ಸಂಚಾರ ತಡೆ ನಡೆಸುತ್ತಿದ್ದ ಪ್ರತಿಭಟನಾಕಾರರ ಮನವೊಲಿಸುವಲ್ಲಿ ಡಿವೈಎಸ್‌ಪಿ ನವೀನ್‌ಕುಮಾರ್ ಯಶಸ್ವಿಯಾದರು. ಪ್ರಾರಂಭದಲ್ಲಿ ಮಾತಿನ ಚಕಮಕಿ ನಡೆದರೂ ಬಳಿಕ ರಸ್ತೆ ತಡೆ ಹಿಂಪಡೆ ಯಲಾಯಿತು. ಇನ್ನು ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಇಲಾಖೆಯಿಂದ ಸ್ಥಳದಲ್ಲಿ ಬಿಗಿ ಬಂದೋ ಬಸ್ತ್ ಮಾಡಲಾಗಿತ್ತು.