ನವದೆಹಲಿ: ಇತ್ತೀಚೆಗೆ ನಡೆದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಸೋಲಿನಿಂದ ಕಂಗೆಟ್ಟಿರುವ ವಿಪಕ್ಷಗಳು ತೀವ್ರ ಹತಾಶೆಯಿಂದ ಲೋಕಸಭಾ ಕಲಾಪಕ್ಕೆ ಅಡ್ಡಿಪಡಿಸುತ್ತಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ (ಡಿಸೆಂಬರ್ 19) ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ನನ್ನ ಜೀವನದಲ್ಲಿ ಬಂದಿದ್ದಕ್ಕಾಗಿ ಧನ್ಯವಾದಗಳು.. ದೇವರಕೊಂಡಗೆ ರಶ್ಮಿಕಾ ಸ್ವೀಟ್ ಮೆಸೇಜ್?
ಇಂದು ಬೆಳಗ್ಗೆ ನಡೆದ ಭಾರತೀಯ ಜನತಾ ಪಕ್ಷದ ಸಂಸದೀಯ ಮಂಡಳಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು ಈ ಪ್ರತಿಕ್ರಿಯೆ ನೀಡಿರುವುದಾಗಿ ವರದಿ ತಿಳಿಸಿದೆ. ಅಲ್ಲದೇ ಈ ಸಂದರ್ಭದಲ್ಲಿ ಸಂಸತ್ ಭದ್ರತಾ ಲೋಪದ ಬಗ್ಗೆ ಕಳವಳ ವ್ಯಕ್ತಪಡಿಸಿರುವುದಾಗಿ ವರದಿ ಹೇಳಿದೆ.
ಲೋಕಸಭೆಯಲ್ಲಿ ಭದ್ರತಾ ಲೋಪವಾಗಿರುವುದು ತುಂಬಾ ಗಂಭೀರವಾದ ವಿಷಯ. ಆದರೆ ವಿಪಕ್ಷಗಳ ಸಂಸದರ ನಡವಳಿಕೆ ಗಮನಿಸಿದರೆ ಭದ್ರತಾ ಲೋಪ ಎಸಗಿದವರನ್ನು ಪರೋಕ್ಷವಾಗಿ ಬೆಂಬಲಿಸಿದಂತಿದೆ ಎಂದು ಪ್ರಧಾನಿ ಮೋದಿ ಟೀಕಿಸಿದರು.
ಸಂಸತ್ ಭದ್ರತಾ ಲೋಪಕ್ಕೆ ಕೆಲವು ಪಕ್ಷದ ಧ್ವನಿ ಬೆಂಬಲಕ್ಕೆ ಎಡೆಮಾಡಿಕೊಟ್ಟಂತಿದೆ. ಇದು ಭದ್ರತಾ ಲೋಪಕ್ಕಿಂತ ಹೆಚ್ಚು ಅಪಾಯಕಾರಿಯಾಗಿದೆ ಎಂದು ಪ್ರಧಾನಿ ಮೋದಿ ದೂರಿದರು. ನಾವು 2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗ, 18 ವರ್ಷದ ಯುವ ಮತದಾರರಿಗೆ ಭ್ರಷ್ಟಾಚಾರ ಮತ್ತು ಹಗರಣಗಳ ಯುಗದ ಅನುಭವ ಇಲ್ಲವಾಗಿತ್ತು. ಅವರು ಅಭಿವೃದ್ಧಿ ಯುಗಕ್ಕೆ ಸಾಕ್ಷಿಯಾಗಿದ್ದಾರೆ ಎಂದು ಪ್ರಧಾನಿ ಹೇಳಿದರು.