ಬೆಂಗಳೂರು : ಪ್ರತಿ ವಿಚಾರದಲ್ಲಿ ವಿಶೇಷವಾಗಿ ಕೋವಿಡ್ ಸಮಯದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ನಮ್ಮ ಲಕ್ಷ್ಯ ಕೋವಿಡ್ ನಿಯಂತ್ರಣ ಮಾಡುವುದರಲ್ಲಿ ಇರಬೇಕು. ಅದು ಬಿಟ್ಟು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡಬಾರದು. ಇದನ್ನು ಡಿಕೆ ಶಿವಕುಮಾರ್ ಅರ್ಥ ಮಾಡಿಕೊಳ್ಳಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ವಿಪಕ್ಷಗಳಿಗೆ ಟಾಂಗ್ ಕೊಟ್ಟರು.
ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು,ಕಾಂಗ್ರೆಸ್ ನಿಂದ 144 ಸೆಕ್ಷನ್ ಜಾರಿಗೆ ಒತ್ತಾಯ ಕೇಳಿ ಬಂದಿದೆ.ಇವತ್ತು ರಾಜ್ಯಪಾಲರ ಸಭೆ ಇದೆ. ಇವತ್ತಿನ ಸಭೆಯಲ್ಲಿ ವಿಪಕ್ಷಗಳ ನಾಯಕರು, ಸಿಎಂ ಅವರು ಭಾಗವಹಿಸುತ್ತಾರೆ. ಈ ಸಭೆಯಲ್ಲಿ 144 ಸೆಕ್ಷನ್ ಸೇರಿದಂತೆ ಎಲ್ಲಾ ವಿಚಾರ ಚರ್ಚೆ ಆಗುತ್ತದೆಚರ್ಚೆ ಆಧಾರದಲ್ಲಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಇದನ್ನೂ ಓದಿ : ‘ಒಟಿಟಿ’ಯಲ್ಲಿ ಧೂಳೆಬ್ಬಿಸಲು ರೆಡಿಯಾದ ‘ರಾಬರ್ಟ್’
ರಾಜ್ಯಪಾಲರ ಮೀಟಿಂಗ್ ಹಿನ್ನಲೆ ರಾಜ್ಯದಲ್ಲಿ ರಾಜ್ಯಪಾಲರ ಆಳ್ವಿಕೆ ಜಾರಿಯಾಗಲಿದೆ ಎನ್ನುವ ಡಿಕೆ ಶಿವಕುಮಾರ್ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಡಿಕೆ ಶಿವಕುಮಾರ್ ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷರು. ಹೀಗೆ ಮಾತಾನಾಡುವುದು ಅವರಿಗೆ ಶೋಭೆ ತರಲ್ಲ.ಪ್ರಧಾನಿ ಮೋದಿ ಅವರ ಸೂಚನೆ ಮೇರೆಗೆ ಎಲ್ಲಾ ರಾಜ್ಯದ ರಾಜ್ಯಪಾಲರು ಸಭೆ ಮಾಡುತ್ತಿದ್ದಾರೆ. ಇದಕ್ಕೆ ರಾಜ್ಯಪಾಲರ ಆಳ್ವಿಕೆ ಅನ್ನೋದು ಸರಿನಾ? ರಾಜಸ್ಥಾನದಲ್ಲೂ ರಾಜ್ಯಪಾಲರು ಸಭೆ ಮಾಡುತ್ತಿದ್ದಾರೆ. ಅಲ್ಲಿ ರಾಜ್ಯಪಾಲರ ಆಳ್ವಿಕೆ ಅನ್ನೋದಾ? ಮಹಾರಾಷ್ಟ್ರದಲ್ಲಿ ಸಮ್ಮಿಶ್ರ ಸರ್ಕಾರ ಇದೆ. ಅಲ್ಲೂ ರಾಜ್ಯಪಾಲರು ಸಭೆ ಮಾಡ್ತಿದ್ದಾರೆ ಅಲ್ಲೂ ರಾಜ್ಯಪಾಲರ ಆಳ್ವಿಕೆ ಅನ್ನೋದು ಸರಿ ಆಗುತ್ತಾ? ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಡಿಕೆ ಶಿವಕುಮಾರ್ ಮಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೋವಿಡ್ ನಿಯಂತ್ರಣದಲ್ಲಿ ಸರ್ಕಾರ ವಿಫಲವಾಗಿದೆ ಎನ್ನುವ ಕಾಂಗ್ರೆಸ್ ಟೀಕೆಯ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಪ್ರತಿಯೊಂದರಲ್ಲೂ ವಿಪಕ್ಷಗಳು ರಾಜಕೀಯ ಮಾಡಬಾರದು. ಸರ್ಕಾರ ಸಂಪೂರ್ಣ ನಿಯಂತ್ರಣ ಕ್ರಮಗಳನ್ನು ತೆಗೆದುಕೊಂಡಿದೆ. ಈ ವೈರಸ್ ಅತ್ಯಂತ ವೇಗವಾಗಿ ಹರಡುತ್ತಿದೆ. 3 ವಾರದಲ್ಲಿ ಇಷ್ಟು ಪ್ರಮಾಣದಲ್ಲಿ ಹರಡಿದೆ. ಇಷ್ಟಾದರೂ ಸಾವಿರಾರು ಮಂದಿಗೆ ಬೆಡ್ ಒದಗಿಸಲಾಗಿದೆ ಎಂದರು.
ಜಿಲ್ಲೆಗಳಲ್ಲಿ ಕೋವಿಡ್ ಕಂಟ್ರೋಲ್ ಇದೆ. ಬೆಂಗಳೂರಿನಲ್ಲಿ ಸಮಸ್ಯೆ ಇದೆ. ಅದನ್ನ ಒಪ್ಪಿಕೊಳ್ಳುತ್ತೇನೆ. ಬೆಡ್ ಇದ್ದರು ಆಕ್ಸಿಜನ್ ಸಮಸ್ಯೆ ಇದೆ. ಈಗಾಗಲೇ ಆಕ್ಸಿಜನ್ ತಯಾರಿಕಾ ಕಂಪನಿಗಳ ಜೊತೆ ಸರ್ಕಾರ ಮಾತುಕತೆ ಮಾಡಿದೆ. ನಾನು, ಸಚಿವ ಜಗದೀಶ್ ಶೆಟ್ಟರ್, ಸುಧಾಕರ್ ಎಲ್ಲರೂ ಮಾತಾಡಿದ್ದೇವೆ. ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡೋ ಸಮಯ ಇದು. ಎಲ್ಲರೂ ಸೇರಿ ಕೆಲಸ ಮಾಡಿದ್ರು ಕಷ್ಟ ಸಾಧ್ಯ ಆಗಿದೆ. ವಿಪಕ್ಷಗಳು ಕೇವಲ ತಪ್ಪುಗಳು ಕಂಡು ಹಿಡಿಯಲು ಇರುವುದು ಅಲ್ಲ. ವ್ಯವಸ್ಥೆಯಲ್ಲಿ ಒಟ್ಟಾಗಿ ಕೆಲಸ ಮಾಡಿದ್ರೆ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ. ಇದ್ರಲ್ಲಿ ಯಾರು ರಾಜಕಾರಣ ಮಾಡುವುದು ಬೇಡ ಎಂದು ಬೊಮ್ಮಾಯಿ ತಿರುಗೇಟು ನೀಡಿದರು.