Advertisement

50 ಪ್ರತಿಶತ ಇವಿಎಂ-ವಿವಿಪ್ಯಾಟ್‌ ಪರಿಶೀಲನೆಗೆ 21 ಪಕ್ಷಗಳ ಆಗ್ರಹ

02:39 PM Apr 15, 2019 | Hari Prasad |

ನವದೆಹಲಿ: ವಿದ್ಯುನ್ಮಾನ ಮತ ಯಂತ್ರಗಳ ಕಾರ್ಯವೈಖರಿಯ ಬಗ್ಗೆ ವಿರೋಧ ಪಕ್ಷಗಳಿಗೆ ಸಮಾಧಾನವಿಲ್ಲವೆಂಬ ಅಂಶ ಎಲ್ಲರಿಗೂ ತಿಳಿದಿರುವ ವಿಚಾರವೇ. ಇವಿಎಂಗಳ ವಿಶ್ವಾಸಾರ್ಹತೆಯನ್ನು ದೃಢಪಡಿಸಲು ಚುನಾವಣಾ ಆಯೋಗವು ವಿವಿಪ್ಯಾಟ್‌ ಮೂಲಕ ಮತದಾರರಿಗೆ ತಮ್ಮ ಮತ ಸರಿಯಾದ ಅಭ್ಯರ್ಥಿಗೇ ಹೋಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವ ವ್ಯವಸ್ಥೆಯನ್ನೂ ರೂಪಿಸಿದೆ.

Advertisement

ಇನ್ನು ಈ ಹಿಂದೆ ಪ್ರತೀ ವಿಧಾನ ಸಭಾ ಕ್ಷೇತ್ರದಲ್ಲಿ ಆಯ್ದ ಒಂದು ಕ್ಷೇತ್ರದ ಇವಿಎಂ ಮತ್ತು ವಿವಿಪ್ಯಾಟ್‌ ಅನ್ನು ಪರಿಶೀಲಿಸುವ ಪರಿಪಾಠವಿತ್ತು. ಆದರೆ ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್‌ ಈ ಬಾರಿಯ ಚುನಾವಣೆಯಲ್ಲಿ ಈ ಸಂಖ್ಯೆಯನ್ನು 5 ಕ್ಕೇರಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತ್ತು.

ಆದರೆ ಇದರಿಂದಲೂ ವಿರೋಧಪಕ್ಷಗಳಿಗೆ ನೆಮ್ಮದಿಯಾದಂತೆ ತೋರುತ್ತಿಲ್ಲ. ಆದಿತ್ಯವಾರದಂದು ನವದೆಹಲಿಯಲ್ಲಿ ಈ ವಿಚಾರವಾಗಿ ಸಭೆ ಸೇರಿದ್ದ ವಿಪಕ್ಷಗಳ ಕೂಟದ ನಾಯಕರು ಈ ಚುನಾವಣೆಯಲ್ಲಿ ಬಳಸಲಾಗುತ್ತಿರುವ ಒಟ್ಟು ವಿದ್ಯುನ್ಮಾನ ಮತಯಂತ್ರಗಳು ಮತ್ತು ವಿವಿಪ್ಯಾಟ್‌ ಗಳಲ್ಲಿ ಕನಿಷ್ಠ ಅರ್ಧದಷ್ಟು ಮತಯಂತ್ರಗಳು ಹಾಗೂ ವಿವಿಪ್ಯಾಟ್‌ ಗಳಲ್ಲಿನ ಮತಗಳನ್ನು ತಾಳೆ ಹಾಕಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕೆಂದು ಮತ್ತೆ ಸುಪ್ರೀಂ ಕೋರ್ಟ್‌ ಮೊರೆ ಹೋಗಲು ತೀರ್ಮಾನಿಸಿವೆ.

50 ಪ್ರತಿಶತ ಇವಿಎಂಗಳ ವಿವಿಪ್ಯಾಟ್‌ ಗಳನ್ನು ಪರಿಶೀಲನೆಗೆ ಒಳಪಡಿಸಬೇಕೆಂದು ಆಗ್ರಹಿಸಿ 21 ರಾಜಕೀಯ ಪಕ್ಷಗಳು ಆಗ್ರಹಿಸಿವೆ ಎಂದು ತೆಲುಗು ದೇಶಂ ಪಕ್ಷದ ಮುಖಂಡ ಚಂದ್ರಬಾಬು ನಾಯ್ಡು ಅವರು ಸುದ್ದಿಗಾರರಿಗೆ ತಿಳಿಸಿದರು. ಇವಿಎಂಗಳ ಅಸಮರ್ಪಕ ಕಾರ್ಯವೈಖರಿಗೆ ಅಸಮಧಾನಗೊಂಡಿರುವ ನಾಯ್ಡು ಅವರು ಶನಿವಾರವಷ್ಟೇ ಮುಖ್ಯ ಚುನಾವಣಾ ಆಯುಕ್ತ ಸುನಿಲ್‌
ಅರೋರಾ ಅವರನ್ನು ಭೇಟಿಯಾಗಿದ್ದರು.

ಪ್ರತೀ ವಿಧಾನ ಸಭಾ ಕ್ಷೇತ್ರದಲ್ಲಿ ಅರ್ಧದಷ್ಟು ಇವಿಎಂ ಹಾಗೂ ವಿವಿಪ್ಯಾಟ್‌ ಗಳನ್ನು ಪರೀಕ್ಷಿಸಲು ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಬೇಕು ಎಂದು ಕೋರಿ ವಿರೋಧ ಪಕ್ಷಗಳು ಸವೋಚ್ಛ ನ್ಯಾಯಲಯದ ಮೆಟ್ಟಿಲೇರಲಿವೆ ಎಂದು ಕಾಂಗ್ರೆಸ್‌ ಮುಖಂಡ ಅಭಿಷೇಕ್‌ ಮನು ಸಿಂಘ್ವಿ ಅವರು ತಿಳಿಸಿದರು.

ಇವಿಎಂ ದೋಷಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗವು ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂಬುದು ನಮ್ಮ ಅಭಿಪ್ರಾಯವಾಗಿದೆ ಹಾಗೂ ಈ ನಿಟ್ಟಿನಲ್ಲಿ ನಾವು ದೇಶವ್ಯಾಪಿ ಆಂದೋಲನವನ್ನೂ ನಡೆಸಲಿದ್ದೇವೆ ಎಂದು ಸಿಂಘ್ವಿ ಇದೇ ಸಂದರ್ಭದಲ್ಲಿ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next