ಜೌನ್‌ಪುರ: ಕಾಂಗ್ರೆಸ್ ನೇತೃತ್ವದ ಐಎನ್‌ಡಿಐಎ ಒಕ್ಕೂಟದ ನಾಯಕರು ದಕ್ಷಿಣ ಭಾರತದಲ್ಲಿ ಪ್ರಚಾರ ನಡೆಸುವ ಸಂದರ್ಭದಲ್ಲಿ ಉತ್ತರ ಪ್ರದೇಶದ ಜನರ ಬಗ್ಗೆ ಅತ್ಯಂತ ತುಚ್ಛವಾಗಿ ಮಾತನಾಡಿ, ಅವಮಾನಿಸುತ್ತಿದ್ದಾರೆ. ಆದರೆ ಇಲ್ಲಿಗೆ ಬಂದು ಪ್ರಚಾರ ನಡೆಸುವ ವೇಳೆ ವಿಧೇಯತೆಯಿಂದ ಮತ ಯಾಚಿಸುತ್ತಾರೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ.
ಉತ್ತರ ಪ್ರದೇಶದ ಜೌನ್‌ಪುರದಲ್ಲಿ ಗುರುವಾರ ಆಯೋಜಿಸಲಾಗಿದ್ದ ರ್ಯಾಲಿಯಲ್ಲಿ ಮಾತನಾಡಿ, ಐಎನ್‌ಡಿಐಎ ಒಕ್ಕೂಟದ ಮಿತ್ರಪಕ್ಷಗಳಾಗಿರುವ ತಮಿಳುನಾಡಿನ ಡಿಎಂಕೆ, ಕೇರಳದ ಎಡಪಕ್ಷಗಳು, ಕರ್ನಾಟಕ ಹಾಗೂ ತೆಲಂಗಾಣದ ಕಾಂಗ್ರೆಸ್ ನಾಯಕರು ತಮ್ಮ ತಮ್ಮ ರಾಜ್ಯಗಳಲ್ಲಿ ಉತ್ತರ ಪ್ರದೇಶದವರ ವಿರುದ್ಧ ಕೆಟ್ಟ ಭಾಷೆಯಲ್ಲಿ ನಿಂದಿಸುತ್ತಾರೆ. ಜತೆಗೆ ಲಘುವಾಗಿ ಮಾತನಾಡುತ್ತಾರೆ ಎಂದಿದ್ದಾರೆ. ಸನಾತನ ಧರ್ಮದ ವಿರುದ್ಧವೂ ಅವರೆಲ್ಲರೂ ಲಘುವಾಗಿ ಮಾತನಾಡುತ್ತಾರೆ. ಹೀಗೆ ನಿಮ್ಮ ವಿರುದ್ಧ ಕೀಳಾಗಿ ಮಾತನಾಡಿದವರನ್ನು ಕ್ಷಮಿಸಿ, ಅವರಿಗೆ ಮತ ಹಾಕುತ್ತೀರಾ ಎಂದು ಮೋದಿ ಪ್ರಶ್ನಿಸಿದ್ದಾರೆ.
ಬಿಜೆಪಿಯು ಭಾರತದ ಉತ್ತರ ಹಾಗೂ ದಕ್ಷಿಣ ಭಾಗಗಳಿಗೆ ತಾರತಮ್ಯ ಮಾಡುತ್ತಿದೆ ಎಂದು ಐಎನ್‌ಡಿಐಎ ಒಕ್ಕೂಟದ ನಾಯಕರು ಆರೋಪಿಸಿದ್ದರು. ಆದರೆ ಅವರೇ ಉತ್ತರ ಪ್ರದೇಶದ ಜನರ ವಿರುದ್ಧ ಕೆಟ್ಟ ಪದಗಳನ್ನು ಬಳಸಿ ಅವಹೇಳನ ಮಾಡುತ್ತಾರೆ ಎಂದು ಪ್ರಧಾನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೃತಜ್ಞತೆಯಿಲ್ಲದ ಪ್ರಧಾನಿ: ಸಿಎಂ
ಪ್ರಧಾನಿ ಮೋದಿ ಆರೋಪಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, “ದಕ್ಷಿಣ ಭಾರತದಲ್ಲಿ ಚುನಾವಣೆ ಮುಗಿದಿದೆ ಎಂಬ ಕಾರಣಕ್ಕೆ ಕೃತಜ್ಞತೆಯಿಲ್ಲದ ಪ್ರಧಾನಿ ಮೋದಿ ಅವರು ಈಗ ಉತ್ತರ ಮತ್ತು ದಕ್ಷಿಣ ಭಾರತ ಎಂದು ವಿಭಜಿ ಸಲು ಪ್ರಯತ್ನಿಸುತ್ತಿದ್ದಾರೆ. ನಾವು ಕರ್ನಾಟಕವನ್ನು ಭಾರತ ಜನನಿಯ ತನುಜಾತೆ ಎಂದು ಪರಿಗಣಿಸಿದ್ದೇವೆ. ಆದರೆ ಮೋದಿ ಯಂತಹ ಜನರು ನಂಜು ಕಾರುತ್ತಿದ್ದಾರೆ ಎಂದಿದ್ದಾರೆ.