ಹುಬ್ಬಳ್ಳಿ: ವೈಚಾರಿಕ ಭಿನ್ನಾಭಿಪ್ರಾಯಗಳ ನಡುವೆಯೂ ರಾಜ್ಯದ ಕಾನೂನು-ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ನೋಡಿಕೊಳ್ಳುವುದು ಎಲ್ಲ ರಾಜಕೀಯ ಪಕ್ಷಗಳ ಜವಾಬ್ದಾರಿಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತಿಹಾಸ ವಿಚಾರಗಳ ಬಗ್ಗೆ ಪರ-ವಿರೋಧ ಅಭಿಪ್ರಾಯಗಳು ಇರುವುದು ಸಹಜ. ಅದನ್ನು ರಾಜಕೀಕರಣ ಮಾಡಬಾರದು. ಪ್ರಜಾಪ್ರಭುತ್ವ ಜವಾಬ್ದಾರಿ ಅರಿತು ಯಾವ ವಿಷಯ ಎಷ್ಟರ ಮಟ್ಟಿಗೆ ಚರ್ಚಿಸಬೇಕು ಎಂಬುದನ್ನು ಅರಿತು ನಡೆಯಬೇಕು. ಕಾನೂನು-ಸುವ್ಯವಸ್ಥೆ ಹಾಳುಮಾಡುವ ಕೆಲಸ ಯಾರು ಕೂಡ ಮಾಡಬಾರದು ಎಂದರು.
ಇಂದಿರಾ ಗಾಂಧಿ ಅವರು ವೀರ ಸಾವರ್ಕರ್ ಅವರನ್ನು ದೇಶದ ಶ್ರೇಷ್ಠ ಪುತ್ರ ಎಂದು ಬಣ್ಣಿಸಿದ್ದರು. ಆದರೆ, ಅದೇ ಕಾಂಗ್ರೆಸ್ ನ ಮಣಿಶಂಕರ ಅಯ್ಯರ್ ಅವರು ಸಾವರ್ಕರ್ ಅವರನ್ನು ಅವಮಾನಿಸಿದ್ದರು. ಇತಿಹಾಸದ ವಿಚಾರಗಳ ಬಗ್ಗೆ ಕೆಲವರು ನಂಬಿಕೆ ಇಡುತ್ತಾರೆ. ಕೆಲವರು ವಿರೋಧ ವ್ಯಕ್ತ ಪಡಿಸುತ್ತಾರೆ. ಹಾಗಂತ ಬೀದಿಗೆ ಎಳೆದು ತರಬಾರದು ಎಂದರು.
ಇದನ್ನೂ ಓದಿ:ರಾಹುಲ್- ಸೋನಿಯಾ ಒಪ್ಪುತ್ತಿಲ್ಲ, ಪ್ರಿಯಾಂಕಾ ಕಡೆ ಒಲವಿಲ್ಲ: ಯಾರಿಗೆ ಸಿಗಲಿದೆ ಕೈ ಗದ್ದುಗೆ?
ಕಳಸಾ ಬಂಡೂರಿ, ಮಹದಾಯಿ ಯೋಜನೆ ನೆನಗುದಿಗೆ ಬಿದ್ದಿಲ್ಲ. ಈಗಾಗಲೇ ಸಾಕಷ್ಟು ಪ್ರಗತಿಯಾಗಿದೆ. ಅರಣ್ಯ ಮತ್ತು ಪರಿಸರ ಸಂಬಂಧಿ ವಿಷಯ ಹಾಗೂ ಸಿಡಬ್ಲ್ಯುಸಿ ಅನುಮೋದನೆ ಅಂತಿಮ ಹಂತದಲ್ಲಿದೆ. ಅನುಮೋದನೆ ದೊರೆತ ಬಳಿಕ ಕಾಮಗಾರಿ ಆರಂಭಿಸಲಾಗುವುದು ಎಂದರು.