Advertisement

ಮನೆ ನಳಕ್ಕೆ ಮೀಟರ್‌: ಕಮರವಾಡಿ ಗ್ರಾಮಸ್ಥರ ವಿರೋಧ

01:06 PM Feb 15, 2022 | Team Udayavani |

ವಾಡಿ: ಕೇಂದ್ರ ಸರ್ಕಾರದ ಜಲಜೀವನ್‌ ಮಿಷನ್‌ ಅಡಿ ಮನೆ ಮನೆಗೆ ಗಂಗೆ ಯೋಜನೆಗೆ ಹಳಕರ್ಟಿ ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಸ್ಥರಿಂದ ಆಕ್ಷೇಪ ವ್ಯಕ್ತವಾದ ಬಳಿಕ ಈಗ ಕಮರವಾಡಿ ಗ್ರಾಮಸ್ಥರಿಂದ ವಿರೋಧ ಕೇಳಿಬಂದಿದೆ.

Advertisement

ಎಐಕೆಕೆಎಂಎಸ್‌ ಸಂಘಟನೆಗೆ ಸಂಯೋಜಿತ ರೈತ ಕೃಷಿ ಕಾರ್ಮಿಕ ಸಂಘಟನೆ (ಆರ್‌ಕೆಎಸ್‌) ನೇತೃತ್ವದಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಭಾರತಿ ಮಣೂರೆ ಅವರಿಗೆ ಸೋಮವಾರ ಮನವಿ ಸಲ್ಲಿಸಿರುವ ಗ್ರಾಮಸ್ಥರು, ಜಲಜೀವನ್‌ ಮಿಷನ್‌ ಕಾರ್ಯಕ್ರಮದಡಿ ಮನೆ ಮನೆಗೆ ನಳ ಸಂಪರ್ಕ ಕೊಟ್ಟು ಪ್ರತಿಯೊಂದು ನಳಕ್ಕೂ ಮೀಟರ್‌ ಅಳವಡಿಸುವುದನ್ನು ಖಂಡಿಸಿದ್ದಾರೆ.

ಆರಂಭದಲ್ಲಿ ಅಗತ್ಯವಿರುವಷ್ಟು ನೀರು ಉಚಿತವಾಗಿ ಕೊಟ್ಟು ನಂತರ ಸ್ವೀಕರಿಸಿದಷ್ಟು ನೀರಿಗೆ ಇಂತಿಷ್ಟು ಶುಲ್ಕ ಪಾವತಿಸಬೇಕು ಎಂದು ದುಬಾರಿ ದರ ನಿಗದಿಪಡಿಸುತ್ತಾರೆ. ಇದು ಗ್ರಾಮೀಣ ಪ್ರದೇಶದ ಬಡ ಕುಟುಂಬಗಳಿಗೆ ಹೊರೆಯಾಗಲಿದೆ. ಕುಡಿಯುವ ನೀರು ಕೊಡುವ ಯೋಜನೆಯಲ್ಲೂ ಸರ್ಕಾರ ವ್ಯಾಪಾರಕ್ಕಿಳಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮನವಿ ಸಲ್ಲಿಸಿ ಮಾತನಾಡಿದ ರೈತ ಕೃಷಿ ಕಾರ್ಮಿಕ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಗುಂಡಣ್ಣ ಎಂ.ಕೆ, ಪ್ರಜಾತಂತ್ರ ವ್ಯವಸ್ಥೆಯ ಸರ್ಕಾರಗಳು ಕುಡಿಯುವ ನೀರು ಜನರಿಗೆ ಉಚಿತವಾಗಿ ಸರಬರಾಜು ಮಾಡಬೇಕು. ಆದರೆ ಮನೆ ಮನೆಯ ನಳಗಳಿಗೆ ಮೀಟರ್‌ ಅಳವಡಿಸುವ ಮೂಲಕ ಜಲ ಮೂಲಗಳನ್ನೆಲ್ಲ ಖಾಸಗಿ ಕಂಪನಿಗಳಿಗೆ ಮಾರಾಟ ಮಾಡಲು ಹೊರಟಿದ್ದಾರೆ.

ಬಹುತೇಕ ಸರ್ಕಾರದ ಸಾರ್ವಜನಿಕ ಸೇವಾ ಕ್ಷೇತ್ರಗಳು ಈಗಾಗಲೇ ಉದ್ಯಮಿಪತಿಗಳ ಪಾಲಾಗಿವೆ. ಈಗ ಕುಡಿಯುವ ನೀರಿನ ಸರದಿ ಬಂದಿದೆ. ಮೇಲ್ನೋಟಕ್ಕೆ ಬಹಳ ಉತ್ತಮ ಯೋಜನೆ ಎನ್ನಿಸುತ್ತಿರುವ ಮನೆ ಮನೆಗೆ ಗಂಗೆ ಯೋಜನೆಯ ಒಳಗಡೆ ಸುಲಿಗೆಕೋರರು ಅಡಗಿ ಕುಳಿತಿದ್ದಾರೆ ಎಂದು ಕಿಡಿಕಾರಿದರು.

Advertisement

ಗ್ರಾಮೀಣ ಜನರನ್ನು ಗುರಿಯಾಗಿಟ್ಟುಕೊಂಡು ಈ ಯೋಜನೆ ಅನುಷ್ಟಾನಕ್ಕೆ ಮುಂದಾಗಿರುವ ಬಿಜೆಪಿ ಸರ್ಕಾರ, ಕಾರ್ಪೋರೇಟ್‌ ಕಂಪನಿಗಳಿಗೆ ರತ್ನಗಂಬಳಿ ಹಾಸಿ ಗ್ರಾಮೀಣ ಜನರ ಜೇಬಿಗೆ ಕೈಹಾಕಿದೆ. ಈಗಗಲೇ ಜನರು ಬೆಲೆ ಏರಿಕೆಯ ಬಿಸಿಯಿಂದ ತತ್ತರಿಸಿ ಹೋಗಿದ್ದಾರೆ. ನಿರುದ್ಯೋಗ ಸಮಸ್ಯೆ ಪೆಡಂಭೂತದಂತೆ ಬೆಳೆದು ನಿಂತಿದೆ. ಖಾಸಗೀಕರಣ ನೀತಿಯಿಂದಾಗಿ ಎಲ್ಲವೂ ಮಾರಾಟಕ್ಕಿಡಲಾಗಿದೆ. ಜನರು ಎಚ್ಚೆತ್ತು ಸರ್ಕರದ ಹುನ್ನಾರಗಳನ್ನು ಅರ್ಥ ಮಾಡಿಕೊಳ್ಳಬೇಕು. ಮೀಟರ್‌ ದಂಧೆಗೆ ಒಕ್ಕೂರಲಿನಿಂದ ವಿರೋಧಿಸಬೇಕು ಎಂದು ಕರೆ ನೀಡಿದ ರೈತ ಮುಖಂಡ ಗುಂಡಣ್ಣ, ಜನರ ವಿರೋಧದ ನಡುವೆಯೂ ನಳಗಳಿಗೆ ಮೀಟರ್‌ ಅಳವಡಿಸಲು ಮುಂದಾದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಆರ್‌ಕೆಎಸ್‌ ತಾಲೂಕು ಕಾರ್ಯದರ್ಶಿ ಮಲ್ಲಣ್ಣ ದಂಡಬಾ, ಗ್ರಾಮದ ಮುಖಂಡರಾದ ಸೂರ್ಯಕಾಂತ ಶಿರವಾಳ, ಹಣಮಂತ ತಳವಾರ, ಶರಣಗೌಡ ಶಿರವಾಳ, ವಿನೋದ ಚವ್ಹಾಣ, ಮಹ್ಮದ್‌ ಯ್ಯೂಸೂಪ್‌ ಮುಲ್ಲಾ, ಬಂಡೆಪ್ಪ ಶಿರವಾಳ, ನಿಂಗಪ್ಪ ಪೂಜಾರಿ, ದ್ಯಾವಣ್ಣ ತಳವಾರ, ಜಗನ್ನಾಥಗೌಡ ಪೊಲೀಸ್‌ ಪಾಟೀಲ, ಬಸವರಾಜ ಸುಲೇಪೇಠ ಮತ್ತಿತರರು ಮನವಿ ಪತ್ರ ಸಲ್ಲಿಸುವ ನಿಯೋಗದಲ್ಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next