Advertisement

ಅಧಿಕಾರಿ, ಸಚಿವರ ಅನುಪಸ್ಥಿತಿಗೆ ಪ್ರತಿಪಕ್ಷ ಆಕ್ಷೇಪ

11:28 PM Feb 19, 2020 | Lakshmi GovindaRaj |

ವಿಧಾನ ಪರಿಷತ್‌: ಅಪರಾಹ್ನ ಕಲಾಪ ಆರಂಭ ಆಗುತ್ತಿದ್ದಂತೆ ಸೂಚಿತ ಅಧಿಕಾರಿಗಳು ಮತ್ತು ನಿರ್ದಿಷ್ಟ ಸಂಖ್ಯೆಯಲ್ಲಿ ಸಚಿವರು ಹಾಜರಾಗದೇ ಇರುವ ಬಗ್ಗೆ ಪ್ರತಿಪಕ್ಷದವರು ಆಕ್ಷೇಪ ವ್ಯಕ್ತಪಡಿಸಿದರು.

Advertisement

ಪ್ರತಿಪಕ್ಷ ನಾಯಕ ಎಸ್‌.ಆರ್‌.ಪಾಟೀಲ್‌ರೊಂದಿಗೆ ಕಾಂಗ್ರೆಸ್‌ ಸದಸ್ಯ ಐವಾನ್‌ ಡಿಸೋಜ, ಅಧಿಕಾರಿಗಳು ಹಾಗೂ ಸಚಿವರ ಅನುಪಸ್ಥಿತಿ ಕುರಿತು ಪ್ರಸ್ತಾಪ ಮಾಡಿದರು. ಆಡಳಿತ ಪಕ್ಷದ ನಾಯಕ ಹಾಗೂ ಸಚಿವ ಕೋಟ ಶ್ರೀನಿವಾಸ ಪೂಜಾರಿ ಎಲ್ಲರೂ ಇನ್ನು ಸ್ವಲ್ಪ ಹೊತ್ತಲ್ಲಿ ಬರುತ್ತಾರೆಂದು ಸಮಜಾಯಿಷಿ ನೀಡಿದರು. ಕಲಾಪದಲ್ಲಿ ಆಡಳಿತ-ಪ್ರತಿಪಕ್ಷ ಸದಸ್ಯರ ಅನುಪಸ್ಥಿತಿಯೂ ಎದ್ದು ಕಾಣುತ್ತಿತ್ತು.

ಸಭಾಪತಿ ಪ್ರತಾಪ್‌ ಚಂದ್ರಶೆಟ್ಟಿ ಅವರು ಆರಂಭದಲ್ಲಿ ನಿಲುವಳಿ ಸೂಚನೆಯಡಿ ಮಾತನಾ ಡಲು ಕಾಂಗ್ರೆಸ್‌ ಸದಸ್ಯ ಪಿ.ಆರ್‌.ರಮೇಶ್‌ರಿಗೆ ಸೂಚಿಸಿದರು. ಹುಬ್ಬಳ್ಳಿ-ಧಾರವಾಡ ಕೆಎಲ್‌ಇ ಕಾಲೇಜಿನ ಮೂವರು ವಿದ್ಯಾರ್ಥಿಗಳು ದೇಶ ದ್ರೋಹ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಆದರೆ, ಕಾಲೇಜು ಪ್ರಾಂಶುಪಾಲರು ಇವರು ಪ್ರಧಾನಿ ಸ್ಕಾಲರ್‌ ಶಿಪ್‌ ಅಡಿ ಬಂದವರು ಎಂದು ಹೇಳಿದ್ದಾರೆ. ಇದರಿಂದ ಪ್ರಧಾನಿ ಕಾರ್ಯಾಲಯ ವಿಚಾರಣೆಗೆ ಎಳೆಯಬಾರದು ಎಂದು ವಿದ್ಯಾರ್ಥಿಗಳನ್ನು ಬಿಟ್ಟಿದ್ದಾರೆ ಎಂದು ಆರೋಪಿಸಿದರು.

ಇದೇ ಸಂದರ್ಭ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಕೆಲಕಾಲ ಆರೋಪ, ಪ್ರತ್ಯಾರೋಪ ಕೇಳಿಬಂತು. ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ ಏಕೆ ಎಂದು ಪ್ರತಿಪಕ್ಷ ಕಾಂಗ್ರೆಸ್‌, ಜೆಡಿಎಸ್‌ ಸದಸ್ಯರು ಆಗ್ರಹಿಸಿದರೆ, ಪ್ರಧಾನಿ ಕಾರ್ಯಾಲಯ ಎಲ್ಲವನ್ನೂ ಪರಿಶೀಲನೆ ಮಾಡಲು ಆಗಲ್ಲ ಎಂದು ಆಡಳಿತ ಪಕ್ಷದವರು ವಾದಿಸಿದರು.

ಅಮಾಯಕರನ್ನು ಗೋಲಿಬಾರ್‌ ಮಾಡಿ ಸಾಯಿಸಿ ದೇಶದ್ರೋಹ ಪ್ರಕರಣ ಹೇರಿದ್ದಾರೆ. ಎಷ್ಟು ಸರಿ ಎಂದು ಪ್ರತಿಪಕ್ಷ ನಾಯಕರು ಆಡಳಿತ ಪಕ್ಷದ ವಿರುದ್ಧ ಮುಗಿಬಿದ್ದರು. ನೈತಿಕ-ಅನೈತಿಕ ಎಂಬ ಮಾತು ಎರಡೂ ಕಡೆಯಿಂದ ಕೇಳಿಬಂತು. 15 ನಿಮಿಷ ಗದ್ದಲದ ನಂತರ ತಿಳಿಯಾಗುತ್ತಾ ಬಂದಾಗ ಬಿಜೆಪಿ ಸದಸ್ಯರು ಪ್ರತಿಪಕ್ಷಗಳು ಸದನದಲ್ಲಿ ಸಂಘ ಪರಿವಾರದ ಹೆಸರು ಪ್ರಸ್ತಾಪಿಸಿದ್ದು ಸರಿಯಲ್ಲ ಎಂದರು.

Advertisement

ಕಾಂಗ್ರೆಸ್‌ ಸದಸ್ಯ ನಾರಾಯಣಸ್ವಾಮಿ ಮಾತನಾಡಿ, ಮಂಗಳೂರು ಗಲಭೆ ವೇಳೆ ಪೊಲೀಸರು ಸೋಡಾ ಬಾಟಲಿ ಬಳಸಿದ್ದಾರೆಂಬ ಪದಕ್ಕೆ, ಅನಿವಾರ್ಯ ಸಂದರ್ಭ ಪ್ರಾಣ ರಕ್ಷಣೆಗೆ ಬಳಸಿದ್ದರೂ ಬಳಸಿರಬಹುದು ಎಂಬ ಹೇಳಿಕೆಯನ್ನು ಆಡಳಿತ ಪಕ್ಷದ ನಾಯಕರು ನೀಡಿದರು. ಆದರೆ ಪೊಲೀಸರ ಕೈಲಿ ಲಾಠಿ ಇರುತ್ತದೆ. ಯಾರೋ ಎಸೆದ ಸೋಡಾ ಬಾಟಲಿ ಬಳಸುವ ಅವಶ್ಯಕತೆ ಇಲ್ಲ. ಲಾಠಿಯಿಂದ ಹೊಡೆದು ಪ್ರಾಣ ರಕ್ಷಿಸಿಕೊಳ್ಳಬಹುದು.

ಇಂತಹ ಪೊಲೀಸರನ್ನು ನಾನೆಲ್ಲೂ ಕಂಡಿಲ್ಲ. ಸೋಡಾ ಬಾಟಲಿ, ಕಲ್ಲು ಬಳಕೆ ಸರಿಯಲ್ಲ, ಪೊಲೀಸರ ಮೇಲೆ ನಮಗೂ ಗೌರವಿದೆ ಎಂದರು. ಸಚಿವ ಬಿ.ಸಿ.ಪಾಟೀಲ್‌ ಮಾತನಾಡಿ, ಕೈಲಿ ಬಾಟಲಿ ಹಿಡಿದಿದ್ದರು ಎಂದಿದ್ದಾರೆ, ಹೊಡೆದಿದ್ದಾರೆ ಎಂದಿಲ್ಲ ಎಂಬ ಸಮಜಾಯಿಷಿ ನೀಡಿದರು. ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಆ ಕಡೆಯಿಂದ ಬಂದಿರುವ ಬಾಟಲಿಯನ್ನು ಕೈಯಲ್ಲಿ ಹಿಡಿದಿದ್ದಿರಬಹುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next