ಬೆಂಗಳೂರು: ಬಡವರು, ಕಾರ್ಮಿಕರ ಹಸಿವು ನೀಗಿಸುವ ಇಂದಿರಾ ಕ್ಯಾಂಟೀನ್‌ಗಳನ್ನು ಮುಚ್ಚುವ ಷಡ್ಯಂತ್ರ ಸರಕಾರದಿಂದ ನಡೆಯುತ್ತಿದೆ ಎಂದು ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದರು.
ಶುಕ್ರವಾರ ಬಜೆಟ್ ಮೇಲಿನ ಚರ್ಚೆಗೆ ಮುಖ್ಯಮಂತ್ರಿಗಳು ನೀಡಿದ ಉತ್ತರಕ್ಕೆ ಪ್ರತಿಕ್ರಿಯಿಸಿದ ಅವರು, ಬಜೆಟ್‌ನಲ್ಲಿ ಹಲವಾರು ಯೋಜನೆಗಳನ್ನು ರದ್ದುಗೊಳಿಸಲಾಗಿದೆ. ಮುಂದುವರಿದು, ಬಡವರ ಹಸಿವು ನೀಗಿಸುವ ಇಂದಿರಾ ಕ್ಯಾಂಟೀನ್‌ಗಳಿಗೆ ಉದ್ದೇಶಪೂರ್ವಕವಾಗಿ ಹಣ ನೀಡದೆ, ಮುಚ್ಚುವ ಷಡ್ಯಂತ್ರ ನಡೆಸಲಾಗಿದೆ ಎಂದು ಆರೋಪಿಸಿದರು.
ಆ ಕ್ಯಾಂಟೀನ್‌ಗಳಿಗೆ ಬರುವವರು ಅತ್ಯಂತ ಕಡುಬಡವರು, ನಿರ್ಮಾಣ ವಲಯದ ಕಾರ್ಮಿಕರು. ಅದರಲ್ಲೂ ಕೋವಿಡ್ ಅವಧಿಯಲ್ಲಿ ಈ ಕ್ಯಾಂಟೀನ್‌ಗಳು ಸಾಕಷ್ಟು ಜನರ ಹಸಿವು ನೀಗಿಸಿವೆ. ಆದರೆ, ಅವುಗಳಿಗೆ ಹಣ ನೀಡುತ್ತಿಲ್ಲ. ನೆರೆಯ ತಮಿಳುನಾಡಿನಲ್ಲಿ ಅಮ್ಮ ಕ್ಯಾಂಟೀನ್ ಇದ್ದು, ಡಿಎಂಕೆ ಅಧಿಕಾರದಲ್ಲಿದ್ದರೂ ಆ ಕ್ಯಾಂಟೀನ್‌ಗಳನ್ನು ಮುಂದುವರಿಸಿಕೊಂಡು ಹೋಗುತ್ತಿದೆ. ಆ ಮನಃಸ್ಥಿತಿ ಇಲ್ಲಿನ ಸರಕಾರವೂ ಹೊಂದಬೇಕಿದೆ ಎಂದರು.
ನಿರೀಕ್ಷಿತ ಮಟ್ಟದಲ್ಲಿ ತಲುಪುತ್ತಿಲ್ಲ :
ಇದಕ್ಕೆ ಪ್ರತಿಕ್ರಿಯಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ಇಂದಿರಾ ಕ್ಯಾಂಟೀನ್‌ಗಳಿಗೆ ನಿರ್ದಿಷ್ಟ ವರ್ಗದ 100-200 ಜನರೇ ನಿತ್ಯ ಬರುತ್ತಾರೆ. ಯಾವ ವರ್ಗಕ್ಕೆ ಅದು ಉಪಯೋಗ ಆಗಬೇಕೋ, ಅವರಿಗೆ ನಿರೀಕ್ಷಿತ ಮಟ್ಟದಲ್ಲಿ ತಲುಪುತ್ತಿಲ್ಲ ಎಂದು ಸಮಜಾಯಿಷಿ ನೀಡಿದರು. ದನಿಗೂಡಿಸಿದ ಸಚಿವ ಕೆ.ಸಿ. ನಾರಾಯಣಗೌಡ, ನಿತ್ಯ ಅದೇ 50 ಜನ ಬರುತ್ತಾರೆ. 500 ಜನರ ಬಿಲ್‌ಗಳನ್ನು ಮಾಡಿಕೊಳ್ಳುತ್ತಾರೆ. ಒಂದೇ ಕಡೆಯಿಂದ ಆಹಾರ ಪೂರೈಕೆ ಆಗುತ್ತದೆ ಎಂದರು.
ತಪ್ಪೇನು? :
50 ಜನ ಬಂದರೂ ತಪ್ಪಿಲ್ಲ. ಅವರೇನೂ ಕೋಟ್ಯಾಧಿಪತಿಗಳೂ ಅಲ್ಲ; ಐಷಾರಾಮಿ ಕಾರುಗಳಲ್ಲಿ ಬರುವುದೂ ಇಲ್ಲ. ಬಡವರಿಗೆ ಅದರಿಂದ ಅನುಕೂಲ ಆಗುತ್ತದೆ. ಅದರಲ್ಲಿ ತಪ್ಪೇನು ಎಂದು ಹರಿಪ್ರಸಾದ್ ಕೇಳಿದರು.