Advertisement
ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು 62 ಶಾಸಕರನ್ನಿಟ್ಟುಕೊಂಡು ಮುಖ್ಯಮಂತ್ರಿಯಾಗುವ ಹಗಲುಗನಸು ಕಾಣುತ್ತಿದ್ದಾರೆ. ವಿಧಾನಸಭೆಯಲ್ಲಿ ಬಹುಮತಕ್ಕೆ 113 ಸ್ಥಾನ ಅಗತ್ಯವಿದೆ. ಅವರ ಬಳಿ 62 ಶಾಸಕ ಬಲವಿದ್ದು, ಯಾವ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಪ್ರಶ್ನಿಸಿದರು.
Related Articles
ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಡಿ.9ರ ನಂತರ ಸಿಹಿ ಸುದ್ದಿ ಕೊಡುವುದಾಗಿ ಹೇಳಿದ್ದಾರೆ. ಹಾಗಾದರೆ ಯಾವ ಸಿಹಿ ಸುದ್ದಿ ಬರಲಿದೆ? ಕಾಂಗ್ರೆಸ್‌ನವರಿಗೆ ಇಂದಿಗೂ ಸಿಹಿ ಸುದ್ದಿ ಎಂದರೆ ಸಿದ್ದರಾಮಯ್ಯ ಅವರನ್ನು ಕೆಳಗಿಸುವುದು, ಮನೆಗೆ ಕಳುಹಿಸುವುದು. ಈ ಸುದ್ದಿಗಾಗಿ ಕಾಂಗ್ರೆಸ್‌ನವರು ಕಾಯುತ್ತಿದ್ದಾರೆ.
Advertisement
ಸಿದ್ದರಾಮಯ್ಯ ಅವರ ಆಡಳಿತವೆಂದರೆ ಜಾತಿ ರಾಜಕಾರಣ. ಬೇಡವೆಂದರೂ ಟಿಪ್ಪು ಜಯಂತಿ ಆಚರಿಸಿದರು. ವೀರಶೈವ- ಲಿಂಗಾಯಿತರನ್ನು ಒಡೆಯುವ ಪ್ರಯತ್ನ ಮಾಡಿದರು. ಕುಮಾರಸ್ವಾಮಿಯವರು ಅದನ್ನೇ ಮುಂದುವರಿಸಿದರು. ಡಿ. 9ರ ನಂತರ ರಾಜ್ಯದ ಜನತೆಗೆ ಶುಭ ಸುದ್ದಿ ಸಿಗಲಿದೆ ಎಂದು ಹೇಳಿದರು.
ರಾಜ್ಯದ ಆಡಳಿತ ಸ್ಥಿರತೆಗಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಮುಂದುವರಿಯಬೇಕು. ಪ್ರಧಾನಿ ನರೇಂದ್ರ ಮೋದಿಯವರು ಹಾಗೂ ಯಡಿಯೂರಪ್ಪನವರ ನಾಯಕತ್ವದಲ್ಲಿ ರಾಜ್ಯದಲ್ಲಿ ಹೊಸ ಬದಲಾವಣೆಯಾಗಲಿದೆ. ಜನರ ದಾರಿ ತಪ್ಪಿಸುತ್ತಿರುವ ಕಾಂಗ್ರೆಸ್, ಜೆಡಿಎಸ್‌ಗೆ ತಕ್ಕ ಪಾಠ ಕಲಿಸಬೇಕು. ಒಂದೆರಡು ಕಡೆ ಕಾಂಗ್ರೆಸ್, ಜೆಡಿಎಸ್ ಗೆದ್ದರೂ ಏನೂ ವ್ಯತ್ಯಾಸವಾಗದು. ಬಿಜೆಪಿ ಅಭ್ಯರ್ಥಿಗಳು ಗೆದ್ದರೆ ಸಚಿವರಾಗಲಿದ್ದಾರೆ ಎಂದು ತಿಳಿಸಿದರು.
“ಮತ್ತೆ ಮೈತ್ರಿ ಸರ್ಕಾರ ರಚನೆಯಾಗಬೇಕಾದರೆ ಸಿದ್ದರಾಮಯ್ಯ ಹಾಗೂ ನಾನು ಒಟ್ಟಿಗೆ ಸೇರಬೇಕಲ್ಲವೇ. ಹಿಂದಿನ ತಪ್ಪುಗಳಿಂದ ನಮಗೆ ತಿಳಿವಳಿಕೆ ಬಂದಿದೆ’ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹೇಳಿಕೆ ಸ್ವಾಗತಿಸಿದ ಶೋಭಾ ಕರಂದ್ಲಾಜೆ, ದೇವೇಗೌಡರು ಅನುಭವಿ ನಾಯಕರು. ಕುಮಾರಸ್ವಾಮಿಯವರು ಕಾಂಗ್ರೆಸ್‌ನೊಂದಿಗೆ ಸರ್ಕಾರ ರಚಿಸಿ ಎಷ್ಟು ಹಿಂಸೆ ಅನುಭವಿಸಿದರು ಎಂದು ಕಣ್ಣಾರೆ ಕಂಡಿದ್ದಾರೆ. ಎಲ್ಲರೊಂದಿಗೆ ಸರ್ಕಾರ, ರಾಜಕೀಯ ಮಾಡಿ ಅವರಿಗೆ ಅನುಭವವಿದ್ದು, ಅದರ ಆಧಾರದಲ್ಲಿ ಮಾತನಾಡಿದ್ದಾರೆ ಎಂದು ಪ್ರತಿಕ್ರಿಯಿಸಿದರು.
ಉಪಚುನಾವಣೆ ನಡೆದಿರುವ 15 ಕ್ಷೇತ್ರದಲ್ಲಿನ ಸರ್ಕಾರಿ ಮತ್ತು ಖಾಸಗಿ ಕಂಪೆನಿ ಉದ್ಯೋಗಿಗಳಿಗೆ ಸಂಬಳಸಹಿತ ರಜೆ ನೀಡಬೇಕು ಎಂದು ಆಯೋಗ ಸೂಚನೆ ನೀಡಿದೆ. ಸಂಬಂಧಪಟ್ಟ ಇಲಾಖೆಗಳು, ಉದ್ಯಮಿಗಳು ಸಂಬಳಸಹಿತ ರಜೆ ನೀಡಬೇಕು ಎಂದು ಮನವಿ ಮಾಡಿದರು.
ಉಪಚುನಾವಣೆ ಬಳಿಕ ಸರ್ಕಾರಕ್ಕೆ ಬಹುಮತ ಬರಲಿದೆ. ಬಿಜೆಪಿ ಬೇರೆ ಆಯ್ಕೆ ಬಗ್ಗೆ ಯೋಚಿಸುವುದಿಲ್ಲ. ಜೆಡಿಎಸ್ ಬೆಂಬಲದ ಬಗ್ಗೆಯೂ ಚರ್ಚೆ ಮಾಡುವುದಿಲ್ಲ. ಎಲ್ಲೆಡೆ ತ್ರಿಕೋನ ಸ್ಪರ್ಧೆ ಎದುರಿಸುತ್ತಿದ್ದೇವೆ. ಕೆಲವೆಡೆ ಕಾಂಗ್ರೆಸ್- ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳಬಹುದು. ಆದರೆ ಉಭಯ ಪಕ್ಷಗಳ ನಾಯಕರು ಹೊಂದಾಣಿಕೆ ಮಾಡಿಕೊಂಡರೂ ಕಾರ್ಯಕರ್ತರು ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಕಾಂಗ್ರೆಸ್, ಜೆಡಿಎಸ್ ನಾಯಕರು ಏನೇ ಗೊಂದಲ ಮೂಡಿಸಲು ಯತ್ನಿಸಿದರೂ ನಮಗೆ ಅನುಕೂಲವಾಗಲಿದೆ ಎಂದು ಹೇಳಿದರು. ರಾಜ್ಯ ಬಿಜೆಪಿ ಮಾಧ್ಯಮ ವಿಭಾಗದ ಸಂಚಾಲಕ ಎ.ಎಚ್. ಆನಂದ್, ಸಹ ವಕ್ತಾರ ಎಸ್.ಪ್ರಕಾಶ್ ಉಪಸ್ಥಿತರಿದ್ದರು.