Advertisement

BJP: ಸದನ ಹೋರಾಟದಲ್ಲಿ ವಿಪಕ್ಷ ವಿಫಲ: ಯತ್ನಾಳ್‌

11:39 PM Dec 16, 2023 | Team Udayavani |

ವಿಜಯಪುರ: ಬೆಳಗಾವಿ ಅಧಿವೇಶನದಲ್ಲಿ ವಿಪಕ್ಷದ ನಾಯಕರಾಗಿ ಜೋಡೆತ್ತುಗಳು ಸಮರ್ಥವಾಗಿ ಹೋರಾಟ ಮಾಡುವಲ್ಲಿ ವಿಫಲವಾಗಿದ್ದರಿಂದ ನಾನು ಧ್ವನಿ ಎತ್ತಿದ್ದೆ. ಖಂಡನೆ ಹೇಳಿಕೆಗೆ ಸೀಮಿತವಾದ ವರ್ತನೆಯಿಂದ ವರಿಷ್ಠರಿಂದ ಜೋಡೆತ್ತುಗಳಿಗೆ ಕರೆ ಬಂದಿದೆ ಎಂದು ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದ್ದಾರೆ.

Advertisement

ನಗರದಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ವಿರುದ್ಧದ ಸಿಬಿಐ ತನಿಖೆ ಪ್ರಕರಣವನ್ನು ಹಿಂಪಡೆದ ಸರಕಾರದ ವರ್ತನೆ ಹಾಗೂ ಬೆಳಗಾವಿಯ ಬೆತ್ತಲೆ ಪ್ರಕರಣದ ಕುರಿತು ಸದನದಲ್ಲಿ ಸರಿಯಾದ ರೀತಿಯಲ್ಲಿ ಹೋರಾಟ ಮಾಡುವಂತೆ ಆದೇಶವಿತ್ತು. ಆದರೂ ನಮ್ಮ ಪಕ್ಷದ ಜೋಡೆತ್ತುಗಳು ಅದರಲ್ಲಿ ವಿಫ‌ಲವಾಗಿವೆ ಎಂದು ವಿಪಕ್ಷದ ನಾಯಕ ಆರ್‌.ಅಶೋಕ್‌ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ನೇರವಾಗಿ ವಾಗ್ಧಾಳಿ ನಡೆಸಿದರು.

ಉತ್ತರ ಪ್ರದೇಶದ ದಲಿತ ಮಹಿಳೆ ಮೇಲಿನ ಅಮಾನುಷ ಕೃತ್ಯದಂತೆಯೇ ಬೆಳಗಾವಿಯಲ್ಲೂ ಮಹಿಳೆಯ ಬೆತ್ತಲೆ ಪ್ರಕರಣ ಅತ್ಯಂತ ಅಮಾನವೀಯ ಹಾಗೂ ಘೋರ ಕೃತ್ಯ. ಇಂಥ ವಿಷಯದಲ್ಲಿ ವಿಪಕ್ಷವಾಗಿ ಸದನದಲ್ಲಿ ಸರಕಾರದ ವಿರುದ್ಧ ಹೋರಾಡುವಲ್ಲಿ ರಾಜ್ಯದ ನಾಯಕರು ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ಕಿಡಿಕಾರಿದರು.

ವಿಪಕ್ಷ ನಾಯಕರ ಹೊರತಾಗಿಯೂ ಬಿಜೆಪಿ-ಜೆಡಿಎಸ್‌ ಶಾಸಕರು ಸದನದಲ್ಲಿ ತಮ್ಮಿಂದ ಸಾಧ್ಯವಾದಷ್ಟು ಪ್ರಾಮಾಣಿಕವಾಗಿ ಹೋರಾಟ ಮಾಡಿದ್ದಾರೆ. ನಮ್ಮ ಭಾಗದ ಜ್ವಲಂತ ಸಮಸ್ಯೆಗಳ ಬಗ್ಗೆ ಸದನದಲ್ಲಿ ಧ್ವನಿ ಎತ್ತಿದ್ದೇವೆ ಎಂದರು.

ಉತ್ತರ ಕರ್ನಾಟಕ ಭಾಗಕ್ಕೆ ಆಗಿರುವ ಅನ್ಯಾಯದ ವಿರುದ್ಧ ವಿಪಕ್ಷ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಿಗಿಂತ ಕ್ರಿಯಾಶೀಲವಾಗಿ ಧ್ವನಿ ಎತ್ತಿದ್ದು ನಾನೇ ಎಂದರು.

Advertisement

ಪತ್ರಕರ್ತರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ವಿಜಯೇಂದ್ರ ನನ್ನ ವಿರುದ್ಧ ಮಾತನಾಡಲು ಮುರುಗೇಶ ನಿರಾಣಿ ಅವರಂಥ ಕೆಲವರನ್ನು ಬಿಟ್ಟಿದ್ದಾರೆ ಎಂದು ಆರೋಪಿಸಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕರೆ ಮಾಡಿದಾಗ ಎಚ್ಚೆತ್ತ ವಿಪಕ್ಷದ ನಾಯಕರು ನಿನ್ನೆ 6.30ಕ್ಕೆ ಕರೆ ಮಾಡಿ ಎಲ್ಲಿದ್ದೀರಿ ಎಂದು ಕೇಳಿದ್ದಾರೆ. ಬರೀ ಖಂಡಿಸಿ ಟ್ವೀಟ್‌ ಹಾಕಿದರೆ ಸಾಲದು. ಪ್ರಾಮಾಣಿಕವಾಗಿ ಹೋರಾಟ ಮಾಡಬೇಕು. ಆದ್ದರಿಂದಲೇ ನಾನು ಡಿ.ಕೆ.ಶಿವಕುಮಾರ್‌ ಪ್ರಕರಣದಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದು. ಇನ್ನಾದರೂ ವಿಪಕ್ಷದ ನಮ್ಮ ನಾಯಕರು ಗಟ್ಟಿಗರಾಗಬೇಕೋ, ಬೇಡವೋ ಎಂದು ಮಾಧ್ಯಮಗಳೇ ವಿಶ್ಲೇಷಿಸಲಿ ಎಂದರು.

ಪಿಎಸ್‌ಐ ಪರೀಕ್ಷೆ ಮುಂದೂಡಿಕೆ, ಪೊಲೀಸ್‌ ವರ್ಗಾವಣೆ ವಿಚಾರದ ಕುರಿತು ಸದನದಲ್ಲಿ ಮಾತನಾಡಿದ ಬಳಿಕ ಈ ನೇಮಕಾತಿ ಪರೀಕ್ಷೆ ಮುಂದೂಡಿದ್ದಾರೆ. ಪರೀಕ್ಷೆ ಅಕ್ರಮ ತಡೆಯುವುದಕ್ಕೆ ಕಠಿನ ಕ್ರಮ ಕೈಗೊಳ್ಳುವ ಜತೆಗೆ, ಬೆಂಗಳೂರು ಮಾತ್ರವಲ್ಲದೇ ರಾಜ್ಯದ ಮೂರು ಕಡೆಗಳಲ್ಲಿ ಪರೀಕ್ಷೆ ನಡೆಸಬೇಕು.
-ಬಸನಗೌಡ ಪಾಟೀಲ್‌ ಯತ್ನಾಳ್‌, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next