ಕೊಪ್ಪಳ: ತಾಲೂಕಿನ ಕುಣಿಕೇರಿ ತಾಂಡಾದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಭಣಿಸಿದ್ದು, ಜಿಲ್ಲಾಡಳಿತ ಕೂಡಲೇ ಪರ್ಯಾಯ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿ ಸ್ಥಳೀಯ ಜನರು ಸೇರಿದಂತೆ ಕರವೇ ಯುವ ಸೈನ್ಯದಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಖಾಲಿ ಕೊಡ ಹಿಡಿದು ಪ್ರತಿಭಟನೆ ನಡೆಸಿತು.
ತಾಂಡಾದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಭಣಿಸಿದೆ. ಆದರೆ ಸಂಬಂಧಪಟ್ಟ ಯಾರೊಬ್ಬರು ಈ ಬಗ್ಗೆ ಗಮನ ನೀಡುತ್ತಿಲ್ಲ. ಸುಮಾರು 15 ವರ್ಷಗಳ ಹಿಂದೆ ಬೃಹತ್ ಟ್ಯಾಂಕ್ ನಿರ್ಮಾಣವಾಗಿದ್ದು, ಈ ಟ್ಯಾಂಕರ್ ಕಾಮಗಾರಿ ಕೂಡ ಕಳಪೆಯಾಗಿದೆ. ಟ್ಯಾಂಕ್‌ನಿಂದ ಗ್ರಾಮಕ್ಕೆ ಸರಿಯಾಗಿ ನೀರನ್ನು ಪೂರೈಸುತ್ತಿಲ್ಲ. ಸಮರ್ಪಕ ಕುಡಿವ ನೀರಿನ ವ್ಯವಸ್ಥೆ ಮಾಡದ ಕಾರಣ ಸ್ಥಳೀಯರು ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಳಲು ತೋಡಿಕೊಂಡರು.
2001-02ನೇ ಸಾಲಿನಲ್ಲಿ ಬಂದ ಅನುದಾನದಲ್ಲಿ ತುಂಗಭದ್ರಾ ಜಲಾಶಯದಿಂದ ಹೊಸಳ್ಳಿ ಮಾರ್ಗವಾಗಿ ಕರೆಯಗುಡ್ಡದ ಹತ್ತಿರ ನೀರು ಸಂಗ್ರಹ ಮಾಡಲಾಗುತ್ತಿದೆ. ಅಲ್ಲಿಂದ 3-4 ಗ್ರಾಮಕ್ಕೆ ಹಾದು ಹೋಗಿರುವ ಪೈಪ್‌ಲೈನ್ ಕಾಸನಕಂಡಿ ಮಾರ್ಗವಾಗಿ ಹಿರೇಬಗನಾಳ ರಸ್ತೆಗಳ ಮೂಲಕ ಅಲ್ಲಾನಗರ ಗ್ರಾಮಕ್ಕೆ ಹೋಗಿ ಹಾಲವರ್ತಿ ಗ್ರಾಮದ ರಸ್ತೆಯ ಮೂಲಕ ಕುಣಿಕೇರಿ ತಾಂಡಕ್ಕೆ ಕುಡಿವ ನೀರಿನ ಪೈಪ್ ಬಂದಿದೆ. ಆದರೂ ಕುಡಿವ ನೀರು ಪೂರೈಕೆಯಾಗುತ್ತಿಲ್ಲ. ಕುಣಿಕೇರಿ ತಾಂಡಾ ಗ್ರಾಮದಲ್ಲಿ ಸುಮಾರು ವರ್ಷಗಳಿಂದ ಅಂತರ್ಜಲ ಕಡಿಮೆಯಾಗಿ ಕೊಳವೆ ಬಾವಿ ಕೊರೆಸಿದರೂ ನೀರು ದೊರೆಯುತ್ತಿಲ್ಲ. ಕೂಡಲೇ ಕುಡಿವ ನೀರಿನ ಸಮಸ್ಯೆಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಸಂಘಟನೆ ಮುಖಂಡ ಶರಣಪ್ಪ ಚೌಡ್ಕಿ, ಮುಖಂಡರಾದ ನಂದಯ್ಯ ಹಿರೇಮಠ, ಹುಲಿಗೇಶ ಹಾಲವರ್ತಿ, ಮಂಜುನಾಥ ರಾಠೊಡ, ಪ್ರಕಾಶ ಬಾಳಮ್ಮನವರ, ಕೃಷ್ಣಕುಮಾರ ಮಾಳಗಿ, ಚನ್ನಪ್ಪ ಮಾಳಗಿ, ಪ್ರತಾಪ ಹ್ಯಾಟಿ, ಭರತ ರಾಠೊಡ, ರವಿ ರಾಠೊಡ, ಅನಂತ ಕುಮಾರ, ರಾಮಚಂದ್ರ ಇತರರು ಪಾಲ್ಗೊಂಡಿದ್ದರು.
•ಮಲ್ಲಿಕಾರ್ಜುನ ಮೆದಿಕೇರಿ