Advertisement

ಇಂದಿನಿಂದ ನಾಡದೋಣಿ ಮೀನುಗಾರಿಕೆಗೆ ಅವಕಾಶ

12:45 PM Apr 12, 2020 | Sriram |

ಉಡುಪಿ: ಐದು ಜನರು ದೋಣಿ ಮೂಲಕ ತೆರಳಿ ಮಾಡುವ ಸಾಂಪ್ರದಾಯಿಕ ಮೀನುಗಾರಿಕೆಗೆ ಸರಕಾರ ಎ. 12ರಿಂದ ಅವಕಾಶ ನೀಡಿದೆ. ಮೀನುಗಾರಿಕೆ ಜೆಟ್ಟಿ, ಬಂದರುಗಳ ನಿರ್ಬಂಧ ಈಗಿನಂತೆಯೇ ಮುಂದುವರಿಯಲಿದೆ. ಯಾಂತ್ರೀಕೃತ ಮೀನುಗಾರಿಕೆಗೆ ಅವಕಾಶವಿಲ್ಲ. ಸಾಂಪ್ರದಾಯಿಕ ಮೀನುಗಾರಿಕೆ ಮಾಡುವವರು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕೆಂದು ನಿರ್ದೇಶನ ನೀಡಲಾಗಿದೆ. ಇವರು ರಾತ್ರಿ ವೇಳೆ ಸಮುದ್ರಕ್ಕೆ ತೆರಳಲಿದ್ದು, ಬೆಳಗ್ಗೆ 11 ಗಂಟೆಯೊಳಗೆ ಏಲಂ ಪ್ರಕ್ರಿಯೆ ಮುಗಿಸಬೇಕೆಂದು ತಿಳಿಸಲಾಗಿದೆ.

Advertisement

ಶುಕ್ರವಾರ ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಉಡುಪಿ ಪ್ರವಾಸಿ ಮಂದಿರದಲ್ಲಿ ಸಾಂಪ್ರದಾಯಿಕ ಮೀನುಗಾರ ಮುಖಂಡರ ಜತೆ ಚರ್ಚಿಸಿದ್ದರು. ಶನಿವಾರ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಮೀನುಗಾರಿಕೆಗೆ ರಿಯಾಯಿತಿ ನೀಡುವುದಾಗಿ ಘೋಷಿಸಿದ್ದಾರೆ.

ಹೆಜಮಾಡಿ, ಪಡುಬಿದ್ರಿ, ಎರ್ಮಾಳು, ಉಚ್ಚಿಲ, ಕಾಪು ಲೈಟ್‌ಹೌಸ್‌, ಮಟ್ಟು, ಮಲ್ಪೆ ಪಡುಕರೆ, ಕುಂದಾಪುರದ ಮಡಿಕಲ್‌, ಕೊಡೇರಿ, ಮರವಂತೆ, ಕಂಚಿಗೋಡು, ಗಂಗೊಳ್ಳಿ ಲೈಟ್‌ಹೌಸ್‌, ಕೋಡಿ, ಅಳ್ವೆಗದ್ದೆಯಲ್ಲಿ ಮೀನು ಹರಾಜು ಮಾಡಲು ನಿರ್ಧರಿಸಲಾಗಿದೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಮೀನು ಮಾರಾಟ ಫೆಡರೇಶನ್‌ ಅಧ್ಯಕ್ಷ ಯಶಪಾಲ್‌ ಸುವರ್ಣ “ಉದಯವಾಣಿ’ಗೆ ತಿಳಿಸಿದರು.
ಮೀನುಗಾರಿಕೆಗೆ ಸೀಮೆಎಣ್ಣೆ ಪೂರೈಸಲು ಇಲಾಖೆಗೆ ನಿರ್ದೇಶನ ನೀಡಲಾಯಿತು. ಯಾಂತ್ರೀಕೃತ ಮೀನುಗಾರಿಕೆಯನ್ನು ಜೂನ್‌ ವರೆಗೆ ನಡೆಸಲು ಅವಕಾಶ ನೀಡುವ ಜತೆಗೆ ವಿಮಾ ಸೌಲಭ್ಯವನ್ನೂ ಮುಂದುವರಿಸಲು ಸಚಿವರಿಗೆ ಮನವಿ ಮಾಡಲಾಯಿತು. ಸಭೆಯಲ್ಲಿ ನಾಡದೋಣಿ ಮೀನುಗಾರರ ಸಂಘದ ವಲಯಾಧ್ಯಕ್ಷರಾದ ಕುಂದಾಪುರ- ಗಂಗೊಳ್ಳಿಯ ಮಂಜು ಬಿಲ್ಲವ, ಬೈಂದೂರಿನ ಆನಂದ ಖಾರ್ವಿ, ಉಡುಪಿಯ ಜನಾರ್ದನ ತಿಂಗಳಾಯ, ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಗಣೇಶಕುಮಾರ್‌ ಉಪಸ್ಥಿತರಿದ್ದರು.

ಸ್ಥಳೀಯ ಮೀನುಗಾರರಲ್ಲಿ ಹರ್ಷ
ಮಂಗಳೂರು: ನಾಡದೋಣಿಗಳು ಎ. 12ರಿಂದ ಕಡಲಿಗಿಳಿಯಲು ಸರಕಾರ ಅವಕಾಶ ನೀಡಿರುವುದು ಸ್ಥಳೀಯ ಮೀನುಗಾರರಲ್ಲಿ ಸಂತಸ ಮೂಡಿಸಿದೆ.

ಕರಾವಳಿ ಭಾಗದಲ್ಲಿ ಈ ವರ್ಷ ಮೀನುಗಾರಿಕೆ ಅಷ್ಟೊಂದು ಉತ್ತಮವಾಗಿರಲಿಲ್ಲ. ಹವಾಮಾನ ವೈಪರಿತ್ಯ, ಬಂದ್‌, ಕರ್ಫ್ಯೂ, ಲಾಕ್‌ಡೌನ್‌ ಮುಂತಾದ ಅಡೆತಡೆಗಳಿಂದಾಗಿ ಭಾರೀ ನಷ್ಟ ಉಂಟಾಗಿತ್ತು. ಲಾಕ್‌ಡೌನ್‌ ಘೋಷಣೆಯಾದಾಗಿಂದ ಸಂಪೂರ್ಣ ಮೀನುಗಾರಿಕೆ ಸ್ತಬ್ಧಗೊಂಡಿತ್ತು. ಇದೀಗ ಲಾಕ್‌ಡೌನ್‌ ಇದ್ದರೂ ಮೀನುಗಾರಿಕೆಗೆ ವಿನಾಯಿತಿ ನೀಡಿದ್ದು ಹರ್ಷ ಮೂಡಿಸಿದೆ.ದ.ಕ. ಜಿಲ್ಲೆಯಲ್ಲಿ ಸದ್ಯ ಕಾರ್ಯಾಚರಣೆ ನಡೆಸುವಂತಹ 500 ನಾಡದೋಣಿಗಳಿದ್ದು, ತಲಾ ಐದು ಮಂದಿಯಂತೆ ಸುಮಾರು 2,500 ಮೀನುಗಾರ ಕುಟುಂಬಕ್ಕೆ ಅನುಕೂಲವಾಗಲಿದೆ.

Advertisement

ಎಲ್ಲೆಲ್ಲಿ ಅವಕಾಶ?
ದ.ಕ. ಜಿಲ್ಲೆಯಲ್ಲಿ ಮೂಲ್ಕಿ, ಸಸಿಹಿತ್ಲು, ಬೈಕಂಪಾಡಿ ಪ್ರದೇಶಗಳಲ್ಲಿ ನಾಡದೋಣಿ ಮೀನುಗಾರಿಕೆ ನಡೆಸಲಾಗುತ್ತದೆ. ಬೆಳಗ್ಗೆ 5.30ರಿಂದ 8 ಗಂಟೆ ತನಕ ಮೀನುಗಾರಿಕೆ ನಡೆಯುತ್ತದೆ. ಸದ್ಯ ಮೀನು ಪ್ರಮಾಣ ಕಡಿಮೆ ಇರುವ ಕಾರಣ ಒಂದು ಸುತ್ತಿನ ಮೀನುಗಾರಿಕೆ ಮಾತ್ರ ನಡೆಯುತ್ತದೆ. ಜಿಲ್ಲಾಡಳಿತದಿಂದ ಟೋಕನ್‌ ಪಡೆದ ಕಲವು ವ್ಯಾಪಾರಿಗಳು ಮೀನು ಖರೀದಿಸುತ್ತಾರೆ. ಸಾಮಾಜಿಕ ಅಂತರ ಕಾಯ್ದುಕೊಂಡು ಮಾರಾಟ ಕಾರ್ಯ ನಡೆಯುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next