ಹನೂರು: ಕೋವಿಡ್ 19 ಲಾಕ್‌ಡೌನ್‌ನಿಂದ ಭಕ್ತರ ದರ್ಶನ ಸ್ಥಗಿತಗೊಂಡಿದ್ದ ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಸೋಮವಾರದಿಂದ ಮಲೆ ಮಾದಪ್ಪನ ದರ್ಶನಕ್ಕೆ ಸರ್ಕಾರ ಷರತ್ತುಬದ್ಧ ಅನುಮತಿ ನೀಡಿದೆ.
ದರ್ಶನಕ್ಕೆ ಸಕಲ ಸಿದ್ಧತೆ: ಕೋವಿಡ್ 19 ವೈರಾಣು ನಿಯಂತ್ರಣಕ್ಕಾಗಿ ಎರಡೂವರೆ ತಿಂಗಳಿ ನಿಂದ ಮಾದಪ್ಪನ ದರ್ಶನಕ್ಕೆ ತಡೆಯುಂಟಾಗಿತ್ತು. ಈ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಜಾತ್ರಾ ಮಹೋತ್ಸವ ಸೇರಿದಂತೆ 3 ಅಮಾವಾಸ್ಯೆ ಪೂಜಾ ಕೈಂಕರ್ಯಗಳು ಸ್ಥಗಿತಗೊಂಡಿದ್ದವು. ಇದೀಗ ಸರ್ಕಾರ ಸೋಮವಾರದಿಂದ ಭೌತಿಕ ಅಂತರ ಕಾಯ್ದುಕೊಂಡು ಮಾದಪ್ಪನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ನಾಲ್ಕು ವಿಭಾಗ: ಮಾದಪ್ಪನ ದರ್ಶನಕ್ಕಾಗಿ ರಂಗಮಂದಿರದಲ್ಲಿ ನಾಲ್ಕು ವಿಭಾಗಗಳನ್ನಾಗಿ ಮಾಡಲಾಗಿದೆ. ಪ್ರತಿ ವಿಭಾಗದಲ್ಲಿಯೂ 180 ಭಕ್ತಾದಿಗಳಿಗಷ್ಟೇ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ದರ್ಶನ ಪಡೆಯುವ ಭಕ್ತಾದಿಗಳಿಗಾಗಿ ಈಗಾಗಲೇ ವೃತ್ತಕಾರಾದ ಬಾಕ್ಸ್‌ಗಳನ್ನು ಹಾಕಿ ಸಿದ್ಧತೆ ಕೈಗೊಳ್ಳಲಾಗಿದೆ. ಇನ್ನುಳಿದಂತೆ ದೇವಾಲಯದ ಪ್ರವೇಶ ದ್ವಾರದಲ್ಲಿಯೇ ಭಕ್ತರ ಥರ್ಮಲ್ ಸ್ಕ್ರೀನಿಂಗ್ ಗಾಗಿ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ದೇವರ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಸ್ಯಾನಿಟೈಸರ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.
ಯಾವುದಕ್ಕೆ ನಿರ್ಬಂಧ: ತಮಿಳುನಾಡು ರಾಜ್ಯದಿಂದ ಬರುವ ಭಕ್ತಾದಿಗಳು, 10 ವರ್ಷದೊಳಗಿನ ಮಕ್ಕಳು ಮತ್ತು 65 ವರ್ಷ ಮೇಲ್ಪಟ್ಟ ಭಕ್ತಾದಿಗಳಿಗೆ ಮಾದಪ್ಪನ ದರ್ಶನವನ್ನು ನಿಷಿದ್ಧಗೊಳಿಸಲಾಗಿದೆ. ಇದಲ್ಲದೆ ಶ್ರೀ ಕ್ಷೇತ್ರದಲ್ಲಿ ತಂಗುವಿಕೆ, ಅನ್ನ ದಾಸೋಹವನ್ನು ನಿಷೇಧಿಸಲಾಗಿದೆ. ಒಟ್ಟಾರೆ ಕೋವಿಡ್-19ನಿಂದಾಗಿ ಮಹ ದೇ ಶ್ವರನ ದರ್ಶನ ಮಾತ್ರ ದೊರೆತಿದ್ದು, ಶ್ರೀ ಕ್ಷೇತ್ರದಲ್ಲಿ ಜರುಗುತ್ತಿದ್ದ ಹಲವಾರು ಸೇವೆಗಳಿಗೆ ಇನ್ನೂ ನಿರ್ಬಂಧ ಹೇರಲಾಗಿದೆ.
ಇದಲ್ಲದೆ ದೇವಸ್ಥಾನದಲ್ಲಿ ಲಡ್ಡು ಮಾರಾಟಕ್ಕೆ ಅವಕಾಶ ಕಲ್ಪಿಸಿದೆ. ಹಂತ ಹಂತವಾಗಿ ವಿವಿಧ ಸೇವೆಗಳನ್ನು ವಿಸ್ತರಿಸಲು ಕ್ರಮ ಕೈಗೊಳ್ಳಲಾಗಿದೆ. ಮಾದಪ್ಪನ ದರ್ಶನಕ್ಕೆ ಬರುವ ಭಕ್ತರು ಸರ್ಕಾರಿ ನಿಯಮಾವಳಿಗಳನ್ನು ಪಾಲಿಸುವ ಮೂಲಕ ದರ್ಶನ ಪಡೆದು ಸಹಕರಿಸಬೇಕು ಎಂದು ಪ್ರಾಧಿಕಾರ ಮನವಿ ಮಾಡಿದೆ.
ಉತ್ಸವಗಳು, ರಥೋತ್ಸವ ರದ್ದು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹದೇಶ್ವರನಿಗೆ ಹಿಂದಿನ ಪದ್ಧತಿಗಳಂತೆ ಉರುಳುಸೇವೆ, ಮುಡಿಸೇವೆ, ಹುಲಿ ವಾಹನೋತ್ಸವ, ಬಸವ ವಾಹನೋತ್ಸವ, ರುದ್ರಾಕ್ಷಿ ಮಂಟಪೋತ್ಸವ ಮತ್ತು ಪ್ರತಿನಿತ್ಯ 7 ಗಂಟೆಗೆ ಜರುಗುತ್ತಿದ್ದ ಬಂಗಾರದ ರಥೋತ್ಸವಕ್ಕೂ ನಿರ್ಬಂಧ ಹೇರಲಾಗಿದೆ.
* ವಿನೋದ್ ಎನ್ ಗೌಡ