Advertisement

ನೇರ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಅವಕಾಶ: ಸಿಎಂ

10:51 PM Dec 12, 2020 | mahesh |

ಬೆಂಗಳೂರು: ಪೊಲೀಸ್‌, ಅರಣ್ಯ, ಆರೋಗ್ಯ ಮೊದಲಾದ ಇಲಾಖೆಗಳ ನೇರ ನೇಮಕಾತಿಯಲ್ಲಿ ಕ್ರೀಡಾಪಟು ಗಳಿಗೆ ಶೇ. 2ರಷ್ಟು ಅವಕಾಶ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

Advertisement

ಕರ್ನಾಟಕ ಒಲಿಂಪಿಕ್‌ ಸಂಸ್ಥೆ ವತಿಯಿಂದ ನಗರದ ಒಲಿಂಪಿಕ್‌ ಭವನದಲ್ಲಿ ಆಯೋಜಿಸಿದ್ದ ಹಾಲ್‌ ಆಫ್‌ ಫೇಮ್‌ ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆ ಹಾಗೂ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ಹಲವು ಕಾರ್ಯಕ್ರಮವನ್ನು ಸರಕಾರ ಈಗಾಗಲೇ ಅನುಷ್ಠಾನಕ್ಕೆ ತಂದಿದೆ. ಪೊಲೀಸ್‌ ಇಲಾಖೆಯಲ್ಲಿ ಶೇ.2ರಷ್ಟು ನೇರ ನೇಮಕ ಮಾಡಲು ಈಗಾಗಲೇ ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಅದೇ ರೀತಿ ಸರಕಾರದ ಕೆಲವು ಇಲಾಖೆ, ಲಾಭದಾಯಕ ನಿಗಮ ಮಂಡಳಿಗಳಲ್ಲಿ ಕ್ರೀಡಾಪಟುಗಳ ನೇರ ನೇಮಕಾತಿಗೆ ಅವಕಾಶ ನೀಡುವ ಬಗ್ಗೆ ಎಲ್ಲ ರೀತಿಯ ಪ್ರಯತ್ನ ನಡೆಸಲಾಗುವುದು ಎಂದು ಭರವಸೆ ನೀಡಿದರು.

ಕ್ರೀಡಾಪಟುಗಳಿಗೆ ಪ್ರೋತ್ಸಾಹ ಅಗತ್ಯ
ರಾಜ್ಯಪಾಲ ವಿ. ಆರ್‌. ವಾಲಾ ಮಾತನಾಡಿ, ಕ್ರೀಡಾಪಟುಗಳಿಗೆ ಪ್ರೋತ್ಸಾಹ ಅತಿ ಅಗತ್ಯವಾಗಿದೆ. ಭಾರತದಲ್ಲಿ ಉತ್ತಮ ಕ್ರೀಡಾಪಟುಗಳ ಕೊರತೆ ಇಲ್ಲ. ಬದಲಾಗಿ ಅವಕಾಶಗಳ ಕೊರತೆ ಇದೆ. ಕ್ರೀಡಾಪಟುಗಳಿಗೆ ಸೂಕ್ತ ಅವಾಶಕ ಕಲ್ಪಿಸಿ, ಪ್ರೋತ್ಸಾಹಿಸುವ ಜವಾಬ್ದಾರಿ ಆಯಾ ರಾಜ್ಯ ಸರಕಾರಗಳ ಮೇಲಿದೆ ಎಂದು ಹೇಳಿದರು.

ಕ್ರೀಡೆಗೆ ಪ್ರೋತ್ಸಾಹ ನೀಡಲು ಹಣಕಾಸಿನ ಕೊರತೆ ಉಂಟಾದಾಗ ರಾಜ್ಯ ಸರಕಾರ, ಉದ್ಯಮಿಗಳು, ಕೈಗಾರಿಕೋದ್ಯಮಿಗಳು ತಮ್ಮಲ್ಲಿರುವ ಹಣದ ಶೇ.1 ಭಾಗವನ್ನು ಕ್ರೀಡೆಯ ಉನ್ನತೀಗಾಗಿ ಮೀಸಲಿಡಬೇಕು. ಅಥವಾ ಅವರಿಗೆ ಉದ್ಯೋಗಾವಕಾಶ ನೀಡಬೇಕು ಎಂದು ಸಲಹೆ ನೀಡಿದರು.

ಕ್ರಿಕೆಟ್‌ ಶ್ರೀಮಂತರ ಆಟ: ಖರ್ಗೆ
ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಕ್ರಿಕೆಟ್‌ ಶ್ರೀಮಂತರ ಆಟವಾಗಿದೆ. ಸಾಮಾನ್ಯರಿಗೆ ಸುಲಭವಾಗಿ ಸಿಗುವ ಕಬಡ್ಡಿ, ಹಾಕಿ ಮೊದಲಾದ ಕ್ರೀಡಿಗೆ ಹೆಚ್ಚಿನ ಪ್ರೋತ್ಸಾಹ ಸಿಗಬೇಕಿದೆ ಎಂದರು. ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ, ಉಪಮುಖ್ಯಮಂತ್ರಿ ಡಾ| ಸಿ.ಎನ್‌.ಅಶ್ವತ್ಥನಾರಾಯಣ, ಕರ್ನಾಟಕ ಒಲಿಂಪಿಕ್‌ ಅಸೋಸಿಯೇಶನ್‌ ಅಧ್ಯಕ್ಷ ಕೆ. ಗೋವಿಂದರಾಜ್‌, ವಿಧಾನ ಪರಿಷತ್‌ ಸದಸ್ಯ ಯು.ಬಿ.ವೆಂಕಟೇಶ್‌ ಮೊದಲಾದವರು ಇದ್ದರು.

Advertisement

ಕ್ರೀಡೆಗೆ ನೀಡುತ್ತಿರುವ ಪ್ರೋತ್ಸಾಹ ಕಡಿಮೆ ಎಂಬ ಸತ್ಯವನ್ನು ಒಪ್ಪಿಕೊಳ್ಳಬೇಕು. ಮನುಷ್ಯನ ಕ್ರಿಯಾಶೀಲತೆಗೆ ಕ್ರೀಡೆ ಅತಿ ಆವಶ್ಯಕವಾಗಿದ್ದು, ಕ್ರೀಡೆಗೆ ಮೊದಲ ಆದ್ಯತೆ ಸಿಗುವಂತಾಗಬೇಕು.
-ಡಾ| ಸಿ.ಎನ್‌.ಅಶ್ವತ್ಥ ನಾರಾಯಣ,  ಉಪ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next