Advertisement

ಇಚ್ಛಾಶಕ್ತಿ ಇಲ್ಲದೆ ಕೈತಪ್ಪುತ್ತಿರುವ ಅವಕಾಶಗಳು

01:06 PM Mar 01, 2017 | Team Udayavani |

ಮೈಸೂರು: ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆತ್ತಿದ್ದರೂ ಇಚ್ಛಾಶಕ್ತಿ ಕೊರತೆಯಿಂದಾಗಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ವಿಫ‌ಲ ವಾಗಿದ್ದು, ಇದರಿಂದ ಅನೇಕ ಅವಕಾಶಗಳು ಕೈತಪ್ಪುತ್ತಿವೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪೊ›. ಎಸ್‌.ಜಿ. ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದರು.

Advertisement

 ನಗರದ ಭಾರತೀಯ ಭಾಷಾ ಸಂಸ್ಥಾನದಲ್ಲಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ವತಿಯಿಂದ ಆಯೋಜಿಸಿದ್ದ ಎರಡು ದಿನಗಳ ಮುನ್ನೋಟ ಕಮ್ಮಟ ಹಾಗೂ ಯೋಜನೆಗಳ ಸಿದ್ಧತೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಶಾಸ್ತ್ರೀಯ ಭಾಷಾ ಮಾನದಂಡವಾದ ಕನಿಷ್ಠ ಸಾವಿರ ವರ್ಷಗಳ ಇತಿಹಾಸ, ಸ್ವಯಂಕೃತ ಸಾಹಿತ್ಯ ಕೃತಿಗಳು ಹಾಗೂ ಅನುಕರಣೆಯಾಗಿರಬೇಕೆನ್ನುವ ನಿಯಮವಿದೆ.

ಅದರಂತೆ, ಕನ್ನಡಕ್ಕೆ ತನ್ನದೇ ಪ್ರಾಚೀನ ಇತಿಹಾಸವಿದ್ದರೂ ಕೃತಿಗಳನ್ನು ಭಾಷಾಂತರಗೊಳಿಸುವಲ್ಲಿ ನಿಸ್ತೇಜಕರಾಗಿದ್ದೇವೆ. ಆದರೆ ಕನ್ನಡದಲ್ಲಿ ಪ್ರಕಟವಾದ ಕೃತಿಗಳು ಇಂಗ್ಲಿಷ್‌ಗೆ ತರ್ಜುಮೆಗೊಂಡಾಗ ಭಾಷಾ ಸಾಹಿತ್ಯ ಪರಿಣಾಮಕಾರಿಯಾಗಿ ಬೆಳೆಯಲು ಸಾಧ್ಯ. ಅಲ್ಲದೆ ಕನ್ನಡ ಭಾಷೆಯು ಎಲ್ಲಾ ಯೂನಿಕೋಡ್‌ ತಂತ್ರಾಂಶಗಳಿಗೆ ಬಳಕೆಯಾಗಬೇಕಿದ್ದು, ಇಲ್ಲವೆಂದಲ್ಲಿ ಕನ್ನಡ ಭಾಷೆ ಅಳಿದು ಹೋಗುವ ಸಾಧ್ಯತೆಯಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಜನಪ್ರತಿನಿಧಿಗಳ ನಿರ್ಲಕ್ಷ: ಭಾರತ ಒಕ್ಕೂಟ ವ್ಯವಸ್ಥೆಯಲ್ಲಿರುವುದರಿಂದ ನೀಟ್‌ (ನ್ಯಾಷನಲ್‌ ಎಲಿಜಿಬಿಲಿಟಿ ಕಮ್‌ ಎಂಟ್ರೇನ್‌ ಟೆಸ್ಟ್‌) ಎಲ್ಲ ಭಾಷೆಗಳಲ್ಲಿಯೂ ನಡೆಯಬೇಕಿತ್ತು. ಆದರೆ ಪ್ರಸಕ್ತ ಸಾಲಿನ ನೀಟ್‌ ಅನ್ನು ಕೇವಲ 8 ಭಾಷೆಗಳಲ್ಲಿ ಮಾತ್ರ ನಡೆಸಿ ಉಳಿದ ಭಾಷೆಗಳನ್ನು ನಿರ್ಲಕ್ಷಿಸಲಾಗಿದೆ. ಕೇಂದ್ರ ಸರ್ಕಾರ ಕ್ರಮ ಖಂಡಿಸಿ ಯಾವ ಸಂಸದರೂ ದನಿ ಎತ್ತಲಿಲ್ಲ.

ಇನ್ನು ಬ್ಯಾಂಕ್‌ಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕೆಂಬ ಅನೇಕ ವರ್ಷಗಳ ಬೇಡಿಕೆಗೆ ಸೊಪ್ಪು ಹಾಕದ ಬ್ಯಾಂಕ್‌ಗಳು ಇಂದಿಗೂ ವ್ಯವಹಾರವನ್ನು ಹಿಂದಿ ಹಾಗೂ ಇಂಗ್ಲಿಷ್‌ ಭಾಷೆಯಲ್ಲಿಯೇ ನಡೆಸುತ್ತಿವೆ. ಜೊತೆಗೆ ಗ್ರಾಮೀಣ ಭಾಗದ ಬ್ಯಾಂಕ್‌ಗಳಲ್ಲಿ ಅನ್ಯಭಾಷಿಗರೇ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿರುವುದು ಭಾಷಾ ಸಂಘರ್ಷಕ್ಕೆ ಕಾರಣವಾಗುತ್ತಿದೆ. ಇದರಿಂದ ಬೇಸತ್ತ ಭಾಷಾ ಪ್ರೇಮಿಗಳು ಮುಂದೆ ಬ್ಯಾಂಕ್‌ಗಳ ಮೇಲೆ ದಾಳಿ ನಡೆಸಿದರೂ ಅಚ್ಚರಿಯೇನಿಲ್ಲ ಎಂದರು.

Advertisement

ಅನೇಕ ಹುದ್ದೆಗಳು ಖಾಲಿ: ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರದ ಮಾಜಿ ನಿರ್ದೇಶಕ ಡಾ. ಎಚ್‌.ಎಂ. ಮಹೇಶ್ವರಯ್ಯ ಮಾತನಾಡಿ, ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದಲ್ಲಿ 37 ಹುದ್ದೆಗಳಿದ್ದು, ಅವುಗಳ ಪೈಕಿ 11 ಡಾಕ್ಟರ್‌ ಫೆಲೋ, 9 ಸಹಾಯಕ ನಿರ್ದೇಶಕ, 2 ಹಿರಿಯ ಸಹಾಯಕ ನಿರ್ದೇಶಕ, 5 ಪೋಸ್ಟ್‌ ಡಾಕ್ಟರ್‌ ಹುದ್ದೆಗಳಲ್ಲಿ ಖಾಲಿ ಇವೆ ಎಂದು ತಿಳಿಸಿದರು.

ಕನ್ನಡ ಸಂಶೋಧನೆ ನಡೆಸುವ ವಿದೇಶದಲ್ಲಿರುವ ಭಾರತೀಯ ಸಂಜಾತ, ವಿದೇಶದಲ್ಲಿರುವ ವಿದೇಶಿಗ ಮತ್ತು ಕನ್ನಡ ಸಂಶೋಧಕರಿಗೆ ತಲಾ 5 ಲಕ್ಷ, 10 ಮಂದಿ ಯುವ ಸಂಶೋಧಕರಿಗೆ ತಲಾ 1 ಲಕ್ಷ ನಗದು ಬಹುಮಾನ ನೀಡಿ ಗೌರವಿಸಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಹಿರಿಯ ಸಂಶೋಧಕ ಪೊ›. ಟಿ.ವಿ. ವೆಂಕಟಾಚಲಶಾಸ್ತ್ರೀ, ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಪೊ›. ಪಿ.ಕೆ. ಖಂಡೋಬಾ ಇನ್ನಿತರರು ಹಾಜರಿದ್ದರು.

ಸ್ಥಳಾಂತರ ಚರ್ಚೆ ಅಂತ್ಯ
ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕ ಪೊ›. ಡಿ.ಜಿ. ರಾವ್‌ ಮಾತನಾಡಿ, ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವನ್ನು ಬೆಂಗಳೂರಿಗೆ ಸ್ಥಳಾಂತರಿಸದೆ ಮೈಸೂರಿನಲ್ಲಿಯೇ ಮುಂದುವರಿಸಲು ಸರ್ಕಾರ ನಿರ್ಧರಿಸಿದ್ದು, ಸದ್ಯ ಮೈಸೂರು ವಿವಿ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಕೇಂದ್ರವನ್ನು ಆರಂಭಿಸಿ ನಂತರ ಹೊಸ ಜಾಗದಲ್ಲಿ ಕಟ್ಟಡ ನಿರ್ಮಿಸಲಾಗುವುದು. ಕೇಂದ್ರದ ಎಲ್ಲ 5 ಶಾಖೆಗಳನ್ನು ಘಟಕಗಳನ್ನಾಗಿ ಪರಿವರ್ತಿಸಿ ಉತ್ಕೃಷ್ಟ ಯೋಜನೆಗಳನ್ನಾಗಿ ತಯಾರಿಸ ಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next